SUDDIKSHANA KANNADA NEWS\ DAVANAGERE\ DATE:24-11-2023
ಬೆಂಗಳೂರು: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆಯದೇ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡಿರುವುದು ಕಾನೂನು ಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಡಿಸಿಎಂ ವಿರುದ್ಧ ಆರೋಪದ ತನಿಖೆ ನಡೆಸಲು ಸಿಬಿಐಗೆ ನೀಡಿದ ಅನುಮತಿ ಹಿಂಪಡೆಯಲು ತೀರ್ಮಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಸರ್ಕಾರದ ಸೇವೆಯಲ್ಲಿದ್ದವರ ವಿರುದ್ಧ ತನಿಖೆಯಾಗಬೇಕಾದರೆ ಸರ್ಕಾರದ ಅನುಮತಿ ಅವಶ್ಯ. 2019 ರಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ಅನುಮತಿಸಿದಾಗ ಅವರು ಶಾಸಕರಾಗಿದ್ದರು. ಇವರ ವಿರುದ್ಧ ತನಿಖೆಗೆ ಕಾನೂನು ರೀತ್ಯವಾಗಿ ವಿಧಾನ ಸಭಾಧ್ಯಕ್ಷರಿಂದ ಅನುಮತಿ ಪಡೆದು ನಂತರ ಮುಖ್ಯಮಂತ್ರಿಗಳು ತನಿಖೆ ಕೈಗೊಳ್ಳಲು ಆದೇಶಿಸಬೇಕು. ಆದರೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆದಿಲ್ಲ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಖಿಕವಾಗಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅವರ ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ವಹಿಸಿದ್ದಾರೆ. ಈ ರೀತಿ ಮಾಡುವುದು ಕಾನೂನಿನ ರೀತ್ಯ ಸರಿಯಲ್ಲ ಎಂದರು.
ನ್ಯಾಯಾಲಯದ ತೀರ್ಮಾನದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಕಾನೂನುಬಾಹಿರವಾಗಿ ಮಂಜೂರಾತಿ ನೀಡಿರುವುದರಿಂದ ಅದ ಸರಿಯಿಲ್ಲ. ಅದನ್ನು ವಾಪಸ್ಸು ತೆಗೆದುಕೊಳ್ಳುತ್ತೇವೆ ಎಂದ ತೀರ್ಮಾನಿಸಿರುವುದಾಗಿ ತಿಳಿಸಿದರು.
ನ್ಯಾಯಾಲಯದ ತೀರ್ಮಾನಗಳಿಗೆ ಮಧ್ಯಪ್ರವೇಶ ಇಲ್ಲ:
29 ರಂದು ನ್ಯಾಯಾಲಯವು ಕೂಡ ಆದೇಶವನ್ನು ಎತ್ತಿಹಿಡಿಯುವ ಭಯದಿಂದ ಸರ್ಕಾರ ಇದನ್ನು ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನ್ಯಾಯಾಲಯದ ತೀರ್ಮಾನಗಳಿಗೆ ನಾವು ಮಧ್ಯಪ್ರವೇಶಿಸುವಂತಿಲ್ಲ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆಯೋ ಮಾಡಲಿ ಎಂದರು.