SUDDIKSHANA KANNADA NEWS/ DAVANAGERE/ DATE:14-05-2023
ದಾವಣಗೆರೆ(DAVANAGERE): ರಾಜ್ಯದಲ್ಲಿ ಕಾಂಗ್ರೆಸ್ ಗೆ ಸಂಪೂರ್ಣ ಬಹುಮತ ಬಂದಿದೆ. 135 ಸ್ಥಾನಗಳನ್ನು ಪಡೆಯುವ ಮೂಲಕ 34 ವರ್ಷಗಳ ಬಳಿಕ ಹೊಸ ಇತಿಹಾಸ ಸೃಷ್ಟಿಸಿದೆ. ಈಗ ಕಾಂಗ್ರೆಸ್ ನಿಂದ ಯಾರು ಸಿಎಂ ಆಗಬೇಕು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಗುವುದು ಖಚಿತ. 93 ವರ್ಷ ಶಾಮನೂರು ಶಿವಶಂಕರಪ್ಪರಿಗೆ ಆಗಿರುವುದರಿಂದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಪ್ರಮುಖ ಖಾತೆಯು ಸಿಗುತ್ತದೆ ಎಂದು ಹೇಳಲಾಗುತ್ತಿದೆ.
1999 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮಲ್ಲಿಕಾರ್ಜುನ್ ಅವರು, ಎಸ್. ಎಂ. ಕೃಷ್ಣ ಸಂಪುಟದಲ್ಲಿ ಕೆಲಸ ಮಾಡಿದ್ದರು. 2013ರಲ್ಲಿ ಮಲ್ಲಿಕಾರ್ಜುನ್ ಗೆದ್ದಿದ್ದರೂ ಸಹ ಆರಂಭದಲ್ಲಿ ಸಚಿವರಾಗಿರಲಿಲ್ಲ. ಅವರ ತಂದೆ ಶಾಮನೂರು ಶಿವಶಂಕರಪ್ಪ ಅವರು ತೋಟಗಾರಿಕೆ ಸಚಿವರಾಗಿದ್ದರು. ಆ ಬಳಿಕ ನಡೆದ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯರು ಹಿರಿಯರಿಗೆ ಕೊಕ್ ಕೊಟ್ಟಿದ್ದರು. ಶಾಮನೂರು ಶಿವಶಂಕರಪ್ಪರಿಗೆ ನೀಡಿದ್ದ ಸಚಿವ ಸ್ಥಾನ ವಾಪಸ್ ಪಡೆಯಲಾಗಿತ್ತು. ಆಗ ಮಲ್ಲಿಕಾರ್ಜುನ್ ಅವರು ತೋಟಗಾರಿಕೆ ಸಚಿವರಾಗಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಬಂದಿರುವ ಮಲ್ಲಿಕಾರ್ಜುನ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜೊತೆ ಸಚಿವ ಸ್ಥಾನ ನೀಡುವುದು ಬಹುತೇಕ ಪಕ್ಕಾ ಎಂಬ ಮಾಹಿತಿ ತಿಳಿದು ಬಂದಿದೆ. ಹೊನ್ನಾಳಿಯಿಂದ ಡಿ. ಜಿ. ಶಾಂತನಗೌಡರು ಮೂರನೇ ಬಾರಿಗೆ ಗೆದ್ದು ಬಂದಿದ್ದಾರೆ. ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಂತರದಲ್ಲಿ ಮೂರು ಬಾರಿ ಗೆದ್ದಿರುವುದು ಶಾಂತನಗೌಡರು. ಸಹಜವಾಗಿಯೇ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಮಾಯಕೊಂಡದಿಂದ ಬಸವಂತಪ್ಪ, ಚನ್ನಗಿರಿಯಿಂದ ಶಿವಗಂಗಾ ವಿ. ಬಸವರಾಜ್, ಜಗಳೂರಿನಿಂದ ದೇವೇಂದ್ರಪ್ಪ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಹೊಸ ಮುಖವಾಗಿರುವ ಕಾರಣಕ್ಕೆ ಸಚಿವ ಸ್ಥಾನ ಸಿಗುವುದು ಕಡಿಮೆ. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನಿಭಾಯಿಸಿ ಅನುಭವವಿದೆ. ಶಾಮನೂರು ಶಿವಶಂಕರಪ್ಪರಿಗೆ ನೀಡದಿದ್ದರೆ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಶಾಮನೂರು ಶಿವಶಂಕರಪ್ಪರಿಗೆ ತುಂಬಾನೇ ಆತ್ಮೀಯ ಸ್ನೇಹಿತರು. ಮೊದಲಿನಿಂದಲೂ ಅತ್ಯಾಪ್ತರಾಗಿರುವ ಕಾರಣಕ್ಕೆ ಮಲ್ಲಿಕಾರ್ಜುನ್ ಅವರಿಗೆ ಪ್ರಬಲ ಖಾತೆ ಸಿಗುವ ಸಾಧ್ಯತೆ ಹೆಚ್ಚಾಗಿದೆ. ದಾವಣಗೆರೆಯಲ್ಲಿ ಅಭಿವೃದ್ಧಿಯಾಗಬೇಕಾದರೆ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯವೂ ಇದೆ.
ಪ್ರಬಲ ಪೈಪೋಟಿ ನೀಡುವಂಥ ಶಾಸಕರೂ ಇಲ್ಲ. ಡಿ. ಜಿ. ಶಾಂತನಗೌಡರಿಗೆ ನಿಗಮ ಮಂಡಳಿಯ ಹುದ್ದೆ ನೀಡಬಹುದು. ಮಲ್ಲಿಕಾರ್ಜುನ್ ಹಾಗೂ ಡಿ. ಜಿ. ಶಾಂತನಗೌಡರು ಸಾದು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹಾಗಾಗಿ,
ಮಲ್ಲಿಕಾರ್ಜುನ್ ರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಅಚ್ಚರಿ ಬೆಳವಣಿಗೆಯಲ್ಲಿ ಹೊಸ ಶಾಸಕರಿಗೆ ಅವಕಾಶ ಸಿಕ್ಕರೂ ಸಿಗಬಹುದು. ಇದನ್ನೂ ಸಹ ಅಲ್ಲಗೆಳೆಯುವಂತಿಲ್ಲ.
ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಹರಿಹರ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಬಿಜೆಪಿ ಧೂಳೀಪಟ ಮಾಡಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಹ ದಾವಣಗೆರೆ ಅಭಿವೃದ್ಧಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಕೈಗಾರಿಕೆ, ಉದ್ಯೋಗ ಸೃಷ್ಟಿ, ಆಶ್ರಯ ಮನೆ, ರಸ್ತೆಗಳ ಅಭಿವೃದ್ಧಿ, ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣ ಸೇರಿದಂತೆ ಹತ್ತು ಹಲವು ಯೋಜನೆಗಳು ಅವರ ತಲೆಯಲ್ಲಿವೆ. ಸಚಿವರಾಗಿ ಬಂದರೆ ಮತ್ತಷ್ಟು ದಾವಣಗೆರೆ ಅಭಿವೃದ್ಧಿ ಹೊಂದುವಲ್ಲಿ ಅನುಮಾನ ಇಲ್ಲ.
ಕಾಂಗ್ರೆಸ್ ನ ರಾಜ್ಯ ಮಟ್ಟದ ಹಿರಿಯ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶಾಮನೂರು ಶಿವಶಂಕರಪ್ಪರ ಕುಟುಂಬದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಗೂ ಒಳ್ಳೆಯ ಅಭಿಪ್ರಾಯ, ಬಾಂಧವ್ಯ ಇದೆ. ಅದೇ ರೀತಿಯಲ್ಲಿ
ಸಿದ್ದರಾಮಯ್ಯರೂ ಸಹ ಮಲ್ಲಿಕಾರ್ಜುನ್ ರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ. ದೆಹಲಿ ಮಟ್ಟದಲ್ಲಿಯೂ ಪ್ರಭಾವ ಹೊಂದಿರುವ ಕಾರಣಕ್ಕೆ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.