ಬೆಂಗಳೂರು: ಹಾಲು, ಮೊಸರು ಮತ್ತು ವಿದ್ಯುತ್ ದರಗಳ ಬೆನ್ನಲ್ಲೇ ಇದೀಗ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರ ಮತ್ತೊಂದು ಆರ್ಥಿಕ ಹೊರೆ ಹೊರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕನಿಷ್ಠ ಬಸ್ ಟಿಕೆಟ್ ದರವನ್ನು 6 ರೂ. ನಿಂದ 10 ರೂ.ಗೆ ಅಂದರೆ ಸುಮಾರು ಶೇ. 67ರಷ್ಟು ಹೆಚ್ಚಿಸಿರುವುದು ಮತ್ತು ಕೆಎಸ್‌ಆರ್‌ಟಿಸಿಯಲ್ಲಿ 4 ರೂ. ನಿಂದ 20 ರೂ.ವರೆಗೆ ದರ ಏರಿಕೆ ಮಾಡಿರುವುದನ್ನು ಅವರು ಕಟುವಾಗಿ ಖಂಡಿಸಿದ್ದಾರೆ. ಸರ್ಕಾರದ ಕೆಟ್ಟ ಆರ್ಥಿಕ ನಿರ್ವಹಣೆಯಿಂದಾಗಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಬಡ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಎರಡೂ ಕೈಗಳಿಂದ ಲೂಟಿ: ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿTದಂತೆ ಮಾಡಿ, ಮತ್ತೊಂದೆಡೆ ಹಾಲಿನ ದರ ಮತ್ತು ಬಸ್ ಪ್ರಯಾಣ ದರವನ್ನು ಮನಬಂದಂತೆ ಏರಿಕೆ ಮಾಡುವ ಮೂಲಕ ಜನರ ಜೇಬು ದೋಚುವುದೇ ಈ ಸರ್ಕಾರದ ಆಡಳಿತ ಮಂತ್ರವಾಗಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ತಕ್ಷಣ ದರ ಏರಿಕೆ ಹಿಂಪಡೆಯಲು ಆಗ್ರಹ: ಸಾರಿಗೆ ನಿಗಮಗಳ ನಷ್ಟದ ಸಂಪೂರ್ಣ ಲೆಕ್ಕವನ್ನು ಜನರ ಮುಂದಿಡಬೇಕು ಹಾಗೂ ತಕ್ಷಣವೇ ಈ ಬಸ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಅವರು ಬಲವಾಗಿ ಆಗ್ರಹಿಸಿದ್ದಾರೆ.
ಜನಾಕ್ರೋಶದ ಎಚ್ಚರಿಕೆ: ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಬಡವರ ಜೀವನವನ್ನು ದುಸ್ತರ ಮಾಡುತ್ತಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರವು ಮುಂದಿನ ದಿನಗಳಲ್ಲಿ ತೀವ್ರ ಜನಾಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.





Leave a comment