SUDDIKSHANA KANNADA NEWS/ DAVANAGERE/ DATE:10-02-2025
ಬೆಂಗಳೂರು: ಕರ್ನಾಟಕ ಬಿಜೆಪಿ ಭಿನ್ನಮತ ತಾರಕಕ್ಕೇರಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಹಾಗೂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಭಿನ್ನಮತ ಈಗ ರಾಷ್ಟ್ರ ರಾಜಧಾನಿ ತಲುಪಿದೆ.
ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹೈಕಮಾಂಡ್ ಭಿನ್ನಮತ ಸರಿಪಡಿಸಲು ಮುಂದಾಗಿದೆ. ವಿಜಯೇಂದ್ರ ಹಾಗೂ ಯತ್ನಾಳ್ ಗೆ ಬುಲಾವ್ ನೀಡಿದ್ದು, ಇಬ್ಬರೂ ದೆಹಲಿಗೆ ತಲುಪಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಾಧ್ಯವಾದರೆ ನರೇಂದ್ರ ಮೋದಿ ಅವರೂ ಈ ಇಬ್ಬರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಕಳೆದ ಕೆಲವು ತಿಂಗಳಿನಿಂದಲೂ ಹಾದಿರಂಪ, ಬೀದಿರಂಪ ಮಾಡಿಕೊಂಡು ಬಿಜೆಪಿಯೊಳಗಿನ ಅಸಮಾಧಾನದ ಹೊಗೆ ಹೆಚ್ಚಾಗುತ್ತಿದೆ. ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ದಂಗೆ ಎದ್ದಿರುವ ಯತ್ನಾಳ್ ಶತಾಯಗತಾಯ ಹೋರಾಟ ನಡೆಸುತ್ತಿದ್ದಾರೆ. ವಿಜಯೇಂದ್ರ ಮುಂದುವರಿಯಲೇಬಾರದೆಂದು ಪಟ್ಟು ಹಿಡಿದಿರುವ ಯತ್ನಾಳ್, ರಣತಂತ್ರ ಹೆಣೆದಿದ್ದಾರೆ.
ಈ ನಡುವೆ ಈ ಎರಡೂ ಬಣದವರನ್ನು ಬಿಟ್ಟು ಬೇರೆಯವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪ ಹೈಕಮಾಂಡ್ ಮುಂದಿದೆ. ಆದ್ರೆ, ಇದು ಎಷ್ಟು ಕಾರ್ಯಸಾಧು, ಪಕ್ಷ ಸಂಘಟನೆ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.