SUDDIKSHANA KANNADA NEWS/ DAVANAGERE/ DATE:03-05-2023
ದಾವಣಗೆರೆ (DAVANAGERE): ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ (CONGRESS)ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ (BJP) ಜಿಲ್ಲಾ ಘಟಕ, ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಬಜರಂಗದಳವನ್ನು ಪಿಎಫ್ಐ ಜೊತೆಗೆ ಸಮೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷವು ಹಿಂದೂ ಭಯೋತ್ಪಾದನೆ ಎಂಬ ಸುಳ್ಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಹಿಂದೂ ಭಯೋತ್ಪಾದನೆ ಭಾರತದ ದೊಡ್ಡ ಸಮಸ್ಯೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬಿಜೆಪಿ ಜಾರಿಗೆ ತಂದಿರುವ ಪ್ರತಿಯೊಂದು ಕಾನೂನನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ರೂದಲ್ಲಿ ನೀಡಿದೆ. ಗೋ ಹತ್ಯೆ, ಪಿಎಫ್ ಐ (PFI) ಮೇಲಿನ ನಿಷೇಧ ತೆಗೆದುಹಾಕಲು ಅದು ಬಯಸುತ್ತಿದೆ ಎಂದು ಆರೋಪಿಸಿದರು.
ಬಜರಂಗ ಬಲಿ, ವಾಯುಪುತ್ರ ಹನುಮಾನ್, ಶ್ರೀರಾಮನ ಅತ್ಯಂತ ನಿಷ್ಟಾವಂತ ಭಕ್ತನ ಜನ್ಮಸ್ಥಳವಾದ ಕರ್ನಾಟಕದಲ್ಲಿ ಇದೆಲ್ಲಾ ನಡೆಯುತ್ತಿರುವುದು ಅತ್ಯಂತ ವಿಷಾದದ ಸಂಗತಿ. ಇಂಥ ಭರವಸೆಗಳನ್ನು ನೀಡಿದ್ದಕ್ಕಾಗಿ ಕಾಂಗ್ರೆಸ್ (CONGRESS) ಕ್ಷಮೆಯಾಚಿಸಬೇಕು. ಇದು ತಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ನ ಆಧುನಿಕ ಅವತಾರದಿಂದ ಮಾಡಿದಂತಿದೆ ಎಂದು ಕಿಡಿಕಾರಿದರು.
ಪಿಎಫ್ಐ (PFI)ಮಾಡಿದ ಘೋರ ಅಪರಾಧಗಳು ಜಗಜ್ಜಾಹೀರಾಗಿದೆ. ಬಜರಂಗದಳ ನಿಷೇಧ ಮಾಡಲು ಹೊರಟಿರುವುದು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಗೆ ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ, ಬಜರಂಗದಳವನ್ನು ನಿಷೇಧಿಸುವ ಪ್ರತಿಜ್ಞೆ ಮಾಡಿದೆ ಏಕೆ? ಬಜರಂಗದಳದ ಮೇಲೆ ಕಾಂಗ್ರೆಸ್‌ಗೆ ಯಾವ ದ್ವೇಷವಿದೆ ಎಂದು ನಮಗೆ ನಾವೇ ಕೇಳಿಕೊಳ್ಳೋಣ. ಒಂದು ಸಂಘಟನೆಯು ಗೋ ಮಾತೆಯನ್ನು ರಕ್ಷಿಸುವುದು ತಪ್ಪೇ. ಅಯೋಧ್ಯೆಯಲ್ಲಿ ರಾಮಮಂದಿರ ಮರುಸ್ಥಾಪನೆಗೆ ಆಗ್ರಹಿಸುವುದು ತಪ್ಪೇ? ನಮ್ಮ ಸಹಸ್ರಮಾನಗಳ ಹಳೆಯ ಸಾಂಸ್ಕೃತಿಕ ಪರಂಪರೆಯನ್ನು ಪುನರುಜೀವನಗೊಳಿಸುವುದು ತಪ್ಪೇ? ಭಾರತದಲ್ಲಿ ಸಾಮಾಜಿಕ ಸಾಮರಸ್ಯವನ್ನು ಹುಡುಕುವುದು ತಪ್ಪೇ? ಭಗವಾನ್ ಆಂಜನೇಯ ಅವರು ಹುಟ್ಟಿದ ನಾಡು ಕರ್ನಾಟಕದಲ್ಲಿ ರಿವರ್ಸ್ ಗೇರ್ ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಚಂದ್ರ ಪ್ರಭುವಿನ ಪರಂಪರೆಯನ್ನು ನಾಶಮಾಡಲು ಕಾಂಗ್ರೆಸ್ ಏಕ ಮನಸ್ಸಿನ ಗಮನವನ್ನು ಹೊಂದಿದೆ. ಇದು ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ ಪ್ರತಿಯೊಂದು ರಚನೆಯನ್ನು ಕೆಡವಲು ಪ್ರಯತ್ನಿಸುತ್ತದೆ. ನಾವು ನಂಬಿದ ಇತಿಹಾಸಗಳ ಪ್ರತಿಯೊಂದು ಅಂಶವನ್ನು ಅಳಿಸಿಹಾಕಲು ಕಾಂಗ್ರೆಸ್ ಮುಂದಾಗಿದೆ ಎಂದು ಆರೋಪಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದ್ದಕ್ಕಾಗಿ ಶ್ರೀರಾಮನಲ್ಲಿ ನಂಬಿಕೆಯಿರುವ ಪ್ರತಿಯೊಬ್ಬ ಭಾರತೀಯನನ್ನು ಭಯೋತ್ಪಾದಕ ಎಂದು ಬಣ್ಣಿಸಲು ಪಿಎಫ್ ಐ (PFI) ಎಂದು ಒಂದೇ ಉಸಿರಿನಲ್ಲಿ ಬಜರಂಗದಳವನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ (CONGRESS) ತನ್ನ ಕೋಮುವಾದಿ ಅಜೆಂಡಾವನ್ನು ಬಹಿರಂಗಪಡಿಸಿದೆ ಎಂದರು.
ಗೋಷ್ಠಿಯಲ್ಲಿ ಗುಜರಾತ್ ನ ಹಿರಿಯ ಶಾಸಕ ಕಾಂತಿಬಾವಿ ಮೊರ್ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಶಿವಶಂಕರ್, ಲಕ್ಷ್ಮಣ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಮತ್ತಿತರರು ಹಾಜರಿದ್ದರು.