ದಾವಣಗೆರೆ: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಮೊದಲು ಆರಂಭವಾಗಿದ್ದು, ರೈತರು ಬಿತ್ತನೆ ಚಟುವಟಿಕೆ ಭರ್ಜರಿಯಾಗಿ ನಡೆಸುತ್ತಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಬೇಕಾದ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡುತ್ತಿಲ್ಲ. ರಸಗೊಬ್ಬರದ ತೀವ್ರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯಲ್ಲಿಯು ವ್ಯತ್ಯೆಯ ಕಂಡುಬಂದಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲದಿರುವುದು ಮತ್ತು ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
READ ALSO THIS STORY: ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಬ್ಯಾಂಕ್ ಅಧಿಕಾರಿ ನೇಮಕಾತಿ 2025: 2500 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ನಗರದ ಬಿಜೆಪಿ ಕಚೇರಿಯಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಯದೇವ ವೃತ್ತದವರೆಗೆ ಬಂದರು. ಆ ಬಳಿಕ ಎಸಿ ಕಚೇರಿ ಬಳಿಯ ಪಿ ಬಿ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.
ಆಗ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು 38 ಜನರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ರೈತರ ಹಿತಾಸಕ್ತಿ ಮರೆತು ದೆಹಲಿ ದಂಡಯಾತ್ರೆ ಮಾಡುತ್ತಾ ಗದ್ದುಗೆ ಗುದ್ದಾಟದಲ್ಲಿ ಮಗ್ನರಾಗಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿಯವರಲ್ಲಿ ಉದಾಸೀನತೆಯಿಂದ ಕೃಷಿಕರ ಕಾಳಜಿ ಕೊರತೆ ಎದ್ದು ಕಾಣುತ್ತಿದೆ. ಸಂಪೂರ್ಣವಾಗಿ ಇದು ರೈತ ವಿರೋಧಿ ಸರ್ಕಾರವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಬೆಲೆ ಕುಸಿತದಿಂದ ರೈತರು ಬಹಳಷ್ಟು ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು ಸಹ ಭತ್ತ ಖರೀದಿ ಕೇಂದ್ರ ತೆರೆದರು ಸಹ ಒಂದು ಚೀಲ ಭತ್ತ ಖರೀದಿ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಮತ್ತು ಜಿಲ್ಲಾಡಳಿತ ಆಡಳಿತ ವೈಫಲ್ಯದಿಂದ ಮತ್ತು ಇಚ್ಚಾಶಕ್ತಿ ಕೊರತೆಯಿಂದ ಸಂಪೂರ್ಣವಾಗಿ ಸೋತಿತ್ತು. ಜಿಲ್ಲೆಯಲ್ಲಿ ಸಮೃದ್ಧಿಯಾಗಿ ಮಳೆ ಸುರಿದಿದೆಯಾದರೂ ಭದ್ರಾ ಡ್ಯಾಂ ನೀರು ಹರಿಸಲು ವಿಳಂಬವಾಯಿತು ಎಂದು ಆರೋಪಿಸಿದರು.
ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯಲು ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲು ಅಗತ್ಯ ಕ್ರಮವಹಿಸಬೇಕು. ಸಬ್ಸಿಡಿಯುಕ್ತ ರಸಗೊಬ್ಬರಗಳಾದ ಯುರಿಯಾ/ಡಿಎಪಿ/ಇತರೆ ರಸಗೊಬ್ಬರಗಳನ್ನು ಮಾರಾಟ ಮಾಡುವಾಗ ಅನುಪಯುಕ್ತ ಕೀಟನಾಶಕ/ಬಯೋ-ಸ್ಟಿಮ್ಯುಲೆಂಟ್/ನ್ಯಾನೋ ಗೊಬ್ಬರ ಅಥವಾ ಬೆಳೆ ಪೋಷಕಾಂಶ ಎಂದು ಹೇಳಿ ಕೊಡುವುದನ್ನು ಜೋಡಿಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಇದು ರೈತರನ್ನು ವಂಚಿಸುವ ಕುತಂತ್ರ. ರಸಗೊಬ್ಬರಗಳು 1955ರ ಕಾಯ್ದೆ ಅನ್ವಯ ಅಗತ್ಯ ವಸ್ತುಗಳಾಗಿದ್ದು, ಸಬ್ಸಿಡಿಯುಕ್ತ ರಸಗೊಬ್ಬರಗಳೊಂದಿಗೆ ಯಾವುದಾದರೂ ಅನುಪಯುಕ್ತ ಉತ್ಪನ್ನಗಳನ್ನು ಅನಧಿಕೃತವಾಗಿ ಜೋಡಿಸಿ ರೈತರಿಗೆ ಮಾರಾಟ ಮಾಡುವುದು ಕಾಯ್ದೆಯ ಉಲ್ಲಂಘನೆ ಮತ್ತು ಶಿಕ್ಷಾರ್ಹ ಅಪರಾಧ. ಇಂತಹ ಜೋಡಿಸಿ ಮಾರಾಟ ಮಾಡುವ ಮಾರಾಟಗಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ನಕಲಿ ಬೀಜ ಪೂರೈಸುವ ಮೂಲಕ ಕೃಷಿ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಿ ರೈತರನ್ನು ವಂಚಿಸುವ ಪ್ರಕರಣಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ನಕಲಿ ರಸಗೊಬ್ಬರ ಮಾರಾಟಗಾರರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ, ಅಕ್ರಮ ದಾಸ್ತಾನು, ಎಂ.ಆರ್.ಪಿ ದರಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್ ರಾಜಶೇಖರ್ ನಾಗಪ್ಪ, ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಎಂ ಬಸವರಾಜನಾಯ್ಕ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಲೋಕಿಕೆರೆ ನಾಗರಾಜ್, ಚಂದ್ರಶೇಖರ ಪೂಜಾರ, ಆಲೂರು ನಿಂಗರಾಜು, ಧನಂಜಯ ಕಡ್ಲೆಬಾಳ್, ಅನಿಲಕುಮಾರನಾಯ್ಕ, ಐರಣಿ ಅಣ್ಣೇಶ್, ತಾರೇಶನಾಯ್ಕ, ಅರಕೆರೆ ನಾಗರಾಜ್, ಬಲ್ಲೂರು ಬಸವರಾಜು, ಕೋಟೆಹಾಳ್ ಸಿದ್ದೇಶ್, ಬಾತಿ ಸಿದ್ದೇಶ್, ಕಲ್ಪನಹಳ್ಳಿ ರೇವಣಸಿದ್ದಪ್ಪ, ಬಿ.ಆನಂದ, ಲಿಂಗರಾಜರೆಡ್ಡಿ, ರಾಜುವೀರಪ್ಪ, ಪ್ರವೀಣ್ ಜಾಧವ್, ಎನ್.ಹೆಚ್.ಹಾಲೇಶನಾಯಕ, ಸಂತೋಷಜಾಧವ್, ನವೀನಕುಮಾರ, ಬಸವರಾಜಯ್ಯ ಮುಂತಾದವರು ಉಪಸ್ಥಿತರಿದ್ದರು.