ಚಿಕ್ಕಮಗಳೂರು: ತನ್ನನ್ನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ (PSI) ಎಂದು ಸಾರ್ವಜನಿಕರಿಗೆ ನಂಬಿಸಿ ಹಣ, ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ಕೋಟ್ಯಂತರ ರೂಪಾಯಿ ವಂಚನೆ ಎಸಗಿದ್ದ ನಕಲಿ ಲೇಡಿ ಪಿಎಸ್‌ಐಯನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿಯಾಗಿದ್ದಾಳೆ.
ಘಟನೆಯ ವಿವರ ಹಾಗೂ ವಂಚನೆಯ ಜಾಲ:
ಚಿಕ್ಕಮಗಳೂರು ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದ ನಿವೇದಿತಾ ಗೌಡ, ಸಾರ್ವಜನಿಕರನ್ನು ನಂಬಿಸಲು ಪೊಲೀಸ್ ಅಧಿಕಾರಿಗಳ ರೀತಿಯೇ ಶಾರ್ಟ್ ಹೇರ್ ಕಟಿಂಗ್ ಹಾಗೂ ಡ್ರೆಸ್ ಮಾಡಿಕೊಳ್ಳುತ್ತಿದ್ದಳು. ತಾನು ಕರ್ತವ್ಯದಿಂದ ರಜೆ ಪಡೆದು ಬಂದಿರುವುದಾಗಿ ಕೆಫೆಗೆ ಬರುತ್ತಿದ್ದ ಗ್ರಾಹಕರು, ಯುವಕರು ಹಾಗೂ ಮಹಿಳೆಯರಿಗೆ ಹೇಳಿಕೊಳ್ಳುತ್ತಿದ್ದಳು. ತಾನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂಬ ಹುದ್ದೆಯ ಪ್ರಭಾವ ಬಳಸಿ, ತುರ್ತು ಅಗತ್ಯದ ನೆಪ ಹೇಳಿ ಅವರಿಂದ ಕೋಟ್ಯಂತರ ರೂಪಾಯಿ ಹಣ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದಾಳೆ.
ಅಷ್ಟೇ ಅಲ್ಲದೆ, ಪರಿಚಯಸ್ಥರಿಂದ ಓಡಾಟದ ನೆಪದಲ್ಲಿ ಐಷಾರಾಮಿ ಕಾರುಗಳನ್ನು ಪಡೆದುಕೊಳ್ಳುತ್ತಿದ್ದ ಈಕೆ, ಬಳಿಕ ಆ ಕಾರುಗಳನ್ನು ಮಾಲೀಕರಿಗೆ ತಿಳಿಯದಂತೆ ಬೇರೆಯವರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಆರೋಪವೂ ಇದೆ.
ನಕಲಿ ಆಧಾರ್ ಕಾರ್ಡ್‌ಗಳು ಪತ್ತೆ, ಪ್ರಿಯಕರನಿಗೆ ಹಣ ರವಾನೆ:
ಆರೋಪಿ ನಿವೇದಿತಾಳನ್ನು ಬಂಧಿಸಿ ಮೊಬೈಲ್ ಪರಿಶೀಲನೆ ನಡೆಸಿದಾಗ, ಬೇರೆ ಬೇರೆ ಹೆಸರುಗಳಲ್ಲಿ ತಯಾರಿಸಲಾಗಿದ್ದ ಹಲವು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ವಿಚಾರಣೆ ವೇಳೆ, ತಾನು ವಂಚನೆಯಿಂದ ದೋಚಿದ್ದ ಹಣ ಮತ್ತು ಚಿನ್ನವನ್ನು ತನ್ನ ಪ್ರಿಯಕರ ‘ದೇವು’ ಎಂಬಾತನಿಗೆ ನೀಡಿದ್ದಾಗಿ ನಿವೇದಿತಾ ಒಪ್ಪಿಕೊಂಡಿದ್ದಾಳೆ. ಪ್ರಸ್ತುತ ತಲೆಮರೆಸಿಕೊಂಡಿರುವ ಪ್ರಿಯಕರ ದೇವು ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
25ಕ್ಕೂ ಹೆಚ್ಚು ಮಂದಿಗೆ ಮೋಸ:
ನಿವೇದಿತಾ ವಿರುದ್ಧ ಈಗಾಗಲೇ ಚಿಕ್ಕಮಗಳೂರಿನ ಬಸವನಹಳ್ಳಿ ಹಾಗೂ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಈಕೆ 25ಕ್ಕೂ ಅಧಿಕ ಮಂದಿಗೆ ಮೋಸ ಮಾಡಿರುವುದು ತಿಳಿದುಬಂದಿದ್ದು, ಈಗಾಗಲೇ 20ಕ್ಕೂ ಹೆಚ್ಚು ಸಂತ್ರಸ್ತರು ಠಾಣೆಗೆ ಬಂದು ದೂರು ನೀಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಈಕೆ ಇದೇ ರೀತಿ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ಕಾಯ್ದುಕೊಂಡಿದ್ದಾರೆ.





Leave a comment