SUDDIKSHANA KANNADA NEWS/ DAVANAGERE/ DATE:24-11-2023
ಬೆಂಗಳೂರು: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿಯ ಸಿಬಿಐ ತನಿಖೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಸಾರಸಗಟಾಗಿ ಹಿಂಪಡೆದು, ರಾಜ್ಯವನ್ನು ಗೂಂಡಾ, ಭ್ರಷ್ಚಾಚಾರಿಗಳ ಅಡುಗುದಾಣ ಮಾಡುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು, ನ್ಯಾಯ, ಪ್ರಾಮಾಣಿಕತೆ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯರವರೇ, ಡಿ. ಕೆ. ಶಿವಕುಮಾರ್ 5 ವರ್ಷಗಳಲ್ಲಿ 380 ಪಟ್ಟು ಅಕ್ರಮ ಆಸ್ತಿಯ ಗಂಟು ಮಾಡಿಕೊಂಡರೂ ಚಕಾರ ಎತ್ತದ ನೀವು, ಈಗ ಅವರ ಮೇಲಿನ ಸಿಬಿಐ ತನಿಖೆಯನ್ನೇ ಹಿಂಪಡೆದು ಭ್ರಷ್ಟರ ಮಹಾಪೋಷಣೆ ಮಾಡುತ್ತಿದ್ದೀರಿ. ಕಾಂಗ್ರೆಸ್ ಸರ್ಕಾರ ಒಂದು ಭ್ರಷ್ಟರ ಕೂಟ ಎಂದು ಆರೋಪಿಸಿದೆ.
ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಮಾಡುತ್ತಿರುವುದೆಲ್ಲಾ ಬರೀ ಬೂಟಾಟಿಕೆಯ ರಾಜಕಾರಣ. ಕೇಂದ್ರ ಸರ್ಕಾರ ಕೊಡುವ ಅಕ್ಕಿಗೂ ತಮ್ಮ ಹೆಸರು ಹಾಕಿಕೊಂಡು ಲಾಭ ಪಡೆಯುವ ನಾಟಕ ಇನ್ನು ಮುಂದೆ ನಡೆಸಲು ಸಾಧ್ಯವಿಲ್ಲ. ಆದರೆ ಅದೇ ನಾಟಕದ ಕತೆ ಹಿಡಿದು ಕಾಂಗ್ರೆಸ್ ಈಗ ಹೊಸ ನಾಟಕ ಮಾಡುತ್ತಿದೆ ಎಂದು ಕಿಡಿಕಾರಿದೆ.
ತಮಿಳುನಾಡು ಸಿಎಂ ಸ್ಟಾಲಿನ್‌ರ ಹಿತ ಕಾಯಲೆಂದೇ, ಕರ್ನಾಟಕದ ಸಿಎಂ ಮತ್ತು ಡಿಸಿಎಂ ಆಗಿರುವ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರು, ಕರ್ನಾಟಕದ ಕಾವೇರಿಯನ್ನು ಬರಿದು ಮಾಡಲೇಬೇಕೆಂದು ಸದಾ “ಸಿದ್ದ”ರಾಗಿ ನಿಂತಿದ್ದಾರೆ. ಬರದಿಂದ ದಿನದೂಡುವ ಪರಿಸ್ಥಿತಿಯೇ ಬಿಗಡಾಯಿಸಿದರೂ, ಈಗ ಮತ್ತೊಮ್ಮೆ ಕೆ.ಆರ್.ಎಸ್.ನಿಂದ ಪ್ರತಿನಿತ್ಯ 2700 ಕ್ಯೂಸೆಕ್ಸ್ ನೀರು ಹರಿಸಬೇಕಾಗಿ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಜನತೆಗೆ ಸಂಕಷ್ಟ ತಂದಿರುವುದು ಅತ್ಯಂತ ಅಮಾನವೀಯ ಎಂದು ಹೇಳಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ಫೇಲ್! ಹೀಗೆಂದು ಸರ್ಟಿಫಿಕೇಟ್ ನೀಡಿರುವುದು ನಾವಲ್ಲ, ನಿಮ್ಮದೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಬಸವರಾಜ ರಾಯರೆಡ್ಡಿರವರು. ಸರ್ಕಾರಕ್ಕೆ 6 ತಿಂಗಳು ತುಂಬಿದರೂ, ಬಿಡಿಗಾಸು ಸಹ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಿಲ್ಲ ಎಂಬುದನ್ನು ನಿಮ್ಮ ಪಕ್ಷದ ಶಾಸಕರುಗಳೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ನೀವು ಸರ್ಕಾರವನ್ನು ಸಂಪೂರ್ಣ ದಿವಾಳಿ ಮಾಡಿ, ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಿರಾ ಎಂಬುದಕ್ಕಿಂತ ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು ಬೇಕು ಎಂದು ಪ್ರಶ್ನಿಸಿದೆ.