SUDDIKSHANA KANNADA NEWS/ DAVANAGERE/ DATE:20-12-2023
ದಾವಣಗೆರೆ: ಲಂಚ ಪಡೆದ ಆರೋಪದಲ್ಲಿ ಬಂಧಿತರಾಗಿ ಬಿಡುಗಡೆಯಾಗಿದ್ದ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಹೈಕೋರ್ಟ್ ಏಕಸದಸ್ಯ ಪೀಠವು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಕೆಎಸ್ಡಿಎಲ್ ಟೆಂಡರ್ಗಾಗಿ ಲಂಚ ಪಡೆದ ಆರೋಪ ಪ್ರಕರಣ ರದ್ದುಪಡಿಸಿ ಆದೇಶಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಪ್ರಕಾರ ಪ್ರಕ್ರಿಯೆ ಪಾಲಿಸಿಲ್ಲ ಎಂದು ಮಾಡಾಳ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್, ಪ್ರಕರಣ ರದ್ದು ಮಾಡಿ ಆದೇಶ ಹೊರಡಿಸಿದೆ.
ಲಂಚ ಪಡೆದ ಆರೋಪ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಆಗಿನ ಸ್ಪೀಕರ್ ಅನುಮತಿ ಪಡೆಯದೇ ತನಿಖೆ ನಡೆಸಿದ್ದು ತಪ್ಪು ಎಂಬ ತಾಂತ್ರಿಕ ಕಾರಣದಿಂದಾಗಿ ಮಾಡಾಳು ವಿರೂಪಾಕ್ಷಪ್ಪಗೆ ವರದಾನವಾಗಿದೆ.
2022ರಲ್ಲಿ ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿಗೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು ಸುಮಾರು 8 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು.
ಈ ವೇಳೆ ಅಧಿಕಾರದಲ್ಲಿದ್ದ ಬಿಜೆಪಿಗೆ ಭಾರೀ ಮುಖಭಂಗ ಎದುರಾಗಿತ್ತು. ಕೆಎಸ್ಡಿಎಲ್ ಕಾರ್ಯನಿರ್ವಹಿಸುತ್ತಿದ್ದ ಕೆಲ ನೌಕರರು ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅಲ್ಲದೇ ಮಾಡಾಳ್ ಅವರ ಪುತ್ರ ಸೇರಿದಂತೆ ಇತರರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಮಾರ್ಚ್ 7ರಂದು ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು. ಆ ಬಳಿಕ ನಡದ ಬೆಳವಣಿಗೆಗಳಲ್ಲಿ ಮಾಡಾಳ್ ಅವರು ಕಚೇರಿಯಲ್ಲಿ ಸಿಕ್ಕ ಹಣ ಅಡಿಕೆ ವರ್ತಕರಿಗೆ ಸೇರಿದ್ದು, ನಾನು ಅಡಿಕೆ ವ್ಯಾಪಾರಿ ಎಂದು ದಾಖಲೆಗಳನ್ನು ಸಲ್ಲಿಸಿದ್ದರು.
ಅಲ್ಲದೇ, ಲೋಕಾಯುಕ್ತ ತನಿಖೆಗೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಸದ್ಯ ಮಾಜಿ ಶಾಸಕರಿಗೆ ಬಿಗ್ ರಿಲೀಫ್ ನೀಡಿದೆ. ಮಾತ್ರವಲ್ಲ, ಈ ಪ್ರಕರಣದಲ್ಲಿ ಕೆಲವರ ಕೈವಾಡ ಇದ್ದು, ನಾನು ನಿರ್ದೋಷಿ.
ಯಾರೋ ಸಿಕ್ಕಿಸಿ ಹಾಕಿದ್ದಾರೆ. ಈ ಆರೋಪದಿಂದ ಹೊರಬರುತ್ತೇನೆ ಎಂದು ಗುಡುಗಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಡಾಳ್ ವಿರೂಪಾಕ್ಷಪ್ಪ ಅವರು, ಸತ್ಯಕ್ಕೆ ಸಂದ ಜಯ. ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಸದ್ಯಕ್ಕೆ ಹೆಚ್ಚೇನೂ ಪ್ರತಿಕ್ರಿಯೆ ನೀಡುವುದಿಲ್ಲ. ಸತ್ಯಕ್ಕೆ ಯಾವಾಗಲಾದರೂ ಜಯವೇ ಸಿಗುವುದು ಎಂದಷ್ಟೇ
ಹೇಳಿದ್ದಾರೆ.
ಮಾಡಾಳ್ ಮಲ್ಲಿಕಾರ್ಜುನ್ ಅವರು, ತಂದೆ ವಿರುದ್ದ ಷಡ್ಯಂತ್ರ ಮಾಡಿ ಸಿಲುಕಿ ಹಾಕಿಸಲಾಗಿದೆ ಎಂದು ಈ ಹಿಂದೆಯೇ ಹೇಳಿದ್ದೇವೆ. ಸತ್ಯಕ್ಕೆ ಜಯ ದೊರೆತಿದೆ. ಈಗ ಕೋರ್ಟ್ ಆದೇಶ ಬಳಿಕ ಆದರೂ ನಮ್ಮ ವಿರುದ್ಧ ಪಿತೂರಿ ಮಾಡಿದವರಿಗೆ ಗೊತ್ತಾದರೆ ಸಾಕು ಎಂದು ಹೇಳಿದ್ದಾರೆ.