SUDDIKSHANA KANNADA NEWS/ DAVANAGERE/ DATE:27-09-2024
ದಾವಣಗೆರೆ: ಕಳೆದ 25 ವರ್ಷಗಳಿಂದ ಬಿಜೆಪಿ ದಾವಣಗೆರೆಯಲ್ಲಿ ಭದ್ರಕೋಟೆಯಾಗಿತ್ತು. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಕುಟುಂಬ ಅಧಿಕಾರ ಅನುಭವಿಸಿತ್ತು. ಆದ್ರೆ, ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಅಧಿಕಾರ ಸಿಕ್ಕರೆ ಮಾತ್ರ ಪಕ್ಷ ಸಂಘಟನೆಗೆ ಬರುವ ಸಿದ್ದೇಶ್ವರ ಸ್ವಾರ್ಥ ರಾಜಕಾರಣಿ. ಇಂಥವರಿಂದಲೇ ಪಕ್ಷಕ್ಕೆ ಜಿಲ್ಲೆಯಲ್ಲಿ ಭಾರೀ ಹಿನ್ನೆಡೆ ಆಗಿದೆ ಎಂದು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರಾದ ರಾಜು, ಪ್ರವೀಣ್ ಜಾಧವ್ ಮತ್ತಿತರರು ಲೋಕಸಭೆಯ ನಾಲ್ಕು ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಗೆಲ್ಲಿಸಿದ್ದೆವು. ಆದ್ರೆ, ಈಗ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇದೆ. ರಣತಂತ್ರ ರೂಪಿಸಲು ಕರೆಯಲಾಗಿದ್ದ ಸಭೆಗೆ ಗೈರು ಹಾಜರಾಗಿದ್ದಾರೆ. ಅಧಿಕಾರ ಇದ್ದರೆ ಮಾತ್ರ ಪಕ್ಷ. ಇಲ್ಲದಿದ್ದರೆ ಅವರ ಪಾಡಿಗೆ ಇದ್ದುಬಿಟ್ಟರೆ ಪಕ್ಷ ಬಲಿಷ್ಠವಾಗುವುದು ಹೇಗೆ ಎಂದು ಪ್ರಶ್ನಿಸಿದರು.
ಜಿ. ಎಂ. ಸಿದ್ದೇಶ್ವರ ಗೆಲ್ಲಲು ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ಕಾರ್ಯಕರ್ತರು, ಮುಖಂಡರು, ಬಿಜೆಪಿ ಚಿಹ್ನೆ, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪರ ಜನಪ್ರಿಯತೆ, ವರ್ಚಸ್ಸು ಕಾರಣ. ಕೇವಲ ತನಗೆ ಮಾತ್ರ ಅಧಿಕಾರ ಬೇಕು. ಉಳಿದವರಿಗೆ ಬೇಡ ಎನ್ನುವ ಮನೋಭಾವನೆಯಿಂದಲೇ ಪಕ್ಷ ದಿನೇ ದಿನೇ ಕುಸಿಯುತ್ತಿದೆ. ಕಾರ್ಯಕರ್ತರು, ಮುಖಂಡರು ದೂರ ಸರಿಯುವಂತಾಗಿದೆ. ಹಾಗಾಗಿ, ಪಕ್ಷ ಕಟ್ಟಿದ, ದುಡಿದ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ಅವರಂಥ ನಾಯಕರಿಗೆ ಜಿಲ್ಲೆಯ ನಾಯಕತ್ವ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಚುನಾವಣೆಗಳು ಬರುತ್ತಿದ್ದು, ಸಿದ್ದೇಶ್ವರ ಮಾತ್ರ ತನಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಮಲ್ಲಿಕಾರ್ಜುನಪ್ಪರು ಒಮ್ಮೆ, ಸಿದ್ದೇಶ್ವರರು ನಾಲ್ಕು ಬಾರಿ ಗೆಲ್ಲಲು ಬಿಜೆಪಿಯೇ ಕಾರಣ. ಇದನ್ನು ಮರೆತು ಸ್ವಾರ್ಥ ಸಾಧನೆಗೆ ಮಾತ್ರ ಬಿಜೆಪಿ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲಿನಿಂದಲೂ ಕಾರ್ಯಕರ್ತರು, ಮುಖಂಡರ ಬಗ್ಗೆ ಅಸಡ್ಡೆ ಹೊಂದಿರುವ ಸಿದ್ದೇಶ್ವರರ ನಾಯಕತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ನಾಯಕತ್ವ ಬದಲಿಸಬೇಕು. ನಿಷ್ಠಾವಂತರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು. ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರು ಬಿಜೆಪಿ ಪಕ್ಷವನ್ನು ಕೇವಲ ಅಧಿಕಾರಕ್ಕಾಗಿ ಬಳಸಿಕೊಂಡವರಿಗೆ ಮನ್ನಣೆ ನೀಡಬಾರದು. ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು.
ನಾವು ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ನಮಗೆ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ. ಸಿದ್ದೇಶ್ವರ ಅವರು ಲೋಕಸಭೆ ಚುನಾವಣೆಯಲ್ಲಿ ಅವರ ಪತ್ನಿ ಕಣಕ್ಕಿಳಿಸಿದರು. ಸೋತ ಬಳಿಕ ಆಗೊಮ್ಮೆ, ಈಗೊಮ್ಮೆ ಎಂದು ಬಂದು ಹೋಗುತ್ತಿದ್ದಾರೆ. ಪಕ್ಷ ಸಂಘಟನೆಗೆ ಮುಂದಾಗುತ್ತಿಲ್ಲ. ಇದು ಕಾರ್ಯಕರ್ತರಿಗೆ ಬೇಸರ ತಂದಿದೆ ಎಂದು ರಾಜು ಹಾಗೂ ಪ್ರವೀಣ್ ಜಾಧವ್ ಹೇಳಿದರು.
ಗೋಷ್ಠಿಯಲ್ಲಿ ಗಂಗರಾಜ್, ಮಂಜುನಾಥ್ ಪೇಂಟರ್, ಜಿ. ದಯಾನಂದ್, ಪ್ರದೀಪ್, ಮಂಜುನಾಥ್ ಮತ್ತಿತರರು ಹಾಜರಿದ್ದರು.