SUDDIKSHANA KANNADA NEWS\ DAVANAGERE\DATE:12-10-2023
ಬೆಂಗಳೂರು: ಸಣ್ಣ ನೀರಾವರಿ ಇಲಾಖೆಯ ಯೋಜನೆಗಳಡಿ, 2018ರಲ್ಲಿ ಬಾಕಿ ಬಿಲ್ 440 ಕೋಟಿ ರೂ.ನಷ್ಟಿತ್ತು. ಸೆಪ್ಟೆಂಬರ್ ಅಂತ್ಯದ ವೇಳೆಗೆ ಇದು 3036 ಕೋಟಿ ರೂ. ಗಳಷ್ಟಾಗಿದೆ. ಕಳೆದ ಎರಡು ವರ್ಷದಲ್ಲಿ ನಿಗದಿತ ಆಯವ್ಯಯದ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಬಾಕಿ ಬಿಲ್ ಮೊತ್ತ ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಪ್ರಾರಂಭವಾಗದ ಹಾಗೂ ಹೊಸ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಈ ಸೂಚನೆ ನೀಡಿದರು.
2023ರ ಏಪ್ರಿಲ್ 1ರ ವೇಳೆಗೆ ಇಲಾಖೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾದ ಮೊತ್ತ- 22304 ಕೋಟಿ ರೂ. ಇದ್ದು, ಅದರಲ್ಲಿ 31-3-2023ರ ವರೆಗೆ 9602.37 ಕೋಟಿ ರೂ. ವೆಚ್ಚವಾಗಿದೆ. 2023-24ನೇ ಸಾಲಿಗೆ ಬಾಕಿ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾದ ಮೊತ್ತ 12,696.35 ಕೋಟಿ ರೂ. ಆಗಿದೆ. ಇಲಾಖೆಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ನಿರ್ವಹಿಸಲು ಬೇಕಾಗುವ ಬಾಕಿ ಮೊತ್ತ 11,904 ಕೋಟಿ ರೂ. ನಷ್ಟಿದೆ. ಕಾಮಗಾರಿ ಪ್ರಾರಂಭವಾಗಿದ್ದರೆ ಅಂತಹ ಯೋಜನೆಗಳನ್ನು ಮುಂದುವರೆಸಿ. ಪ್ರಾರಂಭವಾಗದ ಕಾಮಗಾರಿಗಳನ್ನು ಕೈಬಿಡಲು ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳಡಿ ಇರುವ 34 ಸಾವಿರಕ್ಕೂ ಹೆಚ್ಚು ಕೆರೆಗಳ ಸಮಗ್ರ ನಿರ್ವಹಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಡಿ ಕೆರೆ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸುವ ಕುರಿತು ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಹಣಕಾಸು ಇಲಾಖೆಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಅಧಿಕಾರೇತರ ಸದಸ್ಯರ ನೇಮಕ ಮಾಡುವ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆಯ ಪರಿಣತರು ಹಾಗೂ ಕಾಳಜಿ ಉಳ್ಳವರನ್ನು ಆಯ್ಕೆ ಮಾಡಲು ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆ ಹಾಗೂ ಭಾರಿ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಮೀನುಗಾರಿಕೆ ಗುತ್ತಿಗೆ ನೀಡುವ ಮೂಲಕ ಸಂಪನ್ಮೂಲ ಕ್ರೋಢೀಕರಿಸುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು.
ಸಂಸ್ಕರಿಸಿದ ನೀರಿನ ಏತ ನೀರಾವರಿ ಯೋಜನೆಗಳು:
ಕೆ.ಸಿ. ವ್ಯಾಲಿ ಎರಡನೇ ಹಂತ, ಆನೇಕಲ್ ಏತ ನೀರಾವರಿ ಯೋಜನೆ, ಹೊಸಕೋಟೆ ಏತ ನೀರಾವರಿ ಯೋಜನೆ, ಬೆಂಗಳೂರು ಪೂರ್ವ ತಾಲ್ಲೂಕು ಏತ ನೀರಾವರಿ ಯೋಜನೆ, ಬಾಗೇಪಲ್ಲಿ ಏತ ನೀರಾವರಿ ಯೋಜನೆ, ವೃಷಭಾವತಿ ವ್ಯಾಲಿ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದೆ. ಎರಡನೇ ಹಂತದ ಸಂಸ್ಕರಿಸಿದ ನೀರು ಸುರಕ್ಷಿತವಾಗಿದೆ. ಆದರೆ ನಗರ ಸ್ಥಳೀಯ ಸಂಸ್ಥೆಗಳು ಕೊಳಚೆ ನೀರನ್ನು ಸಂಸ್ಕರಿಸದೆ ಬಿಡುವುದರಿಂದ ಕೆಲವು ಕೆರೆಗಳಿಗೆ ಕೊಳಚೆ ನೀರು ಹರಿಯುತ್ತಿರುವ ಸಮಸ್ಯೆಯ ಬಗ್ಗೆ ಸಚಿವ ಭೋಸರಾಜು ಅವರು ಮುಖ್ಯಮಂತ್ರಿಗಳ ಗಮನ ಸೆಳೆದರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಪತ್ರ ಬರೆದಿರುವುದಾಗಿ ಸಚಿವ ಭೋಸರಾಜು ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಕೆ.ಸಿ. ವ್ಯಾಲಿ ಮೊದಲ ಹಂತದ ಯೋಜನೆಯನ್ನು ತಮ್ಮ ಹಿಂದಿನ ಅವಧಿಯಲ್ಲಿ ಅನುಷ್ಠಾನಗೊಳಿಸಿದ್ದು, ಅದರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಸಚಿವರು ವಿವರಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ:
ಶಿರಸಿ, ಬೆಳಗಾವಿ, ಹಾಸನ, ಚಾಮರಾಜನಗರ, ಮಡಿಕೇರಿ ಮತ್ತು ಗದಗ ನಗರಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾಮಗಾರಿ ಭೂಮಿಯ ಲಭ್ಯತೆಯ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಭೂಮಿ ಲಭ್ಯವಾಗಿರುವುದರಿಂದ ಕಾಮಗಾರಿ ಶೀಘ್ರವೇ ಪ್ರಾರಂಭಿಸಲು ಸೂಚಿಸಿದರು.
ಮೈಸೂರು ನಗರದಲ್ಲಿ ಸ್ಥಳ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮೈಸೂರು ವಿಶ್ವವಿದ್ಯಾಲಯ ಕುಲಪತಿಗಳಿಗೆ ದೂರವಾಣಿ ಮೂಲಕ ಸಭೆಯಲ್ಲಿಯೇ ಸೂಚಿಸಿದರು.
ವಿಜ್ಞಾನ ನಗರಿ ನಿರ್ಮಿಸಲು ಭಾರತ ಸರ್ಕಾರ ಅನುಮೋದನೆ ನೀಡಿದ್ದು, 100 ಕೋಟಿಯ ಈ ಯೋಜನೆಗೆ ಬೆಂಗಳೂರು ನಗರದ ಹೊರ ವಲಯದಲ್ಲಿ 25 ಎಕರೆ ಜಾಗ ಒದಗಿಸುವಂತೆ ನಿರ್ದೇಶನ ನೀಡಿದರು.