ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, “ಕಾಂಗ್ರೆಸ್ ಪಕ್ಷದ ಮನೆ ಮೂರು ಬಾಗಿಲು ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಆದರೆ ಅವರು ಮೊದಲು ತಮ್ಮ ಸ್ವಂತ ಪಕ್ಷದ ಬಾಗಿಲುಗಳನ್ನು ಎಣಿಸಿಕೊಳ್ಳುವುದು ಒಳಿತು. ಕಾಂಗ್ರೆಸ್‌ಗೆ ಮೂರು ಬಾಗಿಲುಗಳಿದ್ದರೆ, ಬಿಜೆಪಿಯ ಮನೆ ಈಗ ‘ನೂರು ಬಾಗಿಲು’ ಆಗಿದೆ” ಎಂದು ವ್ಯಂಗ್ಯವಾಡಿದ್ದಾರೆ. “ಅಷ್ಟಕ್ಕೂ ಕಾಂಗ್ರೆಸ್ ಕಚೇರಿಯ ಬಾಗಿಲು ಮತ್ತು ಕಿಟಕಿಗಳನ್ನು ಎಣಿಸಲು ವಿಜಯೇಂದ್ರ ಕೆಪಿಸಿಸಿಯ ವಾಚ್‌ಮೆನ್ ಆಗಿದ್ದಾರೆಯೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ದೇಶದ್ರೋಹ ಪದದ ಬಳಕೆಗೆ ಆಕ್ಷೇಪ:
ರಾಜಕೀಯ ವಿಚಾರಗಳಿಗೆ ಮತ್ತು ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ನೇರವಾದ ಉತ್ತರ ನೀಡಲಾಗದ ಬಿಜೆಪಿ ನಾಯಕರು, ಸದಾ ‘ದೇಶದ್ರೋಹ’ ಎಂಬ ಪದವನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಸಹಜ. ಆದರೆ ಪ್ರತಿಯೊಬ್ಬರನ್ನೂ ದೇಶದ್ರೋಹಿ ಎಂದು ಕರೆಯುವುದು ಪ್ರಜಾಪ್ರಭುತ್ವದ ಭಾಷೆಯಲ್ಲ. ಸಂವಿಧಾನದಲ್ಲಿ ನಂಬಿಕೆ ಇರುವವರು ಯಾವುದೇ ಆರೋಪ ಮಾಡುವ ಮುನ್ನ ದೇಶದ ಕಾನೂನು ಮತ್ತು ನ್ಯಾಯಾಲಯಗಳ ತೀರ್ಪನ್ನು ಗೌರವಿಸಬೇಕು” ಎಂದು ಎಚ್ಚರಿಸಿದರು.
ದೇಶಪ್ರೇಮದ ಸರ್ಟಿಫಿಕೇಟ್ ಬಿಜೆಪಿ ಆಸ್ತಿಯಲ್ಲ:
ದೇಶಪ್ರೇಮದ ಕುರಿತು ಮಾತನಾಡಿದ ಅವರು, “ದೇಶಪ್ರೇಮದ ಸರ್ಟಿಫಿಕೇಟ್ ವಿತರಿಸುವ ಅಧಿಕಾರವನ್ನು ಬಿಜೆಪಿಗೆ ಯಾರೂ ನೀಡಿಲ್ಲ. ಬಿಜೆಪಿಯನ್ನು ಬೆಂಬಲಿಸುವುದು ಮಾತ್ರವೇ ದೇಶಪ್ರೇಮವಲ್ಲ; ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವುದು ಕೂಡ ನಿಜವಾದ ದೇಶಪ್ರೇಮವೇ ಆಗಿದೆ” ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟ, ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಮೂಲತಃ ವಿರೋಧಿಸಿದ ಇತಿಹಾಸ ಹೊಂದಿರುವವರಿಂದ ದೇಶಪ್ರೇಮದ ಪಾಠ ಕಲಿಯುವ ದಾರಿದ್ರ್ಯ ತಮಗೆ ಬಂದಿಲ್ಲ ಎಂದು ಬಿ. ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.





Leave a comment