SUDDIKSHANA KANNADA NEWS/ DAVANAGERE/ DATE:10-02-2025
ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಅಡಿಕೆ ಬೆಳೆಗಾರರ ಸಂಘದ 15 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿಯೂ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ಮುಖಂಡ ಹಾಗೂ ಮಾಜಿ ತುಮ್ಕೋಸ್ ಅಧ್ಯಕ್ಷ ಹೆಚ್. ಎಸ್. ಶಿವಕುಮಾರ್ ತಂಡ ಆಡಳಿತದ ಚುಕ್ಕಾಣಿ ಹಿಡಿದಿದೆ. ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆಂಬಲಿತ 15 ಮಂದಿ ಹೀನಾಯ ಸೋಲು ಅನುಭವಿಸುವ ಮೂಲಕ ಮುಖಭಂಗಕ್ಕೆ ಒಳಗಾಗಿದೆ.
ತುಮ್ಕೋಸ್ ಚುನಾವಣೆಗೆ ಭಾನುವಾರ ಮತದಾನ ನಡೆಯಿತು. ಆರಂಭದಲ್ಲಿ ಸ್ವಲ್ಪ ಮಟ್ಟಿದೆ ಎರಡೂ ತಂಡಗಳ ನಡುವೆ ಹಣಾಹಣಿ ನಡೆಯಿತಾದರೂ ಮತ ಎಣಿಕೆ ಇನ್ನೂ ಬಾಕಿ ಇರುವಂತೆ ವಿರೂಪಾಕ್ಷಪ್ಪ ಬೆಂಬಲಿತ ಸದಸ್ಯರು ಒಬ್ಬೊಬ್ಬರೇ ಮನೆಯತ್ತ ಸಾಗಿದರು. ಕಳೆದ ಹಲವು ದಿನಗಳಿಂದ ಗ್ರಾಮ ಗ್ರಾಮಕ್ಕೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದ ಹೆಚ್. ಎಸ್. ಶಿವಕುಮಾರ್ ಬಣ ಭರ್ಜರಿ ಜಯ ಸಾಧಿಸಿ ಗೆಲುವಿನ ರಣಕೇಕೆ ಹಾಕಿದೆ.
ತುಮ್ಕೋಸ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನಗೆ ಮತ್ತು ತಂಡದ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಜಯಶೀಲರನ್ನಾಗಿ ಮಾಡಿದ ಸಹಕಾರ ಕ್ಷೇತ್ರದಲ್ಲಿನ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಮತದಾರರಿಗೆ ಹೃದಯಪೂರ್ವಕವಾಗಿ ಕೃತಜ್ಞತೆ ಹೇಳುವುದಾಗಿ ಹೆಚ್. ಎಸ್. ಶಿವಕುಮಾರ್ ತಿಳಿಸಿದ್ದಾರೆ.
ಒಬ್ಬ ರೈತನ ಮಗನಾದ ನನಗೆ ಸಹಕಾರ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಋಣಿಯಾಗಿದ್ದೇವೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇವೆ. ಅಡಿಕೆ ಬೆಳೆಗಾರರ ಹಿತ ಕಾಪಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.