SUDDIKSHANA KANNADA NEWS/ DAVANAGERE/DATE:02_09_2025
ದಾವಣಗೆರೆ: ಮೂರು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ದಾವಣಗೆರೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಿಡಿಒ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ: ಶಾಮನೂರು ಮನೆತನದವರ ಮನೆ ಬಾಗಿಲು ಕಾಯುವ “ಪೊಮೆರೇನಿಯನ್ ನಾಯಿ” ದಾವಣಗೆರೆ ಎಸ್ಪಿ: ಶಾಸಕ ಬಿ. ಪಿ. ಹರೀಶ್ ಕೆಂಡಾಮಂಡಲ!
ಸಿಡಿಒ ಅಧಿಕಾರಿ ಸತೀಶ್ ನಾಯ್ಕ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಘಟನೆ ಹಿನ್ನೆಲೆ:
ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದ ವ್ಯವಸಾಯ ಮಾಡುತ್ತಿದ್ದ ಸಿ. ಎಲ್. ದೇವರಾಜ್ ಎಂಬುವವರು ತಮ್ಮ ಸೋದರ ಮಾವನಾದ ಅಂಗಾನಾಯ್ಡ್ ಪರವಾಗಿ ದಾವಣಗೆರೆಯ ಸಹಕಾರ ಸಂಘಗಳ ಒಕ್ಕೂಟ ಕಛೇರಿಯಿಂದ ನಂದಿನಿ ಹಾಲು ಒಕ್ಕೂಟ ಸಹಕಾರ ಸಂಘದ ನೋಂದಣಿ ಪ್ರಮಾಣ ಪತ್ರ ಹಾಗೂ ಆದೇಶ ಪತ್ರವನ್ನು ಪಡೆದಿದ್ದರು. ನಂದಿನಿ ಹಾಲು ಒಕ್ಕೂಟ ಸಹಕಾರ ಸಂಘದ ಆಡಳಿತ ಮಂಡಳಿ ರಚನೆ ಮಾಡುವುದಕ್ಕಾಗಿ ಚುನಾವಣಾ ದಿನಾಂಕವನ್ನು ನಿಗದಿಪಡಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸತೀಶ್‌ನಾಯ್ಡ್ ಅವರು ರೂ. 5000 ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಕೊನೆಗೆ 3000 ರೂ. ಕೊಡುವಂತೆ ಲಂಬಾಣಿ ಭಾಷೆಯಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಹಣ ಕೊಡಲು ಇಷ್ಟವಿಲ್ಲದ ಕಾರಣ ಸಿಡಿಓ ಅಧಿಕಾರಿ ಸತೀಶ್‌ನಾಯ್ಕ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಮಂಗಳವಾರದಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.
ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿಯಾದ ಸತೀಶ ನಾಯ್ಕ ಅವರು ತಮ್ಮ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಫಿರ್ಯಾದಿಯವರಿಂದ 3,000 ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕಿ ಕಲಾವತಿ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಹೆಚ್. ಗುರು ಬಸವರಾಜ್, ಪಿ. ಸರಳ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಆರೋಪಿತ ಅಧಿಕಾರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಿಡಿಒ ಸತೀಶ್ ನಾಯ್ಕನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.