SUDDIKSHANA KANNADA NEWS/ DAVANAGERE/ DATE:20-10-2023
ದಾವಣಗೆರೆ: ಚನ್ನಗಿರಿ (Channagiri)ಯಲ್ಲಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ವಿರುದ್ಧ ಸ್ವಪಕ್ಷದ ಮುಖಂಡ ತೀವ್ರ ವಾಗ್ದಾಳಿ ನಡೆಸಿದ್ದು, ಏಕವಚನದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತಾಲೂಕಿನ ಜನರು ಮಳೆ, ಬೆಳೆ, ಕುಡಿಯಲು ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ವಿದೇಶ ಪ್ರವಾಸ ಬೇಕಿತ್ತಾ? ಅಭಿವೃದ್ಧಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ. ಆ ಬಳಿಕ 5 ಸಾವಿರ ಮತಗಳನ್ನು ತೆಗೆದುಕೊಳ್ಳು ನೋಡೋಣ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಹೊದಿಗೆರೆ ರಮೇಶ್ ಟೀಕಾಪ್ರಹಾರ ನಡೆಸಿದರು.
READ ALSO THIS STORY:
Davanagere: ಬೆಣ್ಣೆನಗರಿಯಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಕಲರವ: ಅ. 22ಕ್ಕೆ ಚಾಲನೆ 29ಕ್ಕೆ ಮುಕ್ತಾಯ, ವಿಜೇತರಾದವರಿಗೆ ಸಿಗುವ ನಗದು ಬಹುಮಾನ ಎಷ್ಟು ಗೊತ್ತಾ…?
ಚನ್ನಗಿರಿ ಪಟ್ಟಣದ ತಾವರಕೆರೆ ಕ್ರಾಸ್ ಬಳಿ ವಾಲ್ಮೀಕಿ ಪುತ್ಥಳಿ ಮರು ಪ್ರತಿಷ್ಠಾಪನೆಗೆ ಒತ್ತಾಯಿಸಿ ಆಯೋಜಿಸಿದ್ದ ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕ ಶಿವಗಂಗಾ ಬಸವರಾಜ್ ಗೆ ಜೂಜಾಡಲು ಬಿಟ್ಟಿಲ್ಲ. ರೇಸ್ ಗೆ ಬಿಟ್ಟಿಲ್ಲ. ಶೋಷಿತ ಸಮುದಾಯಗಳ ಮತ ಪಡೆದು ಕುದುರೆ ಏರಿ ಹೋಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶಾಸಕ ತಾಲೂಕಿನ ಪ್ರಥಮ ಪ್ರಜೆ. ಪಟ್ಟಣದಲ್ಲಿ ಜನರು ಕುಡಿಯುವ ನೀರು ಸಿಗದೇ ಹಾಹಾಕಾರ ಎದುರಿಸುತ್ತಿದ್ದಾರೆ. ಎಲ್ಲಿ ಹೋಗಿದೆಯಪ್ಪಾ. ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆ ಯಾಕೆ ಮಾಡಿಲ್ಲಪ್ಪಾ? ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಎರಡು ಸಭೆಗಳನ್ನು ತೆರೆಮರೆಯಲ್ಲಿ ಯಾಕೆ ನಡೆಸಿದ್ದೀಯಪ್ಪಾ? ಎಂದು ಪ್ರಶ್ನಿಸಿದರು.
ಚುನಾವಣಾ ಪ್ರಚಾರದಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ಹೇಳಿದ್ದನ್ನು ಮರೆತು ಬಿಟ್ಟಿರುವ ಶಾಸಕರು, ಸರ್ಕಾರಿ ಅಧಿಕಾರಿಗಳ ಬಳಿ ರೊಕ್ಕ ತೆಗೆದಕೊಂಡು ಕರೆದುಕೊಂಡು ಬಂದರೆ, ರೊಕ್ಕ ತೆಗೆದುಕೊಳ್ಳದೇ ಅಧಿಕಾರಿಗಳು ಕೆಲಸ ಮಾಡುತ್ತಾರಾ? ಕೆಪಿಸಿಸಿ ಅಧ್ಯಕ್ಷರಿಗೆ ಮನವಿ, ಸಿಎಂ ಅವರನ್ನು ಯಾವಾಗ ಭೇಟಿ ಮಾಡಬೇಕು ಎಂಬುದು ನನಗೆ ಗೊತ್ತಿದೆ. ತಾಲೂಕಿನ ಜನರು ನಮ್ಮನ್ನು ತಿದ್ದಿದ್ದಾರೆ. ತಿದ್ದಿ ಮೂರ್ತಿ ಮಾಡಿದ್ದಾರೆ. ಸುಮ್ನೆ ಬಿಟ್ಟಿಯಾಗಿ ಬಿಟ್ಟಿಲ್ಲ ಎಂದು
ತಿಳಿಸಿದರು.
ವಾಲ್ಮೀಕಿ ಸಮುದಾಯ ಮಹರ್ಷಿ ವಾಲ್ಮೀಕಿಯವರೇ ದೊಡ್ಡ ವಿಶ್ವವಿದ್ಯಾಲಯ. ಲವ ಕುಶರಿಗೆ ಬಿಲ್ ವಿದ್ಯೆ ಕಲಿಸಿದವರು ಯಾರು? ಕುದುರೆ ಸವಾರಿ, ಈಜು ಸೇರಿದಂತೆ ಎಲ್ಲಾ ರೀತಿಯ ಪಾಠ ಹೇಳಿಕೊಟ್ಟ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಿತ್ತು. ನೀನು ಹೇಳಿದ್ದರೆ ಐದು ನಿಮಿಷದಲ್ಲಿ ಸಮಸ್ಯೆ ಬಗೆಹರಿಯುತಿತ್ತು. ತಾಲೂಕಿನ ಶಾಸಕನಿಗೆ ನಾಚಿಕೆಯಾಗಬೇಕು. ವಿದೇಶ ಪ್ರವಾಸಕ್ಕೆ ಹೋಗಿದ್ದೀಯಾ. ಇಲ್ಲಿ ಕುಡಿಯಲು ನೀರಿಲ್ಲ. ಮಳೆಯಿಲ್ಲ. ನೀರಿಲ್ಲದೇ ಜನರು
ಸಮಸ್ಯೆ ಎದುರಿಸುತ್ತಿರುವುದು ಅಷ್ಟಿಷ್ಟಲ್ಲ. ರೈತರು ಭೂಮಿಗೆ ಬಂಡವಾಳ ಹಾಕಿದ್ದಾರೆ. ಬೆಳೆ ಇಲ್ಲ. ಎಲ್ಲಿ ಮಲಗಿದ್ದೀಯಪ್ಪಾ. ಆರತಿ ಮಾಡಿ ಕರೆಸಿಕೊಳ್ಳಬೇಕಾ? ಬ್ಯಾಟರಿ ಹಾಕಿ ಹುಡುಕಿಕೊಂಡು ಬರಬೇಕಾ? ಎಂದು ವಾಗ್ದಾಳಿ ನಡೆಸಿದರು.
ಉಪವಾಸ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಬಂದರೆ ಯಾವುದೇ ಕಾರಣಕ್ಕೂ ಶಾಸಕನನ್ನು ಬಿಟ್ಟುಕೊಳ್ಳಲ್ಲ. ಬಹಿಷ್ಕಾರ ಹಾಕುತ್ತೇವೆ. ಮಾನವೀಯತೆ ಎಂಬುದೇ ಇಲ್ಲ. ಅಹಿಂದ ಮತಗಳಿಂದಲೇ ನೀನು ಗೆದ್ದು ಬಂದಿರುವುದು. ಇವರ ಬೆಂಬಲದ ಅವಶ್ಯಕತೆ ಇಲ್ಲವೇ. ಸರ್ಕಾರ ಇದೆ, ಪಕ್ಷ ಇದೆ, ಸಿಎಂ ಇದ್ದಾರೆ, ತಾಲೂಕಿನ ಜನರ ಬೆಂಬಲ ಪಡೆಯುತ್ತೇವೆ. ವೇದಿಕೆ ಬಳಿ ಕಂಡರೆ ಬಹಿಷ್ಕಾರ ಹಾಕುವುದು ಸತ್ಯ. ಗ್ರಹಚಾರ ಬಿಡಿಸುತ್ತೇವೆ ಎಂದು ಹೊದಿಗೆರೆ ರಮೇಶ್ ಹೇಳುತ್ತಿದ್ದಂತೆಯೇ ಪ್ರತಿಭಟನಾನಿರತರು ಶಿವಗಂಗಾ ಬಸವರಾಜ್ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿದರು.
ಧಿಕ್ಕಾರ… ಧಿಕ್ಕಾರ…
ಧಿಕ್ಕಾರ…. ಧಿಕ್ಕಾರ… ವಾಲ್ಮೀಕಿ ಸಮಾಜ ವಿರೋಧಿ ಶಾಸಕನಿಗೆ ಧಿಕ್ಕಾರ.. ರೈತ, ಅಹಿಂದ ವಿರೋಧಿ ಶಾಸಕನಿಗೆ ಧಿಕ್ಕಾರ… ಎಂದು ಪ್ರತಿಭಟನಾಕಾರರು ಶಾಸಕ ಶಿವಗಂಗಾ ಬಸವರಾಜ್ ಹೆಸರು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.
ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷದ ಶಾಸಕನ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹೊದಿಗೆರೆ ರಮೇಶ್, ಅಹಿಂದ ಸಮುದಾಯದ ಮತಗಳು ದುರ್ಬಳಕೆ ಆಗಬಾರದು. ಸಾಮಾಜಿಕ ನ್ಯಾಯದ ಪರಿಕಲ್ಪನೆ, ತಾಲೂಕಿನ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಮತ ಹಾಕಿದ್ದೇವೆ. ಶೋಷಿತ ಸಮುದಾಯದ ಮತಗಳು ಉಚಿತವಲ್ಲ. ಶೋಷಿತ ಸಮುದಾಯಗಳು, ಅಹಿಂದ ವರ್ಗ ಮತಕ್ಕೆ ಮಾತ್ರ ಭ್ರಮೆಯಲ್ಲಿ ಇದ್ದರೆ ನಿನ್ನ ತಲೆಯಲ್ಲಿನ ಹುಳ ತೆಗೆದು ಹಾಕು. ನಿರಂತರ ಹೋರಾಟ ಮಾಡ್ತೇವೆ. ಆದದ್ದು ಆಗಲಿ, ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ. ರಾಜ್ಯದ ಕಣ್ತೆರಿಸುವ ಪ್ರಯತ್ನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂಘ ಇದೆ, ಹಿರಿಯರು ಇದ್ದಾರೆ. ಮಾರ್ಗದರ್ಶನ ಮಾಡ್ತಾರೆ. ತಪ್ಪು ಮಾಡಿದ್ದರೆ ತಪ್ಪು ತಿದ್ದುಕೊಳ್ಳುತ್ತೇವೆ. ಹೋರಾಟ ನಿರಂತರ, ಅನಿವಾರ್ಯ. ಇದು ಎಚ್ಚರಿಕೆ. ಸಮುದಾಯಗಳ ಸಹಕಾರ ನಿರೀಕ್ಷೆ ಮಾಡುತ್ತೇವೆ. ತಾಲೂಕು ಆಡಳಿತ, ಜಿಲ್ಲಾಡಳಿತದ ಸಹಕಾರ ಕೋರುತ್ತೇವೆ. ಸಹನೆ, ಶಾಂತಿ ಬಲಹೀನತೆ ಅಲ್ಲ. ನಮ್ಮನ್ನು ಕಾನೂನು ವಿರೋಧಿ ಚಟುವಟಿಕೆ ನಡೆಸಲು ಪ್ರಚೋದನೆ ಮಾಡುವುದನ್ನು ನಿಲ್ಲಿಸಬೇಕು. ಯಾವುದೋ ಒಬ್ಬ ವ್ಯಕ್ತಿ ವರ್ಗಾವಣೆ ಮಾಡುತ್ತಾನೆ ಎಂಬ ಭಯವನ್ನು ಅಧಿಕಾರಿಗಳು ಬಿಡಬೇಕು. ಕೆಲ ಅಧಿಕಾರಿಗಳು ಬಂಡವಾಳ ಹಾಕಿಕೊಂಡು ಬಿಟ್ಟಿದ್ದಾರೆ. ವರ್ಗಾವಣೆ ಭಯಕ್ಕೆ ದುಷ್ಟ ವ್ಯಕ್ತಿಗಳ ಪರವಾಗಿ ನಿಂತರೆ ಸುಮ್ಮನೆ ಇರಲ್ಲ. ನಮ್ಮನ್ನು ಪ್ರಚೋದನೆ ಮಾಡಲು ಮುಂದಾದರೆ ಸಹಿಸಲ್ಲ ಎಂದರು.
ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಆರಾಧ್ಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಿಎಂ, ಗೃಹ ಮಂತ್ರಿಗಳ ಗಮನಕ್ಕೆ ತರುತ್ತೇವೆ. ಪೊಲೀಸರ ತಲೆದಂಡ ಆಗುತ್ತದೆ. ಯಾವ್ಯಾವ ಪದ ಬಳಸಿದ್ದೀರಿ ಎಂಬ ಕುರಿತಂತೆ ಸಾಕ್ಷಿಗಳಿವೆ. ನಮ್ಮ ಯುವಕರು ಸಾಕ್ಷಿ ಹೇಳುತ್ತಾರೆ. ಗೃಹ ಸಚಿವರ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇವೆ. ರಾಷ್ಟ್ರ, ವಿಶ್ವಕ್ಕೆ ಕೊಡುಗೆ ನೀಡಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆ ಮಾಡಿಯೇ ತೀರುತ್ತೇವೆ ಎಂದು ಗುಡುಗಿದರು.