SUDDIKSHANA KANNADA NEWS/ DAVANAGERE/ DATE:03-02-2025
ದಾವಣಗೆರೆ: ಮೆಡಿಕಲ್ ಶಾಪ್ ಮಾಲೀಕನ ಲೈಂಗಿಕ ದೌರ್ಜನ್ಯ ವಿರೋಧಿಸಿ ಹಿಂದೂ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಚನ್ನಗಿರಿ (Channagiri) ಪಟ್ಟಣ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬಂದ್ ಯಶಸ್ವಿಯಾಗಿದ್ದು, ಅಂಗಡಿ ಮುಂಗ್ಗಟ್ಟು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಅಮರ್ ಮೆಡಿಕಲ್ ಶಾಪ್ ಮಾಲೀಕ ಅಮ್ಜದ್ ಲೈಂಗಿಕ ದೌರ್ಜನ್ಯ ಎಸಗಿರುವುದು ಘೋರ ಅಪರಾಧ. ಈತನನ್ನು ಗಲ್ಲಿಗೇರಿಸಬೇಕು, ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಜಜರಂಗದಳ, ಮಹಿಳಾ, ಹಿಂದೂ ಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ನೀಡಿದ್ದ ಬಂದ್ ಗೆ ಜನರು ಸ್ವಯಂಪ್ರೇರಿತವಾಗಿ ಬಂದ್ ಗೆ ಸಹಕರಿಸಿದರು. ಅಮ್ಜದ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಊರ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನೆ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು.ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಚನ್ನಗಿರಿ
ಪಟ್ಟಣ ಬಂದ್ ಗೆ ಬೆಂಬಲಿಸಿದ್ದು, ವರ್ತಕರ ಸಂಘ, ಔಷಧ ಮತ್ತು ಮಳಿಗೆಗಳ ಸಂಘ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲಿಸಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ದಾವಣಗೆರೆಯಿಂದ ಚನ್ನಗಿರಿ ಪಟ್ಟಣಕ್ಕೆ ನಿತ್ಯವೂ ಓಡಾಡುತ್ತಿದ್ದ ಆರೋಪಿ ಅಮ್ಜದ್ ಮೆಡಿಕಲ್ ಶಾಪ್ ಹಾಗೂ ಚನ್ನಗಿರಿಯಲ್ಲಿಯೇ ಮನೆ ಮಾಡಿ ಕೃತ್ಯ ಎಸಗಿದ್ದ ಎಂದು ಹೇಳಲಾಗುತ್ತಿದೆ. ಅಪ್ರಾಪ್ತ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳು ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿವೆ. ಮಹಿಳೆಯರು, ಯುವತಿಯರು, ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ವಿಡಿಯೋದಲ್ಲಿದೆ. 60ಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿರುವ ಅಮ್ಜದ್ ಯಾವುದೇ ಕಾರಣಕ್ಕೂ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಪೊಲೀಸ್ ಇಲಾಖೆಯು ಚಾರ್ಜ್ ಶೀಟ್ ಸಲ್ಲಿಸಿ, ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಿಂದೂ ಸಮಾಜದ ಮಹಿಳೆಯರು ಹಾಗೂ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪಟ್ಟಣದ ಎಲ್ಲಾ ಬೀದಿಗಳಲ್ಲಿಯೂ
ಅಮ್ಜದ್ ಭಾವಚಿತ್ರ ಅಳವಡಿಸಲಾಗಿದೆ. ಈತನನ್ನು ಕಂಡರೆ ಜನರು ಸುಮ್ಮನೆ ಬಿಡಬಾರದು. ಈತ ಯಾವುದೇ ಕಾರಣಕ್ಕೂ ಹೊರಗಡೆ ಬರಬಾರದು. ಘನಘೋರ ಶಾಸ್ತಿ ಆಗಲೇಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಂತೆ ಈ ಪ್ರಕರಣ ಕೂಡಾ ಇದೆ ಎಂಬುದು ಇಲ್ಲಿನ ಜನರ ಅಭಿಪ್ರಾಯವಾಗಿದೆ. ಇಡೀ ತಾಲ್ಲೂಕಿನಲ್ಲಿ ಇಂತಹ ಲೈಂಗಿಕ ದೌರ್ಜನ್ಯ ಪ್ರಕರಣ ಇದುವರೆಗೆ ನಡೆದಿರುವುದಿಲ್ಲ. ಈಗ ಇಂತಹ ದುಷ್ಟ ಎಲ್ಲಿಂದ ಹುಟ್ಟಿಕೊಂಡನೋ, ನಮ್ಮ ಪಟ್ಟಣ ಹಾಗೂ ತಾಲ್ಲೂಕಿನ ಮಾನ ಮಾರ್ಯಾದೆಯನ್ನು ತೆಗೆದು ಹಾಕಿದ್ದಾನೆ. ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಮೆಡಿಕಲ್ ಶಾಪ್ ಸೇರಿದಂತೆ ಇತರೆ ಅಂಗಡಿಗಳಿಗೆ ನಮ್ಮ ಮಕ್ಕಳನ್ನು ಹಾಗೂ ಹೆಣ್ಣು ಮಕ್ಕಳನ್ನು ಹೇಗೆ ಕಳುಹಿಸುವುದು. ಯಾರನ್ನೂ ನಂಬಬೇಕೋ ಬಿಡಬೇಕೋ ಎಂಬ ಚಿಂತೆಯಲ್ಲಿ ಇರುವಂತಹ ವಾತಾವರಣ ಪಟ್ಟಣದಲ್ಲಿ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.