SUDDIKSHANA KANNADA NEWS/ DAVANAGERE/ DATE:14-03-2025
ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ವಿಶೇಷವಾಗಿ ಯುವಜನತೆಯನ್ನು ರಂಗಭೂಮಿಯತ್ತ ಆಕರ್ಷಿಸುವ ಕಾರ್ಯಕ್ರಮಗಳ ಭಾಗವಾಗಿ, ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ‘ಕಾಲೇಜು ರಂಗೋತ್ಸವ 2024-25’ ಮತ್ತು ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟವನ್ನು ಆಯೋಜಿಸಿದೆ.
ಮೂರನೇ ಹಂತದ ಕಾಲೇಜು ರಂಗೋತ್ಸವಕ್ಕಾಗಿ ಕಳೆದ ಒಂದು ತಿಂಗಳಿಂದ ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ದಾವಣಗೆರೆ, ಕೋಲಾರ ಮತ್ತು ಬೆಂಗಳೂರು ಮೂರು ಜಿಲ್ಲೆಗಳ ಮೂರು ಕಾಲೇಜುಗಳನ್ನು ಗುರುತಿಸಿ, ಆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಡೆಸಿ, ಪ್ರತಿ ಕಾಲೇಜುಗಳಿಗೆ ನಾಟಕವನ್ನು ನಿರ್ದೇಶಿಸಿ, ಮಾ.15 ರಿಂದ 17 ರವರೆಗೆ ಪ್ರತಿದಿನ ಮಧ್ಯಾಹ್ನ 3.00 ಮತ್ತು ಸಂಜೆ 6.30ಕ್ಕೆ ರಂಗಾಯಣ, ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.15 ರಂದು ಶನಿವಾರ ದಾವಣಗೆರ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಕಲ್ಮಠ ಎಸ್.ಜೆ.ವಿ.ಪಿ. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಅಭಿನಯದ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ರಚನೆಯ, ಮಹಾಂತೇಶ್ ಆದಿಮ ನಿರ್ದೇಶನದ “ಧರಣಿಮಂಡಲ”ನಾಟಕ ಏರ್ಪಡಿಸಲಾಗಿದೆ.
ಮಾ.16 ರಂದು ಭಾನುವಾರ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಅಭಿನಯದ ಡಾ.ಹೆಚ್.ಎಸ್. ವೆಂಕಟೇಶ್ಮೂರ್ತಿ ರಚನೆಯ ವಿದ್ಯಾರಾಣಿ ಎ.ಎನ್. ನಿರ್ದೇಶನದ ‘ಸುಣ್ಣದ ಸುತ್ತ’ ನಾಟಕ ಏರ್ಪಡಿಸಲಾಗಿದೆ.
ಮಾ.17 ರಂದು ಸೋಮವಾರ ಬೆಂಗಳೂರಿನ ಶ್ರೀ ದಕ್ಷ ಅಕಾಡೆಮಿ ವಿದ್ಯಾರ್ಥಿಗಳ ಅಭಿನಯದ ಶ್ರೀ ಮಹಾಂತೇಶ್ ರಾಮದುರ್ಗ ರಚನೆಯ ಶಿಲ್ಪಾಶೆಟ್ಟಿ ಉಡುಪಿ ನಿರ್ದೇಶನದ “ಸೋರುತಿಹುದು ಸಂಬಂಧ” ನಾಟಕ ಏರ್ಪಡಿಸಲಾಗಿದೆ.
ಮಾ.15 ರಿಂದ 17 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 5.00 ರವರೆಗೆ ನೋಂದಣಿಯಾಗಿರುವ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ನಡೆಯಲಿರುವ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಣ್ಣಪ್ಪ ಒಂಟಿಮಾಳಗಿ ಹಾಗೂ ಸತೀಶ್ ಕುಮಾರ್ ಕೆ. ಇವರು ಭಾಗವಹಿಸಲಿದ್ದಾರೆ. ಮಾ. 17 ರಂದು ಸಂಜೆ 6.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಟಿಕೆಟ್ ದರ ಒಬ್ಬರಿಗೆ ಒಂದು ಪ್ರದರ್ಶನಕ್ಕೆ ರೂ.30/- ಗಳನ್ನು ನಿಗದಿ ಮಾಡಲಾಗಿದೆ. ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಕೋರಿದ್ದಾರೆ.