ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಲು ದಂಪತಿ ನಿರ್ಧರಿಸಿದ್ದಾರೆ. ಮದುವೆಯಾದ ನಾಲ್ಕೇ ವರ್ಷಕ್ಕೆ ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ (ಫ್ಯಾಮಿಲಿ ಕೋರ್ಟ್) ಮೆಟ್ಟಿಲೇರಿದ್ದಾರೆ.
ಫ್ಯಾಮಿಲಿ ಕೋರ್ಟ್‌ಗೆ ದಂಪತಿ ಆಗಮನ:
ವಿಶ್ವಸನೀಯ ಮೂಲಗಳ ಪ್ರಕಾರ, ನಟಿ ಶುಭಾ ಪೂಂಜಾ ಹಾಗೂ ಉದ್ಯಮಿ ಸುಮಂತ್ ಇಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಆಗಮಿಸಲಿದ್ದಾರೆ. ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ವಿಚಾರಣೆ (ಹಿಯರಿಂಗ್) ನಡೆಯಲಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಸಲ್ಲಿಕೆಯಾಗಿರುವ ಜಂಟಿ ಅರ್ಜಿಯ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರೂ ಕೋರ್ಟ್‌ಗೆ ಹಾಜರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಲ್ಕು ವರ್ಷಗಳ ದಾಂಪತ್ಯಕ್ಕೆ ಬಿರುಕು:
ಬಹುಕಾಲದ ಗೆಳೆಯ, ಉದ್ಯಮಿಯೂ ಆಗಿರುವ ಸುಮಂತ್ ಬಿಲ್ಲವ ಅವರನ್ನು ಶುಭಾ ಪೂಂಜಾ ಅವರು ಜನವರಿ 5, 2022 ರಂದು ಮದುವೆಯಾಗಿದ್ದರು. ಆಗ ಕೊರೊನಾ ನಿಯಮಗಳು ಜಾರಿಯಲ್ಲಿದ್ದ ಕಾರಣ, ಮಂಗಳೂರಿನ ಮಜಲುಬೆಟ್ಟು ಬೀಡಿನಲ್ಲಿ ಅತ್ಯಂತ ಸರಳವಾಗಿ ಇವರ ಕಲ್ಯಾಣ ಮಹೋತ್ಸವ ನಡೆದಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಯಾಗಿದ್ದಾಗಲೂ ಶುಭಾ ಪೂಂಜಾ ತಮ್ಮ ಪ್ರೀತಿಯ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದರು. ಆದರೆ ಮದುವೆಯಾಗಿ ನಾಲ್ಕು ವರ್ಷಗಳು ಕಳೆಯುವ ಮುನ್ನವೇ ಈ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ದಾಂಪತ್ಯ ಮುರಿದು ಬೀಳುವ ಹಂತಕ್ಕೆ ತಲುಪಿದೆ.
ಗೊಂದಲ ಮೂಡಿಸಿದ ಮೌನ:
ದಂಪತಿಗಳ ನಡುವೆ ಮೂಡಿರುವ ಈ ಬಿರುಕಿಗೆ ಅಸಲಿ ಕಾರಣವೇನು? ಎಂಬ ಗೊಂದಲಗಳಿಗೆ ಇನ್ನು ಅಧಿಕೃತ ತೆರೆ ಬಿದ್ದಿಲ್ಲ. ಈ ಕುರಿತು ನಟಿ ಶುಭಾ ಪೂಂಜಾ ಅವರಾಗಲಿ ಅಥವಾ ಪತಿ ಸುಮಂತ್ ಅವರಾಗಲಿ ಇದುವರೆಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಸ್ಯಾಂಡಲ್‌ವುಡ್ ಅಂಗಳದಲ್ಲಿ ಇವರ ಡಿವೋರ್ಸ್ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ.





Leave a comment