ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗೆಲುವು ಶಾಶ್ವತವಲ್ಲ, ಸೋಲು ಅಂತ್ಯವಲ್ಲ: ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಈ ಮಾತು ಬಂದಿದ್ಯಾಕೆ…? 

On: May 24, 2023 11:33 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-05-2023

ದಾವಣಗೆರೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನುಭವಿಸಿದೆ. ದಾವಣಗೆರೆ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ಅದೂ ಕಡಿಮೆ ಅಂತರದಲ್ಲಿ. ಹರಿಹರ ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ಬಿಜೆಪಿ ನಾಯಕರು ಈಗ ಆತ್ಮಾವಲೋಕನ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಸಭೆ ನಡೆಸಿ ಸೋಲಿಗೆ ಏನು ಕಾರಣ ಎಂಬ ಕುರಿತಂತೆ ಎಲ್ಲರ ಅಭಿಪ್ರಾಯ ಪಡೆಯುವ ಪ್ರಯತ್ನ ಮಾಡಲಾಗಿದೆ.

ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಎರಡೂ ಕ್ಷೇತ್ರಗಳಲ್ಲಿಯೂ 24 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋತಿದೆ. 2018ರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಎಸ್. ಎ. ರವೀಂದ್ರನಾಥ್ ಗೆಲುವಿನ ನಗೆ ಬೀರಿದ್ದರು. ಆದ್ರೆ. ಈ ಬಾರಿ ಕ್ಷೇತ್ರ ಕಳೆದುಕೊಳ್ಳಲು ಕಾರಣಗಳು ಏನು ಎಂಬ ಕುರಿತಂತೆ ಚಿಂತನ – ಮಂಥನ ನಡೆಯಿತು.

ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸೋಲಿನ ಕುರಿತಂತೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾದವು. ಬಿಜೆಪಿ ರಾಜ್ಯ ನಾಯಕರ ಕೆಲ ನಿರ್ಧಾರಗಳು ಸೋಲಿಗೆ ಕಾರಣವಾದರೆ, ಗೃಹಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್, ಪದವೀಧರರು, ಡಿಪ್ಲೋಮೋ ಪದವೀಧರರಿಗೆ ಸಹಾಯ ಧನ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳು ಕಾಂಗ್ರೆಸ್ ಗೆ ವರವಾದವು.

ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ಜಾಸ್ತಿ ಇವೆ. ಈ ಸಮುದಾಯವು ಮೊದಲಿನಿಂದಲೂ ಕಾಂಗ್ರೆಸ್ ಅನ್ನು ಬೆಂಬಲಿಸಿಕೊಂಡು ಬಂದಿದೆ. ಈ ಬಾರಿಯೂ ಕೈ ಹಿಡಿದಿದೆ. ಮುಸ್ಲಿಂರ ಮೀಸಲಾತಿ ರದ್ದು ಸೇರಿದಂತೆ ಕೆಲ ನಿರ್ಧಾರಗಳು ನಮಗೆ ಮುಳುವಾದವು. ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ನಾಯಕರ ಪ್ರಚಾರದ ಕೊರತೆಯೂ ಪರಾಜಯಕ್ಕೆ ಕಾರಣವಾಗಿದೆ ಎಂದು ಕೆಲ ಕಾರ್ಯಕರ್ತರು ಅಭಿಪ್ರಾಯಪಟ್ಟರು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಮತಗಳು ಬಂದಿವೆ. ನಮಗೆ ಬಂದಿರುವುದು ಕಡಿಮೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಗ್ರಾಮೀಣ ಭಾಗದಲ್ಲಿ ಬಂದಿದ್ದವು. ಆದ್ರೆ, ಈ ಬಾರಿ ಕಡಿಮೆ ಆಗಿದೆ. ಇದೂ ಸಹ ಬಿಜೆಪಿ ಹಿನ್ನೆಡೆಗೆ ಕಾರಣ ಎಂದು ವಿಚಾರ ಮಂಡಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿಯೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿನ ಸೋಲಿನ ಕುರಿತಂತೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಅವರು, ಗೆಲುವು ಶಾಶ್ವತವಲ್ಲ, ಸೋಲು ಅಂತ್ಯವಲ್ಲ. ಆದರೆ ನಾವು ಮಾಡುವ ಜನಪರ ಕಾರ್ಯಕ್ರಮಗಳು ಮಾತ್ರ ಎಂದಿಗೂ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂಬ ಸಂಕಲ್ಪದೊಂದಿಗೆ ಕಾರ್ಯಕರ್ತರ ಆತ್ಮಾವಲೋಕನ ಸಭೆ ನಡೆಸಲಾಗಿದೆ.
ಈ ಬಾರಿ ಬಿಜೆಪಿ ಗೆಲ್ಲುವ ವಿಶ್ವಾಸವಿತ್ತು. ಹೋದ ಕಡೆಗಳೆಲೆಲ್ಲಾ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ವಾರ್ಡ್ ಗಳಲ್ಲಿ ಮುನ್ನಡೆ ದೊರೆತಿದೆ. ಈ ಭಾಗದ ಜನರು ಬಿಜೆಪಿ ಜೊತೆ ಇದ್ದಾರೆ. ಕಾಂಗ್ರೆಸ್ ನ
ಗ್ಯಾರಂಟಿಗಳು, ಹಣ ಹಂಚಿದ್ದು, ಮೀಸಲಾತಿ ಗೊಂದಲ ಸೇರಿದಂತೆ ಕೆಲ ನಿರ್ಧಾರಗಳೇ ಪಕ್ಷಕ್ಕೆ ಮುಳುವಾದವು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ ಎಂದರು.

ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್ ಮಾತನಾಡಿ, ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಸೋತಿರುವ ಕಾರಣಕ್ಕೆ ಧೃತಿಗೆಡುವುದು ಬೇಡ. ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಬಸವರಾಜ್, ಹನುಮಂತಪ್ಪ, ಹೆಚ್. ಎನ್. ಶಿವಕುಮಾರ್, ಪಕ್ಷದ ಪ್ರಮುಖರು , ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment