SUDDIKSHANA KANNADA NEWS/ DAVANAGERE/ DATE:07-11-2023
ಹಾಸನ: ಹಾಸನದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
ಆಹಾರ ನಿಗಮದ ಗೋದಾಮುಗಳಿಂದ ಪಡಿತರ ಸಮರ್ಪವಾಗಿ ಬಿಡುಗಡೆ ಆಗುತ್ತಿಲ್ಲ ಎನ್ನುವ ಶಾಸಕರ ದೂರಿಗೆ ಗರಂ ಆದ ಸಿಎಂ, ತಕ್ಷಣ ಸ್ಥಳ ಪರಿಶೀಲನೆ ಮಾಡಿ, ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎನ್ನುವ ಸೂಚನೆಯನ್ನು ಆಹಾರ ಇಲಾಖೆಯ ಅಧಿಕಾರಿಗಳಿಗೆ ನೀಡಿ ತಕ್ಷಣ ಸರಿಪಡಿಸದಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬರಗಾಲದ ಬಗ್ಗೆ ಎರಡನೇ ಹಂತದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಜಾನುವಾರುಗಳಿಗೆ 24 ತಿಂಗಳಿಗೆ ಆಗುವಷ್ಟು ಮೇವಿನ ಸಂಗ್ರಹ ಇದೆ. ಜನ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಗೋವುಗಳ ಮೇವು ಬೆಳೆಯುವುದಕ್ಕೂ ಹಣ ನೀಡಿದ್ದೇವೆ. ಜನ-ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂದು ಪುನರುಚ್ಚರಿಸಿದರು.
ನಮ್ಮಲ್ಲಿ ಸಾಕಷ್ಟು ಹಣ ಇದೆ. ಈಗಾಗಲೇ ಎಲ್ಲಾ ತಾಲ್ಲೂಕುಗಳಿಗೆ ತಲಾ 50 ಲಕ್ಷ ರೂ ಕುಡಿಯುವ ನೀರಿನ ವ್ಯವಸ್ಥೆಗೆ ನೀಡಿದ್ದೇವೆ. ಈ ಹಣ ಖರ್ಚಾದ ಬಳಿಕ ಹೆಚ್ಚುವರಿ ಹಣದ ಅಗತ್ಯಬಿದ್ದರೆ ನೀಡಲಾಗುವುದು ಎಂದರು. ತೆಂಗಿನ ಬೆಳೆಗೆ ರೋಗ ಬಂದು ಬೆಳೆ ನಾಶ ಆಗಿದೆ. ರೈತರಿಗೆ ಪರಿಹಾರ ನೀಡಬೇಕು ಎನ್ನುವ ಬೇಡಿಕೆ ಶಾಸಕರುಗಳಿಂದ ವ್ಯಕ್ತವಾಯಿತು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ” NDRF ನಿಂದ ಇನ್ನೂ ಪರಿಹಾರ ಹಣ ಬಂದಿಲ್ಲ. ಆದರೂ ನಾವೇ ಹಣ ಬಿಡುಗಡೆ ಮಾಡಿದ್ದೇವೆ . ತೆಂಗು ಬೆಳೆ ನಾಶ ಪರಿಹಾರ ಪರಿಹಾರಕ್ಕಾಗಿ ಅಗತ್ಯ ಹಣಕ್ಕೆ ಬೇಡಿಕೆ ಸಲ್ಲಿಸಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫಸಲ್ ವಿಮಾ ಯೋಜನೆಯ ಅಸಮರ್ಪಕತೆ ಕುರಿತಂತೆ ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಬೆಳೆ ವಿಮೆ ಕಂತು ಕಟ್ಟಿದವರಿಗೂ ಹಣ ಬಂದಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಸ್ಕೀಂನಲ್ಲೇ ಹಲವು ಅವೈಜ್ಞಾನಿಕ ತೊಡಕುಗಳಿವೆ. ಆದರೂ ಕಂತು ಕಟ್ಟಿದವರಿಗೆ ವಿಮೆ ಹಣ ಬೇಗವಾಗಿ ಬರುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಆಹಾರ ನಿಗಮದ ಗೋದಾಮುಗಳಿಂದ ಪಡಿತರ ಸಮರ್ಪವಾಗಿ ಬಿಡುಗಡೆ ಆಗುತ್ತಿಲ್ಲ ಎನ್ನುವ ಶಾಸಕರ ದೂರಿಗೆ ಗರಂ ಆದ ಸಿಎಂ, ತಕ್ಷಣ ಸ್ಥಳ ಪರಿಶೀಲನೆ ಮಾಡಿ, ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎನ್ನುವ ಸೂಚನೆಯನ್ನು ಆಹಾರ ಇಲಾಖೆಯ ಅಧಿಕಾರಿಗಳಿಗೆ ನೀಡಿ ತಕ್ಷಣ ಸರಿಪಡಿಸದಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊಬ್ಬರಿ ಬೆಲೆಗೆ ಬೆಂಬಲ ಬೆಲೆ ಘೋಷಿಸಿದ್ದಾಯ್ತು. ಆದರೆ ಕೇಂದ್ರ ಖರೀದಿ ಕೇಂದ್ರವನ್ನೇ ತೆರೆದಿಲ್ಲ. ಬರಗಾಲದ ಈ ಸ್ಥಿತಿಯಲ್ಲಿ ತೆಂಗು ಬೆಳೆಗಾರರು ಕಡಿಮೆ ಬೆಲೆಗೆ ಕೊಬ್ಬರಿ ಮಾರುವಂಥಾ ಶೋಚನೀಯ ಸ್ಥಿತಿ ಬಂದಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಕೂಡಲೇ ಖರೀದಿ ಕೇಂದ್ರ ತೆರೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.
ಕಾಫಿ ಬೆಳೆಗಾರರು ತೋಟದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೆ ಅವರ ಮನೆಯ ವಿದ್ಯುತ್ ಸಂಪರ್ಕವನ್ನೂ ತಪ್ಪಿಸಲಾಗುತ್ತಿದೆ. ಆದ್ದರಿಂದ ಬಾಕಿ ಬಿಲ್ ಗಳ ಮೇಲಿನ ಬಡ್ಡಿ ಮನ್ನಾ ಮಾಡಿ ಎನ್ನುವ ಬೇಡಿಕೆ ಶಾಸಕರಿಂದ ವ್ಯಕ್ತವಾಯಿತು. ಅಸಲು ಕಟ್ಟಿದವರ ಬಡ್ಡಿ ಮನ್ನಾ ಮಾಡಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಮನೆಗಳ ವಿದ್ಯುತ್ ಸಂಪರ್ಕ ತಪ್ಪಿಸಬಾರದು ಎನ್ನುವ ಸೂಚನೆ ನೀಡಿದರು.