SUDDIKSHANA NEWS\ DAVANAGERE\ DATE:16-10-2023
ಬೆಂಗಳೂರು: ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತವಾಗಿದ್ದು,ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಗುತ್ತಿಗೆದಾರರ ಮನೆಯಲ್ಲಿ ಹಣಪತ್ತೆಯಾಗಿರುವ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ದುಡ್ಡು ವಸೂಲಿ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಮುಖ್ಯಮಂತ್ರಿತಗಳು ಉತ್ತರ ನೀಡುತ್ತಾ, ಆದಾಯ ತೆರಿಗೆ ಇಲಾಖೆ ತನ್ನ ಕೆಲಸ ಮಾಡಿದೆ. ಯಾರದೋ ಮನೆಯಲ್ಲಿ ಹಣ ಪತ್ತೆಯಾಗಿದ್ದು, ಇದಕ್ಕೆ ರಾಜಕೀಯ ನಂಟು ಹಾಕುವುದು ಸರಿಯಲ್ಲ. ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ. ಲೋಕಸಭೆ ಚುನಾವಣೆ ಹಾಗೂ ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ತನಿಖೆಯ ಅವಶ್ಯಕತೆಯಿಲ್ಲ. ಪಂಚರಾಜ್ಯಗಳ ಚುನಾವಣೆಯ ಇರುವುದರಿಂದ ಕಾಂಗ್ರೆಸ್‍ನ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಚುನಾವಣೆ ನಡೆಯುವುದಕ್ಕೂ ನಮ್ಮ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ಸುಳ್ಳು ಹೇಳಿಕೆ :
ಕಾಂಗ್ರೆಸ್ ನಾಯಕರಿಗೆ ದುಡ್ಡು ಸಂಗ್ರಹಿಸುವ ಗುರಿ ನೀಡಿರುವುದಾಗಿ ಬಿಜೆಪಿಯ ಸಿ.ಟಿ.ರವಿಯವರು ಮಾಡಿರುವ ಆರೋಪಕ್ಕೆ ಪ್ರತಿಕ್ರಯಿಸುತ್ತಾ, ಸಿ.ಟಿ.ರವಿಯವರ ಹೇಳಿಕೆಗಳು ಸದಾ ಸುಳ್ಳಿನಿಂದ ಕೂಡಿರುತ್ತದೆ. ಅವರ ಸುಳ್ಳು ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಈ ರೀತಿಯ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದರು.
ರೈತರಿಗೆ 5 ಗಂಟೆಗಳ ಕಾಲ ಸತತ ವಿದ್ಯುತ್ ಸರಬರಾಜು:
ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಮರ್ಪಕವಾಗಿ ಸರಬರಾಜಾಗುತ್ತಿಲ್ಲವೆಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಹೊರತುಪಡಿಸಿದರೆ, ನಂತರದ ಬಿಜೆಪಿ ಅಥವಾ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಒಂದು ಮೆ.ವ್ಯಾಟ್ ವಿದ್ಯುತ್ತನ್ನೂ ಉತ್ಪಾದನೆ ಮಾಡಿಲ್ಲ. ಮಳೆ ಅಭಾವದಿಂದಾಗಿ ಪಂಪಸೆಟ್ ಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ. ಸಾಧಾರಣವಾಗಿ, ಅಕ್ಟೋಬರ್ ಮಾಹೆಯವರೆಗೆ 10,000 ಮೆ.ವ್ಯಾ ವಿದ್ಯುತ್ ಖರ್ಚಾಗುತ್ತಿತ್ತು. ಆದರೆ ಈ ಬಾರಿ 16,000 ಮೆ.ವ್ಯಾಟ್ ಖರ್ಚಾಗುತ್ತಿದೆ. ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಆದ್ದರಿಂದ ವಿದ್ಯುತ್ ಸಮಸ್ಯೆ ತಲೆದೋರಿರುವುದು ನಿಜ. ಈ ಬಗ್ಗೆ ಸಭೆ ನಡೆಸಿ, ರೈತರಿಗೆ ಮೂರು ಫೇಸ್ ಗಳಲ್ಲಿ 5 ಗಂಟೆಗಳ ಕಾಲ ಸತತ ವಿದ್ಯುತ್ ನೀಡಬೇಕು. ಹೊರಗಿನಿಂದ ವಿದ್ಯುತ್ ಖರೀದಿಸಲು ಸೂಚನೆ ನೀಡಲಾಗಿದೆ. ಕಬ್ಬು ಅರೆಯುವಿಕೆಯಿಂದ ವಿದ್ಯುತ್ ಕೋ ಜನರೇಷನ್ ನತ್ತಲೂ ಗಮನ ಹರಿಸಲು ಸೂಚಿಸಲಾಗಿದೆ. ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ತೊಂದರೆಯಾಗದಂತೆ ಕ್ರಮ :
ಜಾನುವಾರುಗಳಿಗೆ ಮೇವಿನ ಕೊರತೆ ಆಗುತ್ತಿರುವ ಬಗ್ಗೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿ, ಪ್ರಸ್ತುತ ಮೇವಿನ ಕೊರತೆಯಿಲ್ಲ. ಆದರೂ ಮೇವು ಬೆಳೆಸಲು ಹಾಗೂ ಶೇಖರಣೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. 236 ತಾಲ್ಲೂಕುಗಳಲಿ 216 ತಾಲ್ಲೂಕುಗಳು ಬರಪೀಡಿತವಾಗಿದೆ. ವಾಸ್ತವವಾಗಿ 42 ಸಾವಿರ ಹೆಕ್ಟೇರ್‍ನಲ್ಲಿ ಬೆಳೆಹಾನಿಯಾಗಿದ್ದು, 30 ಸಾವಿರ ಕೋಟಿಯಷ್ಟು ನಷ್ಟವಾಗಿದೆ, ಕೇಂದ್ರದ ಮಾರ್ಗಸೂಚಿಯಂತೆ 4860 ಕೋಟಿ ರೂ. ಪರಿಹಾರ ಮೊತ್ತ ಕೋರಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ, ಖಾಸಗಿ ಕೊಳವೆಬಾವಿಗಳನ್ನು ಬಳಸಬೇಕು. ಅಗತ್ಯವಿದ್ದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಯಲು ಸಹ ತಿಳಿಸಲಾಗಿದೆ. ಒಟ್ಟಾರೆ ಜನರ ಕೈಗೆ ಕೆಲಸ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಹಂಸಲೇಖರವರು ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿರುವ ಬಗ್ಗೆ ಮಾತನಾಡುತ್ತಾ, ಈ ಬಗ್ಗೆ ನಿನ್ನೆಯ ದಿನ ಅವರು ತಮ್ಮ ದಸರಾ ಭಾಷಣದಲ್ಲಿಯೂ ಪ್ರಸ್ತಾಪಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.