SUDDIKSHANA KANNADA NEWS/ DAVANAGERE/ DATE:26-02-2024
ದಾವಣಗೆರೆ: ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀರಿನ ಸಂಪರ್ಕ ಕಡ್ಡಾಯವಾಗಿ ಕಲ್ಪಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲವೊಮ್ಮೆ ಕಲುಷಿತ ನೀರು ಪೂರೈಕೆ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾದ ತಕ್ಷಣವೇ ಆರೋಗ್ಯ ಇಲಾಖೆ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ವರದಿ ಮಾಡಬೇಕೆಂದು ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರಿನ ವಿಭಾಗದಿಂದ ಕೊರೆಯುವ ಕೊಳವೆಬಾವಿಗಳನ್ನು ಯಾವ ಯೋಜನೆಯಲ್ಲಿ ಕೊರೆಯಿಸಲಾಗಿದೆ. ವರ್ಷ, ಅಂದಾಜು ವೆಚ್ಚದ ವಿವರವನ್ನು ರೆಕಾರ್ಡ್ ಮಾಡಬೇಕು. ಬರಗಾಲ ಇರುವುದರಿಂದ
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.25 ಲಕ್ಷಗಳನ್ನು ಕೊಳವೆಬಾವಿ ಆಳ ಹೆಚ್ಚಿಸಲು, ಪ್ಲೆಶಿಂಗ್, ಪೈಪ್‍ಲೈನ್ ಅಳವಡಿಕೆಗಾಗಿ ಮಂಜೂರು ಮಾಡಲಾಗಿದೆ. ಇದಲ್ಲದೇ ವಿಪತ್ತು ನಿರ್ವಹಣಾ ಘಟಕದಿಂದಲೂ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಅಧಿಕಾರಿಗಳು ಸಮಯೋಚಿತವಾಗಿ ಕೆಲಸ ಮಾಡಬೇಕೆಂದರು.
ಜಲಜೀವನ್ ಮಷಿನ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಮರು ಅವಧಿ ನಿಗದಿ ಮಾಡಿ ಅನುಮೋದನೆ ನೀಡಲಾಯಿತು. ಮಿಷನ್‍ನಿಂದ ದಾವಣಗೆರೆ ತಾ; ಕಾಟಿಹಳ್ಳಿ, ಅತ್ತಿಗೆರೆ, ಹರಿಹರ ತಾ; ಜಿಗಳಿ, ಚಿಕ್ಕಬಿದರಿ ಗ್ರಾಮಗಳಿಗೆ ಮತ್ತು ಚನ್ನಗಿರಿ ತಾ; ಮೇಲನಾಯಕನಕಟ್ಟೆ, ಅಸ್ತಾಪನಹಳ್ಳಿ ಗ್ರಾಮದಲ್ಲಿ ಜೆಜೆಎಂ ರಡಿ ಕಾಮಗಾರಿ ಕೈಗೊಳ್ಳಲು ಸಮಿತಿ ಅನುಮೋದನೆ ನೀಡಿತು. ಜಲಜೀವನ್ ಯೋಜನೆ ಮುಕ್ತಾಯವಾಗುತ್ತಿರುವುದರಿಂದ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು ಜನರಿಗೆ ನೀರು ಒದಗಿಸಲು ಗ್ರಾಮೀಣ ನೀರು, ನೈರ್ಮಲ್ಯ ಇಲಾಖೆ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ರವೀಂದ್ರನಾಯಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.