ದಾವಣಗೆರೆ: ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಟ್ಟು 396 ಕೈಗಾರಿಕೆಗಳಿದ್ದು ಅವುಗಳಿಂದ ಹೊರಬರುತ್ತಿರುವ ರಾಸಾಯನಿಕಯುಕ್ತ ನೀರು ತುಂಗಾ ನದಿಗೆ ಸೇರುತ್ತಿರುವುದರಿಂದ ಜಲ ಮಾಲಿನ್ಯವಾಗುತ್ತಿದೆ.
READ ALSO THIS STORY: ಪರ್ಸನಲ್ ಲೋನ್ EMI ಪರಿಶೀಲಿಸಿ: ಸಾಲದ ಸುಳಿಗೆ ಸಿಲುಕುವುದು ತಪ್ಪಿಸುವುದು ಹೇಗೆ?
ಜಿಲ್ಲೆಯ ಹರಿಹರ ಮತ್ತು ದಾವಣಗೆರೆಯಲ್ಲಿ ಎಸ್‌ಟಿಪಿ ಘಟಕವಿದ್ದು ಹೊನ್ನಾಳಿಯಲ್ಲಿ ಇಲ್ಲ. ಮಲಿನ ನೀರು ಸಹ ತುಂಗಭದ್ರಾ ನದಿಗೆ ಸೇರುತ್ತಿದೆ. ಹೊನ್ನಾಳಿ ಸೇತುವೆಯಿಂದ ದಡೆಸೂಗೂರುವರೆಗೆ ತುಂಗಭದ್ರಾ ನದಿ ಮಾಲಿನ್ಯ ಹೆಚ್ಚಳವಾಗುತ್ತಿದೆ.
ಈ ಹಿನ್ನೆಲೆಯಲ್ಲಿ 15 ಕಡೆ ತುಂಗಾಭದ್ರಾ ನದಿಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಲ್ಲದೆ ವರದಾ ನದಿಗೆ ಬಿಡಲಾಗುತ್ತಿರುವ ತ್ಯಾಜ್ಯಗಳ ಬಗ್ಗೆಯೂ ಮಂಡಳಿ ನಿಗಾ ಇಟ್ಟಿದ್ದು ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತಿದೆ. ಜಲ ಮಾಲಿನ್ಯ ನಿಯಂತ್ರಣಕ್ಕಾಗಿ ಗುಣಮಟ್ಟದ ಅಳತೆಗಾಗಿ ದಾವಣಗೆರೆ ಮತ್ತು ಹಾವೇರಿಯಲ್ಲಿ ವಾಯು ಮಾಪಕವನ್ನು ಅಳವಡಿಸಿದ್ದು ಉತ್ತಮವಾಗಿರುತ್ತದೆ. ಮುಂದಿನ ದಿನಗಳಲ್ಲಿ ಜಲ ಮಾಲಿನ್ಯ ಹೆಚ್ಚಳವಾಗದಂತೆ ನಿಗಾವಹಿಸಲಾಗಿದೆ.
ರೈತರು ಹೆಚ್ಚಾಗಿ ರಾಸಾಯಿನಿಕ ಸಿಂಪರಣೆ ಮಾಡಿ ಬೆಳೆಗಳನ್ನು ಬೆಳೆಯುತ್ತಿರುವುದರಿಂದಲೂ ನದಿ ನೀರು ಮಾಲಿನ್ಯವಾಗುತ್ತಿದೆ. ಇದರಿಂದ ತುಂಗಭದ್ರಾ ನದಿ ನೀರು ಹೆಚ್ಚು ಮಾಲಿನ್ಯಯುಕ್ತವಾಗುತ್ತಿದೆ. ಇದು ಆತಂಕಕಾರಿ ವಿಷಯವಾಗಿದ್ದು ಅಗತ್ಯ ಕ್ರಮಕ್ಕಾಗಿ ಸ್ಥಳೀಯ ಆಡಳಿತಕ್ಕೆ ನೆರವು ನೀಡಲಾಗುತ್ತದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ. ಎಂ. ನರೇಂದ್ರಸ್ವಾಮಿ ಅವರೇ ಹೇಳಿದ್ದಾರೆ.
ದಾವಣಗೆರೆ ಮತ್ತು ಹಾವೇರಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷಗಳನ್ನು ಪೂರೈಸಿರುವ ಕಾರಣ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಪ್ರತಿನಿತ್ಯ 2 ಲಕ್ಷ ಹಾಲಿನ ಪ್ಯಾಕೇಟ್ ಮಾರಾಟವಾಗುತ್ತಿದೆ ಎಂಬ ಮಾಹಿತಿ ಇದ್ದು, ಹಾಲಿನ ಪ್ಯಾಕೇಟ್ ತುದಿ ಕಟ್ ಮಾಡಿ ಪ್ಲಾಸ್ಟಿಕ್‌ನ್ನು ಹೊರಗಡೆ ಹಾಕಲಾಗುತ್ತದೆ. ಇದು ಭೂಮಿಗೆ ಸೇರುತ್ತದೆ. ಈ ರೀತಿ ಹಾಲಿನ ಪ್ಯಾಕೇಟ್ ಕಟ್ ಮಾಡುವ ಬದಲಾಗಿ ಅದರಲ್ಲಿಯೇ ಇರುವಂತೆ ಪ್ಯಾಕೇಟ್ ಕಟ್ ಮಾಡಿ ಅದರಲ್ಲಿಯೇ ಇರುವಂತೆ ಬಿಡಬೇಕೆಂದರು.
ಜಿಲ್ಲಾ ಆಡಳಿತದಿಂದ ಪುಣೆ ಸಾಗರಮಿತ್ರ ಅಭಿಯಾನದೊಂದಿಗೆ ಜಿಲ್ಲೆ 512 ಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕೈಗೊಂಡು ಏಕಬಳಕೆಯ 3 ಟನ್ ನಷ್ಟು ಪ್ಲಾಸ್ಟಿಕ್ ನ್ನು ಶಾಲಾ ವಿದ್ಯಾರ್ಥಿಗಳ ಮೂಲಕ ಸಂಗ್ರಹಿಸಿ ಕಳೆದ ಮೂರು ತಿಂಗಳಲ್ಲಿ ವಿಲೆ ಮಾಡಿದ್ದು, ಇದು ಅತ್ಯುತ್ತಮ ರಚನಾತ್ಮಕ ಕೆಲಸವಾಗಿದೆ. ಇದೇ ನವೆಂಬರ್ 19 ರಂದು ಬೆಂಗಳೂರಿನಲ್ಲಿ ಮಂಡಳಿಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಜಿಲ್ಲಾಡಳಿತದೊಂದಿಗೆ ಮಂಡಳಿ ಇದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಮುಕ್ತ ಜಿಲ್ಲೆಯನ್ನಾಗಿಸಲು ನೆರವು ನೀಡಲಾಗುತ್ತದೆ ಎಂದು ಜಿಲ್ಲಾಡಳಿತದ ಕ್ರಮವನ್ನು ಶ್ಲಾಘಿಸಿದರು.
ಪುಣೆ ಸಾಗರಮಿತ್ರ ಅಭಿಯಾನದ ವಿನೋದ್ ಭೋದನ್‌ಕರ್ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿ ಪುಣೆಯಲ್ಲಿ ಆರಂಭಿಕವಾಗಿ 150 ಮಕ್ಕಳಿಂದ ಮನೆಯ ಪ್ಲಾಸ್ಟಿಕ್ ಸಂಗ್ರಹ ಆರಂಭಿಸಲಾಯಿತು. ಅದು ಕ್ರಮೇಣ ಐದು ವರ್ಷಗಳಲ್ಲಿ ಇದು 51 ಸಾವಿರ ಮಕ್ಕಳಿಗೆ ತಲುಪಿತು. ಪ್ರಸ್ತುತ ಮಹಾರಾಷ್ಟ್ರದಲ್ಲಿ 14 ವರ್ಷಗಳಲ್ಲಿ ಮಕ್ಕಳಿಂದ ಸಾವಿರ ಟನ್ ಪ್ಲಾಸ್ಟಿಕ್ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಆರಂಭಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಶಾಲಾ ಮಕ್ಕಳು, ಶಿಕ್ಷಕರಿಗೆ ವೆಬಿನಾರ್ ಮೂಲಕ ಜಾಗೃತಿ ಮೂಡಿಸಿದ್ದು ಇದೇ ಅವಧಿಯಲ್ಲಿ 512 ಶಾಲೆಯ 75 ಸಾವಿರಕ್ಕೂ ಹೆಚ್ಚಿನ ಮಕ್ಕಳು ಮನೆಯಲ್ಲಿ ಬಳಕೆ ಮಾಡಿದ ಪ್ಲಾಸ್ಟಿಕ್ ಶಾಲೆಗೆ ತಂದುಕೊಡುತ್ತಿದ್ದು ಸ್ಥಳೀಯ ಸಂಸ್ಥೆಗಳ ಮೂಲಕ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೆ ಮಾಡಲಾಗುತ್ತಿದೆ. ಇದು ಅತ್ಯಂತ ಉತ್ತಮ ಕಾರ್ಯವಾಗಿದ್ದು ವಿದ್ಯಾರ್ಥಿಗಳ ಹಂತದಲ್ಲಿಯೇ ಪ್ಲಾಸ್ಟಿಕ್‌ನಿಂದಾಗುವ ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಕರಗುವ ವಸ್ತುವಲ್ಲ, ಇದು ಭೂಮಿಗೆ ಸೇರಿ, ಹಳ್ಳ ಕೊಳ್ಳ, ನದಿಗಳ ಮೂಲಕ ಜಲಾಶಯ, ಸಾಗರವನ್ನು ಸೇರುತ್ತಿದೆ. ಮಹಾರಾಷ್ಟ್ರದಲ್ಲಿ ಹುಟ್ಟುವ ಕೃಷ್ಣನದಿ ಮಹಾರಾಷ್ಚ್ರ, ಕರ್ನಾಟಕ, ತೆಲಂಗಾಣ, ಆಂಧ್ರದ ಮೂಲಕ ಬಂಗಾಲಕೊಲ್ಲಿಗೆ ಈ ಪ್ಲಾಸ್ಟಿಕ್ ಸೇರಲಿದೆ. ನಮ್ಮಲ್ಲಿರುವುದು ಶೇ 30 ರಷ್ಟು ಅರಣ್ಯಪ್ರದೇಶವಿದ್ದು ಹೆಚ್ಚು ಆಮ್ಲಜನಕ ಉತ್ಪಾದನೆ ಶೇ 100 ರಷ್ಟಾಗುತ್ತಿಲ್ಲ. ನಾವು ನದಿ, ಸಾಗರಗಳ ಮೇಲೆ ಅವಲಂಭಿತವಾಗಲೇಬೇಕು. ಸಾಗರದಿಂದ ಮಳೆ ಬರುತ್ತದೆ, ಮಳೆ ಇದ್ದಲ್ಲಿ ನದಿ ನೀರು, ಕಾಡು ರಕ್ಷಣೆಯಾಗಲಿದೆ. ಪ್ಲಾಸ್ಟಿಕ್‌ನಿಂದ ಹೊದಿಕೆಯಾಗಿ ಸಾಗರ ಆವಿಯಾಗುವ ಪ್ರಮಾಣ ಕ್ರಮೇಣ ಕಡಿಮೆಯಾಗಲಿದೆ. ಇದರಿಂದ ಮುಂದೊಂದು ದಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ನಾವು ಪ್ಲಾಸ್ಟಿಕ್ ಬಳಕೆಯನ್ನು ಇಳಿಕೆಯಾಗಿಸಿ ವೈಜ್ಞಾನಿಕವಾಗಿ ವಿಲೆ ಮಾಡಬೇಕಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯ ಎಂದು ವಿವರಿಸಿದರು.










