SUDDIKSHANA KANNADA NEWS/ DAVANAGERE/ DATE:21-11-2024
ದಾವಣಗೆರೆ: ಎಪಿಎಂಸಿಯ ಪ್ರತಿ ಮಂಡಿಯಲ್ಲಿ ಪ್ರತಿ ಭತ್ತದ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ಮಾಡಬೇಕು. ಟೆಂಡರ್ ಪದ್ಧತಿ ಜಾರಿಗೊಳಿಸಿ ಭತ್ತ ಖರೀದಿಸಬೇಕು ಎಂದು ಒತ್ತಾಯಿಸಿ ಎಪಿಎಂಸಿ ಕಾರ್ಯದರ್ಶಿ ಅವರಿಗೆ ರೈತ ಒಕ್ಕೂಟ ಮನವಿ ಸಲ್ಲಿಸಿದೆ.
ಎಪಿಎಂಸಿಯಲ್ಲಿ ಪ್ರತಿ ಮಂಡಿಯಲ್ಲಿ ಪ್ರತಿ ಭತ್ತದ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ಮಾಡಬೇಕು ಎಂಬ ನಿಯಮವಿದ್ದರೂ ಗಾಳಿಗೆ ತೂರಿ ಮನಬಂದಂತೆ ಖರೀದಿ ವಹಿವಾಟು ಮಾಡಲಾಗುತ್ತಿದೆ. ಇದರಿಂದ ಖರೀದಿದಾರರು, ವ್ಯಾಪಾರಸ್ಥರು ಒಳಸಂಚು ರೂಪಿಸಿ, ಭತ್ತದ ಧಾರಣೆಯನ್ನು ನಿಯಂತ್ರಿಸುತ್ತಿದ್ದಾರೆ. ಆದ್ದರಿಂದ ನ್ಯಾಯಯುತ ಖರೀದಿ ವಹಿವಾಟು ಆಗುವಂತೆ ಟೆಂಡರ್ ಪದ್ದತಿ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಳೆದ ಬೇಸಿಗೆ ಹಂಗಾಮಿನಲ್ಲಿ ಭೀಕರ ಬರದಿಂದ ರೈತರು ಬೆಳೆ ಬೆಳೆಯದೆ ಜಮೀನುಗಳನ್ನು ಬೀಳು ಬಿಟ್ಟಿದ್ದರು. ಪ್ರಸ್ತುತ ಹಂಗಾಮಿನಲ್ಲಿ ಉತ್ತಮ ಮಳೆ ಬಂದಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ಬೆಳೆ ಚೆನ್ನಾಗಿದ್ದು, ಉತ್ತಮ ಇಳುವರಿ ನಿರೀಕ್ಷೆ ಇದೆ. ಆದರೆ ಭತ್ತದ ದರ ಕುಸಿತದಿಂದಾಗಿ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬತ್ತಾಗಿದೆ. ಕಳೆದ 15ನೇ ತಾರೀಖಿನಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಬೇಕು ಮತ್ತು ಎಪಿಎಂಸಿ ಪ್ರಾಂಗಣದಲ್ಲಿ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಟೆಂಡರ್ ಮೂಲಕ ನಡೆಸಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಗಿತ್ತು.
ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಶೀಘ್ರದಲ್ಲೇ ಭತ್ತದ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಮತ್ತು ಎಪಿಎಂಸಿ ಪ್ರಾಂಗಣದಲ್ಲಿ ಕಡ್ಡಾಯವಾಗಿ ಟೆಂಡರ್ ಮೂಲಕ ಖರೀದಿ ವಹಿವಾಟು ನೆಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಮಾರನೇ ದಿನವೇ ಎಪಿಎಂಸಿ ಪ್ರಾಂಗಣದಲ್ಲಿ ಮೆಕ್ಕೆಜೋಳ ಖರೀದಿ ವಹಿವಾಟನ್ನು ಮಾಡಲು ಟೆಂಡರ್ ಪದ್ದತಿ ಜಾರಿ ಮಾಡಲಾಗಿದೆ. ಇದರಿಂದ ಮೆಕ್ಕೆಜೋಳ ದರ ಏರಿಕೆಯಾಗಿದೆ. ಆದ್ದರಿಂದ ಸಮಸ್ತ ರೈತರ ಪರವಾಗಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಯವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಅದೇ ರೀತಿ ಭತ್ತದ ಖರೀದಿ ವಹಿವಾಟನ್ನು ಟೆಂಡರ್ ಪದ್ದತಿ ಮೂಲಕ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಎಪಿಎಂಸಿಯಲ್ಲಿ ವ್ಯಾಪಾರವಾಗಿ ತೂಕವಾದ ತಕ್ಷಣ ಲೆಕ್ಕ ಮಾಡಿ, ರೈತರಿಗೆ ಹಣ ಕೊಡಬೇಕು. ಎಪಿಎಂಸಿಯಲ್ಲಿ ದಲ್ಲಾಲರು ದಲಾಲಿ ಪಡೆಯುವುದು, ತೂಕದಲ್ಲಿ ವಂಚನೆ ಮಾಡುವುದು. ಹಮಾಲರು ಸ್ಯಾಂಪಲ್/ತಳಗಾಲು ತೆಗೆದುಕೊಳ್ಳುವುದು
ಸೇರಿದಂತೆ ನಾನಾ ರೀತಿಯಲ್ಲಿ ರೈತರನ್ನು ಶೋಷಿಸಲಾಗುತ್ತಿದೆ. ಇಂತಹ ಶೋಷಣೆ ಸಂಪೂರ್ಣವಾಗಿ ನಿಲ್ಲಬೇಕು. ಎಪಿಎಂಸಿ ಪ್ರಾಂಗಣದ ಮಂಡಿಗಳಲ್ಲಿ ರೈತರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾ ರೈತ ಒಕ್ಕೂಟದಿಂದ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಪಿಎಂಸಿ ಕಾರ್ಯದರ್ಶಿ ಹೆಚ್.ಸಿ.ಎಂ.ರಾಣಿಯವರು ಮಾತನಾಡಿ, ನಾಳೆಯಿಂದಲೇ ಭತ್ತದ ಖರೀದಿ ವಹಿವಾಟನ್ನು ಟೆಂಡರ್ ಪದ್ದತಿ ಮೂಲಕ ಮಾಡಲಾಗುವುದು. ರೈತರಿಗೆ ಸೂಕ್ತ ಭದ್ರತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ದಲ್ಲಾಲಿ ಪಡೆಯುವುದು, ತೂಕದಲ್ಲಿ ವಂಚನೆ, ಹಮಾಲರು ಸ್ಯಾಂಪಲ್/ತಳಗಾಳು ಪಡೆಯುವುದು ಸೇರಿದಂತೆ ರೈತರ ಶೋಷಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರೈತ ಒಕ್ಕೂಟದ ನಿಯೋಗದಲ್ಲಿ ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ಆಲೂರು ನಿಂಗರಾಜು, ಕರಿಲಕ್ಕೆನಳ್ಳಿ ಜಿಬಿ.ಒಂಕಾರಗೌಡ್ರು, ಆರನೇ ಕಲ್ಲು ವಿಜಯಕುಮಾರ್, ಶಿವನಳ್ಳಿ ರಮೇಶ್, ಹೆಚ್.ಎನ್.ಶಿವಕುಮಾರ್, ಶಿವರಾಜ ಪಾಟೀಲ್, ಹೆಚ್.ಎನ್.ಗುರುನಾಥ್, ಆರುಂಡಿ ಪುನೀತ್, ಎನ್.ಹೆಚ್.ಹಾಲೇಶ್, ಅನಿಲಕುಮಾರನಾಯ್ಕ್, ರಮೇಶನಾಯ್ಕ, ಆನೆಕೊಂಡ ರೇವಣಸಿದ್ದಪ್ಪ, ಗುಮ್ಮನೂರು ಬಸವರಾಜು, ಚಿಕ್ಕಬೂದಿಹಾಳ ಭಗತಸಿಂಹ, ಅಣಜಿ ಗುಡ್ಡೇಶ, ಹೆಬ್ಬಾಳ್ ಮಹೇಂದ್ರ, ಕುಂದುವಾಡದ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಹೊಸಹಳ್ಳಿ ಶಿವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.