SUDDIKSHANA KANNADA NEWS/ DAVANAGERE/ DATE:14-07-2023
ಬೆಂಗಳೂರು: ಅನರ್ಹ ಸಂಸದ ರಾಹುಲ್ ಗಾಂಧಿಯವರ ಪರ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸಿದ್ದು ಒಂದು ಹಾಸ್ಯಾಸ್ಪದ ಸಂಗತಿ ಎಂದು ಭಾರತೀಯ ಜನತಾ ಪಾರ್ಟಿ (Bharatiya Janata Party) ರಾಜ್ಯ ಘಟಕವು ಟ್ವೀಟ್ (Tweet) ಮಾಡುವ ಮೂಲಕ ಲೇವಡಿ ಮಾಡಿದೆ.
ಜಾತಿನಿಂದನೆ ಅಪರಾಧವೇ, ಅದರಲ್ಲಿಯೂ ರಾಜಕೀಯ ದ್ವೇಷದಿಂದ ಭಾರತದ ಪ್ರಧಾನಿಯವರ ಜಾತಿಯನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದ್ದು ವಿದೇಶಿ ಕೈಗೊಂಬೆ ರಾಹುಲ್ ಗಾಂಧಿಯ ಅಪ್ರಬುದ್ಧತೆಗೆ ಮತ್ತು ಸಂವಿಧಾನ ವಿರೋಧಿ ಮಾನಸಿಕತೆಗೆ ಸಾಕ್ಷಿಯಾಗಿದೆ. ಇಂತಹ ಹೀನ ಮನಸ್ಥಿತಿಯುಳ್ಳ ರಾಹುಲ್ ಪರ ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದೆ.
ಹಿಂದುಳಿದ ವರ್ಗಗಳನ್ನು ಹೀಯಾಳಿಸಿದ್ದಾರೆ ಎಂಬ ಕಾರಣಕ್ಕೆ ಘನ ನ್ಯಾಯಾಲಯವು ರಾಹುಲ್‌ಗೆ ಶಿಕ್ಷೆ ನೀಡಿದ್ದು, ಕಾನೂನಿನ ಪ್ರಕಾರ ಸಹಜವಾಗಿಯೇ ಅನರ್ಹಗೊಂಡಿದ್ದಾರೆ. ಆದರೇ, ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ “ಕೈ” ಪಕ್ಷದವರು, ನ್ಯಾಯಾಂಗ ವ್ಯವಸ್ಥೆಯ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ. ಸಂವಿಧಾನದ ರಕ್ಷಕರು ಎಂದು ಬಡಾಯಿಕೊಚ್ಚಿಕೊಳ್ಳುವ ಸಿದ್ದರಾಮಯ್ಯ & ಟೀಂ, ಈ ನೆಲದ ಕಾನೂನು ಮತ್ತು ಸಂವಿಧಾನಕ್ಕೆ ಗೌರವ ನೀಡುತ್ತಿರುವ ಪರಿ ಇದು ಎಂದು ವ್ಯಂಗ್ಯವಾಡಿದೆ.
ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಈ ನೆಲದ ಕಾನೂನು & ಸಂವಿಧಾನದ ಬಗ್ಗೆ ಗೌರವವಿದ್ದರೇ, ರಾಹುಲ್ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಿತ್ತು. ತನ್ನ ಸ್ವಾರ್ಥ ರಾಜಕಾರಣಕ್ಕಾಗಿ, ವಿದೇಶಗಳಿಗೆ ತೆರಳಿ ಭಾರತದ ಅಸ್ಮಿತೆಯನ್ನು ಕೆಣಕುವ ಹಾಗೂ ಭಾರತದ ಸಾರ್ವಭೌಮತ್ವವನ್ನು ವ್ಯಂಗ್ಯ ಮಾಡುವ ರಾಹುಲ್‌ರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಬೇಕಿತ್ತು. ಭಾರತದ ಅಸ್ಮಿತೆಯ ಪರಮವೈರಿ ಜಾರ್ಜ್ ಸೋರಸ್ ಸಂಗಡಿಗರ ಜೊತೆ ಜೊತೆಗೆ ಅಮೇರಿಕಾದಲ್ಲಿ ರಾಹುಲ್ ಭಾರತವನ್ನು ಅವಮಾನಿಸುತ್ತಾರೆ. ಅದೇ ರಾಹುಲ್ ಭಾರತದ ಪರಮವೈರಿ ಚೀನಾಕ್ಕೆ ಕದ್ದು ಮುಚ್ಚಿ ಭೇಟಿ ಮಾಡುತ್ತಾರೆ. ಇದೇ ರಾಹುಲ್ ಇಂಗ್ಲೆಂಡ್ ಗೆ ಭೇಟಿ ನೀಡಿ, ಅಲ್ಲಿನ ಪ್ರಜೆಗಳನ್ನು, ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಿ ಎಂದು ಕರೆ ಕೊಡುತ್ತಾರೆ. ಕಾಂಗ್ರೆಸ್ಸಿಗರೇ, ಇದರ ವಿರುದ್ಧ ಪ್ರತಿಭಟಿಸಲು ನಿಮಗೆ ಧೈರ್ಯವಿದೆಯೇ…? ಎಂದು ಪ್ರಶ್ನೆ ಮಾಡಿದೆ.
Bjp Tweet, Bjp Coment, Bjp Questions, Bjp Slams Congress