SUDDIKSHANA KANNADA NEWS/DAVANAGERE/DATE:18_10_2025
ದಾವಣಗೆರೆ: ಸಾರ್ವಜನಿಕ ಸ್ಥಳ ಮತ್ತು ಸರ್ಕಾರಿ ಕಚೇರಿಗಳಲ್ಲಿ ಬದುಕಿದ್ದವರ ಹೆಸರು ಇಡಬಾರದು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರು ದಾವಣಗೆರೆಯಲ್ಲಿ ಪಾಲನೆ ಮಾಡುತ್ತಿಲ್ಲ. ನ್ಯಾಯಾಲಯದ ಆದೇಶದಂತೆ ಹೆಸರು ತೆಗೆಯದೇ ಹೋದರೆ ಡಿಸಿ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಎಚ್ಚರಿಕೆ ನೀಡಿದರು.
READ ALSO THIS STORY: ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಬೇಡಿ: ಎಂ. ಜಿ. ಶ್ರೀಕಾಂತ್ ರಿಂದ ಎಸಿಗೆ ದೂರು!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ಯಾವ ಕಾರಣ ಇಟ್ಟುಕೊಂಡು ಜಿಲ್ಲಾಧಿಕಾರಿ ಕೇಸ್ ನಡೆಸುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಸಂಬಂಧವಿಲ್ಲದವರಿಗೆ ನೊಟೀಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪನವರ ವಿರುದ್ಧ ಕ್ರಮ ಕೈಗೊಳ್ಳಲು ಆಗದೇ ಇದ್ದರೆ ಬೇರೆ ಜಿಲ್ಲೆಗೆ ಹೋಗಿ ಎಂದು ಕಿಡಿಕಾರಿದರು.
2023ರಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿಗಳಿಗೆ ಬದುಕಿದ್ದವರ ಹೆಸರು ಇಡುವಂತಿಲ್ಲ. ಇದೇ ರೀತಿಯಲ್ಲಿ ಚನ್ನಗಿರಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಶಾಸಕರಾಗಿದ್ದಾಗ ಕ್ರೀಡಾಂಗಣಕ್ಕೆ ತಮ್ಮ ಹೆಸರನ್ನೇ 2012ರಲ್ಲಿ ನಾಮಕರಣ ಮಾಡಿದ್ದರು. ಬಳಿಕ ಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿ ಹೆಸರು ತೆಗೆಸಿದ್ದರು. ವಕೀಲ ರಾಘವೇಂದ್ರ ಅವರು 2023ರಲ್ಲಿ ಕೇಸ್ ನೀಡಿದ್ದರು. ನಾಲ್ಕು ತಿಂಗಳ ಹಿಂದೆ ಹೈಕೋರ್ಟ್ ಆದೇಶ ನೀಡಿದೆ. ಮಾಡಾಳ್ ವಿರೂಪಾಕ್ಷಪ್ಪರ ಹೆಸರು ತೆಗೆದಂತೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹೆಸರು ತೆಗೆಯುವಂತೆ ಆದೇಶಿಸಿದೆ. ಜಿಲ್ಲಾ ಪಂಚಾಯಿತಿ, ನಗರಸಭೆ, ಜಿಲ್ಲಾಧಿಕಾರಿಗಳ ಪರ ವಾದ ಮಂಡನೆ
ಮಾಡಿದ ವಕೀಲರು ಹೈಕೋರ್ಟ್ ತೀರ್ಪಿಗೆ ಒಪ್ಪಿಗೆ ನೀಡಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪಿಗಿಂತ ನೀವು ದೊಡ್ಡವರಾ? ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಶಾಮನೂರು ಶಿವಶಂಕರಪ್ಪರ ಕುಟುಂಬದ ಪರವಾಗಿ ಕೆಲಸ ಮಾಡುವುದು ಬಹಳ ದಿನ ನಡೆಯುವುದಿಲ್ಲ. ಶಾಮನೂರು ಮನೆತನದ ಸೇವೆ ಮಾಡಲು ಇಲ್ಲಿಗೆ ಬಂದಿದ್ದೀರಾ? ಲ್ಯಾಂಡ್ ಆರ್ಮಿಯಲ್ಲಿ ಇದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಒಳ್ಲೆಯ ಹೆಸರು ಇತ್ತು. ದಾವಣಗೆರೆಗೆ ಬಂದು ಗಂಗಾಧರ ಸ್ವಾಮಿ ಯಾಕೆ ಹೀಗೆ ಆದ್ರಿ. ಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ. ಉಳ್ಳವರ, ಶ್ರೀಮಂತರ, ಅಧಿಕಾರ ಇರುವವರ ಪರವಾಗಿ ಕೆಲಸ ಮಾಡುತ್ತಿದ್ದೀರಾ. ನಾವು ಮತ್ತೆ ಕೋರ್ಟ್ ಗೆ ಹೋಗುವಂತೆ ಮಾಡುತ್ತಿದ್ದೀರಾ. ಪಟಾಕಿ ಹೊಡೆಯಬೇಡಿ, ಡಿಜೆ ಬೇಡ ಎನ್ನುತ್ತೀರಾ. ಕೋರ್ಟ್ ಆದೇಶವಿದೆ ಎಂದು ತಿಳಿಸುತ್ತೀರಾ. ಸುಪ್ರೀಂಕೋರ್ಟ್ ಆದೇಶದಂತೆ ಬದುಕಿದವರ ಹೆಸರು ಇಡಬಾರದು ಎಂದು ಹೈಕೋರ್ಟ್ ಎತ್ತಿ ಹಿಡಿದಿದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಮಾಡಾಳ್ ವಿರೂಪಾಕ್ಷಪ್ಪರಿಗೊಂದು ಕಾನೂನು, ಶಾಮನೂರು ಶಿವಶಂಕರಪ್ಪರಿಗೊಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.