ದಾವಣಗೆರೆ: ರಾಜ್ಯಾದ್ಯಂತ ಬಡವರ, ಕೂಲಿಕಾರ್ಮಿಕರ ಹಾಗೂ ಸ್ಲಂಜನರ ಬಿಪಿಎಲ್ ಕಾರ್ಡ್ಗಳನ್ನು ರದ್ಧುಗೊಳಿಸಿರುವ ರಾಜ್ಯ ಸರ್ಕಾರದ ಜನವಿರೋಧಿ ಕ್ರಮವನ್ನು ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಖಂಡಿಸಿದೆ.
ಈ ಸುದ್ದಿಯನ್ನೂ ಓದಿ: ಆರ್‌ಎಸ್‌ಎಸ್ ಎಷ್ಟು ದೊಡ್ಡದು? ನಿಷೇಧ ಸಾಧ್ಯವೇ: ಎಲ್ಲೂ ಇಲ್ಲದ ಕುತೂಹಲಕಾರಿ ಮಾಹಿತಿ ಇಲ್ಲಿದೆ
ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ಬಿಪಿಎಲ್ ಪಡಿತರ ಕಾರ್ಡುಗಳನ್ನು ಏಕಾಏಕಿಯಾಗಿ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಹಸಿವು ಮುಕ್ತ ಕರ್ನಾಟಕದ ಘೋಷಣೆಯೊಂದಿಗೆ ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ನೀಡುವ ಉಚಿತ ಆಹಾರ ಧಾನ್ಯಗಳ ಪಡಿತರ ಚೀಟಿಗಳನ್ನೇ ರದ್ಧುಗೊಳಿಸಿರುವುದು ಖಂಡನೀಯ ಎಂದು ಸಮಿತಿಯ ಜಿಲ್ಲಾಧ್ಯಕ್ಷೆ ರೇಣುಕಾಯಲ್ಲಮ್ಮ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಅನರ್ಹ ಪಡಿತರ ಚೀಟಿಗಳನ್ನು ಮಾತ್ರ ರದ್ದು ಗೊಳಿಸಲಾತ್ತದೆ ಎಂದು ರಾಜ್ಯದ ಮುಖ್ಯ ಮಂತ್ರಿಗಳು ಹೇಳುತ್ತಿದ್ದಾರೆ.ಆದರೆ ಸಿಎಂ ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಜಾರಿಗೆ ತರುವ ಮೂಲಕ ರಾಜ್ಯದ ಎಲ್ಲಾ ಜನರಿಗೆ ಆರ್ಥಿಕವಾಗಿ ಅನುಕೂಲ ಮಾಡುವುದಾಗಿ ನೀಡಿದ್ದ ಭರವಸೆ ಮುರಿದು ಕೇಂದ್ರದ ಸೂಚನೆಯಂತೆ ಪಡಿತರ ಚೀಟಿಗಳನ್ನು ರದ್ದು ಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಉಳ್ಳವರ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಿದರೆ ಅಭ್ಯಂತರ ಇಲ್ಲ.ಆದರೆ ಅಧಿಕಾರಿಗಳು ಯಾವುದೇ ಸಮೀಕ್ಷೆಯನ್ನು ನಡೆಸದೆ, ಮುಂಚಿತವಾಗಿ ಫಲಾನುಭವಿಗಳಿಗೆ ನೋಟಿಸ್ ನೀಡದೆ, ಏಕಾಏಕಿಯಾಗಿ ಬಡಜನರ ಕಾರ್ಡುಗಳನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯ. ಇದು ಲಕ್ಷಾಂತರ ಕುಟುಂಬಗಳನ್ನು ಪಂಚ ಗ್ಯಾರಂಟಿ ಯೋಜನೆಯಿಂದ ವಂಚಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿಗಳ ಮೂಲಕ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ಪಡೆಯಲು ಖಡ್ಡಾಯ ದಾಖಲೆಯಾಗಿದೆ. ಅಷ್ಟೇ ಅಲ್ಲದೆ ಸ್ಥಳೀಯ ನಿವಾಸ ಪ್ರಮಾಣ ಪತ್ರ, ಜಾತಿ ಮತ್ತುಆದಾಯ ಪ್ರಮಾಣ ಪತ್ರ, ವಸತಿಯೋಜನೆ, ಆರೋಗ್ಯಯೋಜನೆ, ಶೈಕ್ಷಣಿಕ ಯೋಜನೆಗಳನ್ನು ಪಡೆಯಲು ಮತ್ತು ಇನ್ನೂ ಹಲವಾರು ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರಚೀಟಿಯು ಗುರುತಿನ ಪುರಾವೆ ಆಗಿರುತ್ತೆ, ಹಾಗೊಂದು ವೇಳೆ ಸರ್ಕಾರದ ಮಾರ್ಗ ಸೂಚಿಯಂತೆ ಕಾರ್ಡುಗಳನ್ನು ರದ್ದು ಗೊಳಿಸಬೇಕಾದರೆ, ಫಲಾನುಭವಿಗಳಿಗೆ ನೋಟಿಸ್ ನೀಡಿ, ದಾಖಲೆಗಳನ್ನು ಪರಿಶೀಲನೆ ಮಾಡುವ ಅವಕಾಶ ನೀಡಬೇಕಾಗಿತ್ತು.ಆದರೆ ಆಹಾರ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಸರ್ಕಾರದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಸಾವಿರಾರು ಬಡ ಕುಟುಂಬಗಳ ಕಾರ್ಡುಗಳನ್ನು ರದ್ದುಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಇಂತಹ ಜನವಿರೋಧಿ ನಿರ್ಧಾರದಿಂದ ಸಾವಿರಾರು ಬಡ ಕುಟುಂಬಗಳಿಗೆ ಒಂದು ಹೊತ್ತುಅನ್ನಕ್ಕೂ ಇಲ್ಲದೆ ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂತಹ ಬಡ ಜನ ವಿರೋಧಿ ನೀತಿಯನ್ನು ಕೈಬಿಟ್ಟು, ರದ್ದುಗೊಂಡಿರುವ ಎಲ್ಲಾ ಅರ್ಹ ಕುಟುಂಬಗಳ ಪಡಿತರ ಚೀಟಿಗಳನ್ನು ಪುನರ್ ಪರಿಶೀಲನೆ ನಡೆಸಿ, ಯಾವುದೇ ಕಾರಣಕ್ಕೂ ಬಡವರ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಬಾರದು. ಒಂದು ವೇಳೆ ಬಡವರ, ಕೂಲಿ ಕಾರ್ಮಿಕರ,ಹಾಗೂ ಸ್ಲಂಜನರ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕ್ರಮವನ್ನು ಕೈಬಿಡದೆ ಇದ್ದಲ್ಲಿ ಸ್ಲಂಜನಾಂದೋಲನ ಕರ್ನಾಟಕ, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ ಯಿಂದ ಮುಂಬರುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಚಲೋ ಹೋರಾಟ ನಡೆಸಿ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.