SUDDIKSHANA KANNADA NEWS| DAVANAGERE| DATE:20-08-2023
ಬೆಂಗಳೂರು: ಮುತ್ತಾತನಿಂದ ಮರಿ ಮೊಮ್ಮಗನವರೆಗೂ ಕಾಂಗ್ರೆಸ್‌ನ ಗರೀಬಿ ಹಠಾವೋ ಎಂಬುದು ಘೋಷಣೆ ಆಗಿಯೇ ಉಳಿಯಿತು ಹೊರತು, ಕೊನೆಯವರೆಗೂ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ ಎಂದು ಬಿಜೆಪಿ ಟ್ವೀಟಾಸ್ತ್ರ ಮಾಡಿದೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದ ಆಡಳಿತ ಚುಕ್ಕಾಣಿ ಹಿಡಿದ ನಂತರ, ಕೋವಿಡ್‌ನಂತಹ ಆರ್ಥಿಕ ಸಂಕಷ್ಟದ ನಡುವೆಯೂ ಭಾರತೀಯರ ಆರ್ಥಿಕತೆ ಗಣನೀಯವಾಗಿ ಪ್ರಗತಿ ಸಾಧಿಸಿದೆ ಎಂದು ಹೇಳಿದೆ.
ಈ ಅವಧಿಯಲ್ಲಿ ಬಡತನದ ರೇಖೆಯಲ್ಲಿದ್ದ ಕುಟುಂಬಗಳು ಆರ್ಥಿಕ ಪ್ರಗತಿ ಸಾಧಿಸಿ ಮಧ್ಯಮ ವರ್ಗದ ಕುಟುಂಬಗಳಾಗಿ ತೇರ್ಗಡೆ ಹೊಂದಿವೆ. ಈ ಬಗ್ಗೆ ಎಸ್.ಬಿ.ಐ ಒಂದು ಸಂಶೋಧನಾ ವರದಿ ಪ್ರಕಟಿಸಿದ್ದು, ಭವಿಷ್ಯದ ಭಾರತದ ಆರ್ಥಿಕ ಸ್ಥಿತಿಗತಿಯನ್ನು ಆ ವರದಿ ಹೊಂದಿದೆ ಎಂದು ತಿಳಿಸಿದೆ.
ಎಸ್.ಬಿ.ಐ ಸಂಶೋಧನಾ ವರದಿ ಪ್ರಕಾರ, 2012-13 ನೇ ಆರ್ಥಿಕ ವರ್ಷದಲ್ಲಿ 4.4 ಲಕ್ಷ ಇದ್ದ ಭಾರತದ ಸರಾಸರಿ ಆದಾಯವು, 2022-23 ನೇ ಸಾಲಿಗೆ ₹13 ಲಕ್ಷಕ್ಕೆ ಏರಿದೆ. ಅಂದರೆ ಕಳೆದ ವರ್ಷಗಳಲ್ಲಿ ಭಾರತದ ಸರಾಸರಿ ಆದಾಯವು ಮೂರು ಪಟ್ಟು ಹೆಚ್ಚಳ ಕಂಡಿದೆ ಎಂದು ಬಿಜೆಪಿ ತಿಳಿಸಿದೆ.
ಶೇ. 13.6 ರಷ್ಟು ಪ್ರತಿಶತ ಜನಸಂಖ್ಯೆಯು ಕಡಿಮೆ ಆದಾಯದ ಸ್ತರವನ್ನು ತೊರೆದು, ಮೇಲ್ಮುಖವಾಗಿ ವಲಸೆ ಬಂದಿರುವುದು ಭಾರತದ ಪ್ರಗತಿಯ ದ್ಯೋತಕ. 2047ಕ್ಕೆ ಭಾರತ ವಿಶ್ವಗುರುವಾಗಲಿದೆ ಎಂಬ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸಿಗೆ ಪೂರಕವಾಗಿ, ಪ್ರಸ್ತುತ 2 ಲಕ್ಷವಿರುವ ಭಾರತದ ತಲಾ ಆದಾಯವು, 2047ರ ವೇಳೆಗೆ 14.9 ಲಕ್ಷ ತಲುಪಲಿದೆ ಎಂಬ ಅಂಶ ವರದಿಯಲ್ಲಿ ಪ್ರಕಟವಾಗಿದೆ.
ಎಸ್.ಬಿ.ಐ ವರದಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ 5 ಲಕ್ಷದಿಂದ 10 ಲಕ್ಷ ಆದಾಯದ ಗುಂಪಿನಲ್ಲಿ ಶೇ.8.1ರಷ್ಟು ಜನಸಂಖ್ಯೆ ಹೆಚ್ಚಿದ್ದು, 10 ಲಕ್ಷದಿಂದ 20 ಲಕ್ಷ ಆದಾಯದ ಗುಂಪಿನಲ್ಲಿ ಶೇ.3.8ರಷ್ಟು ಜನಸಂಖ್ಯೆ ಹೆಚ್ಚಿದೆ. ಇದೇ ರೀತಿ 20 ಲಕ್ಷದಿಂದ ₹50 ಲಕ್ಷ ಆದಾಯದ ಗುಂಪಿನಲ್ಲಿ ಶೇ.1.5ರಷ್ಟು ಜನಸಂಖ್ಯೆ ಹೆಚ್ಚಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವು ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಈ ದಶಕದಲ್ಲಾದ ಭಾರತೀಯರ ಆರ್ಥಿಕ ಪ್ರಗತಿಯೇ, ಮೋದಿ ಸರ್ಕಾರದ ಸಾಧನೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ.