SUDDIKSHANA KANNADA NEWS\ DAVANAGERE\ DATE:27-11-2023
ಬೆಂಗಳೂರು: ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಭ್ರೂಣಹತ್ಯೆ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ, ಈ ದುಷ್ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಕಠಿಣ ಕ್ರಮಜರುಗಿಸುತ್ತೇವೆ ಎಂದರು.
ಪಡಿತರ ಅಕ್ಕಿ ಕಳುವು:
ಯಾದಗಿರಿಯಲ್ಲಿ ಪಡಿತರ ಅಕ್ಕಿ ಕಳುವು ಹಗರಣ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜಿಲ್ಲೆಯಲ್ಲಿ ಅಕ್ಕಿ ಕಳುವು ನಡೆದಿದ್ದರೆ, ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೆಚ್ಚುವರಿ ಬಸ್ ಗಳಿಗೆ ವ್ಯವಸ್ಥೆ :
ಶಕ್ತಿ ಯೋಜನೆ ಯಶಸ್ವಿಯಾದರೂ, ಬಸ್ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ 971 ಬಸ್ಸಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಅಗತ್ಯವಿರುವೆಡೆ ಹೆಚ್ಚು ಬಸ್ಗಳನ್ನು ಹಾಕಲು ತಿಳಿಸಲಾಗಿದೆ ಎಂದರು.
ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಬಂಡವಾಳ:
ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಬಂಡವಾಳ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲವೆಂಬುದನ್ನು ಅವರು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಜನರನ್ನೂ ತಲುಪುತ್ತಿಲ್ಲ ಎಂಬ ಪ್ರತಿಪಕ್ಷ ನಾಯಕ ಆರ್ .ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೇವಲ ಆರೋಪ ಮಾಡುವ ಉದ್ದೇಶದಿಂದ ಆರೋಪಿಸುತ್ತಿದ್ದಾರೆ. ಇದುವರೆಗೆ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದೆ. ಇದರಲ್ಲಿ 1.14 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿದ್ದು, ಇನ್ನೂ 3 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಗೃಹಲಕ್ಷ್ಮಿ ನೋಂದಾಯಿಸಿಕೊಂಡಿರುವವರಿಗೆ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ನೀಗಿಸಿ, ಹಣ ಒದಗಿಸಲು ಸೂಚನೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 4.34 ಕೋಟಿ ಜನರಿಗೆ ಪ್ರತಿ ಮಾಹೆ 170 ರೂ. ನೀಡಲಾಗುತ್ತಿದೆ. ಇದುವರೆಗೆ 1.50 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಸುಳ್ಳು ಎಂದು ಬಿಜೆಪಿಯವರು ಸಾಬೀತುಪಡಿಸಲಿ ಎಂದರು.
ಬರಪರಿಹಾರ ಬಿಡುಗಡೆ : ಕೇಂದ್ರದ ವಿಳಂಬಕ್ಕೆ ಕಾರಣವೇನು?
ಕೇಂದ್ರದಿಂದ ಬರಪರಿಹಾರ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಉತ್ತರಿಸಿ, ರಾಜ್ಯದಿಂದ ಪಡೆದ ಹಣವನ್ನೇ ಕೇಂದ್ರ ಸರ್ಕಾರ ಪರಿಹಾರವಾಗಿ ನೀಡುತ್ತದೆ. ಈ ಪರಿಹಾರವನ್ನು ನೀಡಲು ಕೇಂದ್ರ ವಿಳಂಬನೀತಿ ತೋರುತ್ತಿದೆ. ಈ ವಿಳಂಬಕ್ಕೆ ಕಾರಣವೇನು ? ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ತೆರಿಗೆ ಹಣ ಕೇಂದ್ರಕ್ಕೆ ತಲುಪಿದರೂ, ರಾಜ್ಯಕ್ಕೆ ಪರಿಹಾರವಾಗಿ ಕೇವಲ 50 ರಿಂದ 60 ಸಾವಿರ ಕೋಟಿ ಬರುತ್ತದೆ ಎಂದರು.