SUDDIKSHANA KANNADA NEWS/ DAVANAGERE/ DATE_08-07_2025
ದಾವಣಗೆರೆ: ನಾನ್ಯಾಕೆ ಕಾಂಗ್ರೆಸ್ ಗೆ ಹೋಗಲಿ. ನಾನು ಬಿಜೆಪಿ ಪಕ್ಷ ಶಿಸ್ತಿನ ಸಿಪಾಯಿ. ನಿಜವಾದ ಕಾರ್ಯಕರ್ತ. ನಾನೇನೂ ಕೆಜೆಪಿ ಕಟ್ಟಿಲ್ಲ. ರಾಯಣ್ಣ ಬ್ರಿಗೇಡ್ ಕಟ್ಟಿಲ್ಲ. ಪ್ರಾಮಾಣಿಕ ಕಾರ್ಯಕರ್ತ ಎಂದು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹೇಳಿದರು.
ನಗರದ ಅಭಿನವ ರೇಣುಕಾ ಮಂದಿರದಲ್ಲಿ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ ಅವರ ಜನುಮದಿನದ ಪ್ರಯುಕ್ತ ಏರ್ಪಡಿಸಿದ್ದ ನಮ್ಮಾಭಿಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನದು ಕೆಲಸ ಇತ್ತು. ಹಾಗಾಗಿ
ಡಿಸಿಎಂ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದೇನೆ. ಭದ್ರಾ ಡ್ಯಾಂ ಬಳಿ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸುತ್ತಿದ್ದರಿಂದ ನಿಲ್ಲಿಸುವಂತೆ ಒತ್ತಾಯಿಸಲು ನಾನು ಮತ್ತು ಹರಿಹರ ಶಾಸಕ ಬಿ. ಪಿ. ಹರೀಶ್ ಹೋಗಿದ್ದೇವೆ. ಇದನ್ನೇ ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಿಜವಾದ ಕಾರ್ಯಕರ್ತರಿಗೆ ಚಿರಋಣಿ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ನಾನ್ಯಾಕೆ ಕೆಜೆಪಿಗೆ ಹೋಗಬೇಕು. ನಿಮ್ಮ ಜೊತೆಗಿರುತ್ತೇನೆ. ಯಾವಾಗಲೂ ಬನ್ನಿ. ನಾನಿರುತ್ತೇನೆ. ಸಂಸದನಾಗಿದ್ದಾಗ ಹೊನ್ನಾಳಿ ಹಾಗೂ ಚನ್ನಗಿರಿಗೆ ಶಂಕುಸ್ಥಾಪನೆ,
ಉದ್ಘಾಟನೆ, ಸಮಾರಂಭಗಳಿಗೆ ಹೋದಾಗ ನನ್ನನ್ನು ಅಲ್ಲಿನ ಶಾಸಕರೇ ಹೊಗಳುತ್ತಿದ್ದರು. ಜಿ. ಎಂ. ಸಿದ್ದೇಶ್ವರ ಅಭಿವೃದ್ಧಿ ಹರಿಕಾರ, ಅನುದಾನ ತಂದವರು, ಜಿಲ್ಲೆಗೆ ಹೆಚ್ಚು ಹಣ ತಂದವರು ಎಂದು ಹೇಳುತ್ತಿದ್ದವರು ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ವೇಳೆ ಯಾವುದೇ ಕೆಲಸ ಮಾಡಿಲ್ಲ. ಸಿದ್ದೇಶಪ್ಪನಿಗೆ ಟಿಕೆಟ್ ನೀಡಬೇಡಿ, ಫ್ಯಾಮಿಲಿ ಕೊಡಬೇಡಿ ಎಂದು ಲಗಾನ್ ಟೀಂ ಮಾಡಿದ್ದು ಗೊತ್ತಿದೆ. ಆದರೂ ಜನರು ಮತನೀಡಿದ್ದಾರೆ. ಅವರ ಋಣ ತೀರಿಸುವ ಭಾರ ನನ್ನ ಮೇಲಿದೆ ಎಂದು
ಹೇಳಿದರು.
ಯಾರು ಏನೇ ಬೇಕಾದರೂ ಬನ್ನಿ. ನೂರಾರು ಜನರು ಬಂದು ಹೋಗ್ತಾರೆ. ನನ್ನ ಕೆಲಸ ಮಾಡುತ್ತೇನೆ. ಸೇವೆ ಮಾಡುತ್ತೇನೆ. ಜೊತೆಯಲ್ಲಿರುತ್ತೇನೆ. ಪಕ್ಷ ಕಟ್ಟೋಣ. ಭ್ರಷ್ಟಾಚಾರ ರಹಿತ ವ್ಯಕ್ತಿಯನ್ನು ಮತ್ತೆ ಮುಖ್ಯಮಂತ್ರಿಯಾಗಿ ಮಾಡೋಣ. ಬಿಜೆಪಿ ಮತ್ತೆ ಅಧಿಕಾರಕ್ಕೆ ತರೋಣ ಎಂದು ಹೇಳಿದರು.
ನಾನು ಲೋಕಸಭಾ ಸದಸ್ಯನಾದ ಬಳಿಕ ಹೆಂಡ್ತಿ, ಮನೆ ಮಠ, ಹೆಂಡ್ತಿ ಮಕ್ಕಳನ್ನು ನೋಡಲಿಲ್ಲ. ಜನರೇ ದೇವರು ಎಂದು ಕೆಲಸ ಮಾಡಿದ ವ್ಯಕ್ತಿ ನಾನು. ಆದ್ರೆ, ಸೋತಿದ್ದೇವೆ, ಸುಮ್ಮನಿದ್ದೇವೆ. ಎಸ್. ಎಸ್. ಮಲ್ಲಿಕಾರ್ಜುನ್ ಸೋತಾಗ ಐದು ವರ್ಷ ಮನೆಯಲ್ಲಿದ್ದರಲ್ವಾ. ಮುಧೋಳದಲ್ಲಿ ಇರಲಿಲ್ವಾ. ಐದು ವರ್ಷ ನಾನು ಮನೆಯಲ್ಲಿರುತ್ತೇನೆ, ಆಮೇಲೆ ಉತ್ತರ ಕೊಡುತ್ತೇನೆ. ಅಲ್ಲಿಯವರೆಗೆ ನಾನೂ ಸುಮ್ಮನಿರುತ್ತೇನೆ ಎಂದು ಸಿದ್ದೇಶ್ವರ ಹೇಳಿದರು.