ನವದೆಹಲಿ: ವಿಶೇಷ ಸಾಂದ್ರ ಪರಿಷ್ಕರಣೆ (SIR) ಜಾರಿಯಲ್ಲಿ ಕೇಂದ್ರ ಚುನಾವಣಾ ಆಯೋಗವು ಕೈಗೊಂಡಿದ್ದ ನಿರ್ಧಾರವನ್ನು ವಾಪಸ್ ಪಡೆದಿರುವುದನ್ನು ಕಟುವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದಲೇ ಈ ‘ದ್ವಿಗುಣ ವೆಚ್ಚ’ವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ನೋಟಿಸ್ ಹಾಗೂ ಸಾರ್ವಜನಿಕ ಪ್ರತಿಭಟನೆಗಳ ನಂತರ ಇಸಿಐ ಜಾಗೃತಗೊಂಡು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಎಸ್ಐಆರ್’ ಪ್ರಕ್ರಿಯೆಯನ್ನು ಕೈಬಿಟ್ಟು, ಸಾಮಾನ್ಯ ‘ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ (SSR) ಪ್ರಕ್ರಿಯೆಗೆ ಆದೇಶಿಸಿದೆ ಎಂದು ಚಿದಂಬರಂ ತಿಳಿಸಿದ್ದಾರೆ. ಈ ಹೊಸ ಪ್ರಕ್ರಿಯೆಯಲ್ಲಿ ಪೌರತ್ವ ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಅವರು ಸುದೀರ್ಘ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೋಟಿಗಟ್ಟಲೆ ಮತದಾರರ ಹೆಸರು ತೆಗೆತ: ನಿಯಮಿತ ಪ್ರಕ್ರಿಯೆ ಅನುಸರಿಸದೇ ಸುಮಾರು 13.3 ಕೋಟಿ ಮತದಾರರ ಹೆಸರುಗಳನ್ನು ಅನಗತ್ಯವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂದು ಚಿದಂಬರಂ ಆರೋಪಿಸಿದ್ದಾರೆ.
ಆರ್ಥಿಕ ಹೊಣೆಗಾರಿಕೆ: ಒಂದೇ ಕಾರ್ಯಕ್ಕೆ ಎರಡೆರಡು ಬಾರಿ ಅನಗತ್ಯ ವೆಚ್ಚ ಮಾಡಿದ್ದಕ್ಕಾಗಿ ಆಯೋಗದ ಮುಖ್ಯಸ್ಥರನ್ನೇ ಆರ್ಥಿಕವಾಗಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್ಎಸ್ಆರ್ ವೇಳಾಪಟ್ಟಿ: 17 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, 2027ರ ಜನವರಿ 4 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಮುಖ್ಯ ಚುನಾವಣಾ ಆಯೋಗವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಎಸ್ಐಆರ್ ಮುಕ್ತಾಯಗೊಂಡಿರುವ ಅಥವಾ ನಡೆಯುತ್ತಿರುವ ರಾಜ್ಯಗಳಿಗೆ ಪ್ರತ್ಯೇಕ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ.





Leave a comment