SUDDIKSHANA KANNADA NEWS/ DAVANAGERE/ DATE:25-11-2023
ಬೆಂಗಳೂರು: ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಇರುವ ಕಾಂಗ್ರೆಸ್ ಸರ್ಕಾರ!. ಇದು ಬಿಜೆಪಿ ಮಾಡಿರುವ ಕಟು ಟೀಕೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕವು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಜೈಲಿನಲ್ಲಿರುವ ಖೈದಿಯಂತೆ ಬಿಂಬಿಸಿ, ಸ್ವಯಂಘೋಷಿತ ನಿರಪರಾಧಿ ಎಂಬ ಬೋರ್ಡ್ ಹಾಕಿಕೊಂಡಿರುವ ಫೋಟೋ ಹಾಕಿ ಬಿಜೆಪಿ ವ್ಯಂಗ್ಯವಾಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐಗೆ ವಹಿಸಿದ್ದ ಪ್ರಕರಣ ವಾಪಸ್ ಪಡೆದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಹಿಂಪಡೆದಿರುವುದಕ್ಕೆ ಈ ರೀತಿ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದೆ.
ಮಾತ್ರವಲ್ಲ, ಟ್ವೀಟಾಸ್ತ್ರ ಮುಂದುವರಿಸಿರುವ ಬಿಜೆಪಿಯು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ಬಾಣಗಳ ಸುರಿಮಳೆಯನ್ನೇ ಸುರಿಸಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತವು ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಸಹ ನರಕಸದೃಶ್ಯವಾಗಿದೆ. ಇತ್ತ ಮಕ್ಕಳ ಬಿಸಿಯೂಟಕ್ಕೆ ಕನಿಷ್ಠ ಅನುದಾನ ಇಲ್ಲ, ಅತ್ತ ಬಾಣಂತಿಯರಿಗೆ ಸಂಪೂರ್ಣ ಕೊಳೆತು ಹೋದ ಮೊಟ್ಟೆಗಳು. ಸಿಎಂ ಸಿದ್ದರಾಮಯ್ಯ ಅವರೇ, ಇದೇನಾ ನಿಮ್ಮ ಸರ್ಕಾರದ ಅಸಲಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ..! ಎಂದು ವ್ಯಂಗ್ಯವಾಡಿದೆ.
ರಾಜ್ಯದಲ್ಲಿ ವಿದ್ಯುತ್ ಅವಗಢಗಳು ಅಮಾಯಕರ ಸಾವಿಗೆ ಕಾರಣವಾಗುತ್ತಿವೆ. ನಿರ್ವಹಣೆ ಇಲ್ಲದೆ ವಿದ್ಯುತ್ ಜಾಲವನ್ನು ಕೆ. ಜೆ. ಜಾರ್ಜ್ ಅವರು ಮೃತ್ಯುಜಾಲವನ್ನಾಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅರ್ಧಕ್ಕರ್ಧ ಶಾಸಕರು ಕಾಣೆಯಾಗಿದ್ದರೆ, ಉಳಿದವರು ಕಲೆಕ್ಷನ್ ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಕರ್ನಾಟಕದ ಜನ ಬೀದಿ ಬೀದಿಯಲ್ಲಿ ಪ್ರಾಣತೆತ್ತರೂ ಚಿಂತೆಯಿಲ್ಲದ ಸಿದ್ದರಾಮಯ್ಯ ಅವರು ಮಾತ್ರ ಸಂತೆಯಲ್ಲೂ ನಿದ್ದೆ ಎಂಬಷ್ಟು ಹಾಯಾಗಿದ್ದಾರೆ ಎಂದು ಲೇವಡಿ ಮಾಡಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತವೂ, ರಾಜ್ಯವನ್ನು ಅರಾಜಕತೆಯ ಬೀಡನ್ನಾಗಿಸಿದೆ. ರೌಡಿಗಳು, ಗೂಂಡಾಗಳಿಗೆ ಕಾನೂನಿನ ಭಯವಿಲ್ಲ, ಜೈಲಿನಲ್ಲಿಯೇ ಖೈದಿಗಳು ಜನ್ಮದಿನ ಆಚರಿಸಿಕೊಳ್ಳುವಷ್ಟು ಸೊಕ್ಕಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಡಾ. ಪರಮೇಶ್ವರ್ ಅವರೇ, ನೀವು ಈ ರಾಜ್ಯದ ಗೃಹ ಸಚಿವರು ಎಂಬುದನ್ನು ನಾವೇ ನೆನಪಿಸುತ್ತಿದ್ದೇವೆ, ದಯವಿಟ್ಟು ಇನ್ನಾದರೂ ಇಂತಹ ಅಪಭ್ರಂಶಗಳಿಗೆ ಕಡಿವಾಣ ಹಾಕುವ ಗಟ್ಟಿ ಮನಸ್ಸು ಮಾಡಿ ಎಂದು ಒತ್ತಾಯಿಸಿದೆ.
ಕಾಂಗ್ರೆಸ್‌ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ. ಭ್ರಷ್ಟರ ಪಾಲಿನ ಆಲದಮರ ಹಾಗೂ ಪೋಷಕ. ಅರಸಿ ಬಂದವರಿಗೆಲ್ಲ ನೀರು, ನೆಳಲನ್ನು ಒದಗಿಸುವ ಮಹಾಸಂರಕ್ಷಕರ ಭ್ರಷ್ಟ ಸಾಧನೆಯ ಪಕ್ಷಿನೋಟ ಎಂದು ಕೆಲ ಅಂಶಗಳನ್ನು ಪಟ್ಟಿ ಮಾಡಿದೆ.
- ಡಿ. ಕೆ. ಶಿವಕುಮಾರ್ ಅವರನ್ನು 380 ಪಟ್ಟು ಅಕ್ರಮ ಆಸ್ತಿ ಪ್ರಕರಣದಿಂದ ಪಾರು ಮಾಡಿದ್ದೇ ಈ ಭ್ರಷ್ಟ ಪೋಷಕ.
- ಕೆಪಿಸಿಎಲ್‌ನ 447 ಕೋಟಿ ಮೆಗಾ ಹಗರಣದಿಂದ ಡಿಕೆಶಿ ಅವರನ್ನು ಸಂರಕ್ಷಿಸಿದ್ದೂ ಈ ಭ್ರಷ್ಟ ಪೋಷಕ.
- ಪಿಎಫ್‌ಐನ 175 ಗೂಂಡಾಗಳ ಮೇಲಿದ್ದ ಕೇಸುಗಳನ್ನು ವಜಾ ಮಾಡಿದ್ದೇ ಈ ಭ್ರಷ್ಟ ಪೋಷಕ.
- 1,700 ಪಿಎಫ್ಐ ಪ್ರಕರಣಗಳನ್ನು ಹಿಂಪಡೆದದ್ದು ಈ ಭ್ರಷ್ಟ ಪೋಷಕ.
- ಹೈಕಮಾಂಡ್‌ಗೆ 1,000 ಕೋಟಿ ಕಪ್ಪ ಸಾಗಿಸಿದ ಎಂ.ಎಲ್.ಸಿ. ಗೋವಿಂದರಾಜು ಅವರನ್ನು ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ.
- ಖಡಕ್ ಅಧಿಕಾರಿ ಅನುರಾಗ್ ತಿವಾರಿ, ಗಣಪತಿ ಅವರನ್ನು ಸಾವಿಗೆ ತಳ್ಳಿ ಕುಚುಕು ಗೆಳೆಯ ಕೆ. ಜೆ. ಜಾರ್ಜ್ ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ.
- ಇಜಿಎಲ್ ಅಕ್ರಮದಲ್ಲಿ ಕೆ. ಜೆ. ಜಾರ್ಜ್‌ಗೆ ದಡ ಮುಟ್ಟಿಸಿದ್ದೂ ಈ ಭ್ರಷ್ಟ ಪೋಷಕರೇ.
- ಕಾಂಗ್ರೆಸ್ ಭ್ರಷ್ಟರ ಕೂಪ, ಇವರ ಹೈಕಮಾಂಡೇ ಮುಖ್ಯ ಅತಿಥಿ. ಹಾಗಾಗಿ, ಸಿದ್ದರಾಮಯ್ಯರವರಿಗೆ ಭ್ರಷ್ಟರ ಸಂಕುಲ ವಿಸ್ತರಣೆ ಪರಮ ಕರ್ತವ್ಯವೂ, ಕಲ್ಯಾಣಕಾರಿಯೂ ಆಗಿರುವುದು ನಾಡಿನ ದುರಂತ.