SUDDIKSHANA KANNADA NEWS/ DAVANAGERE/ DATE:24-05-2024
ದಾವಣಗೆರೆ: ಅದು ಪುಟ್ಟ ಸಂಸಾರ. ಗಂಡ, ಹೆಂಡತಿ, ಮಗು ಇದ್ದ ಮನೆ. ಆದ್ರೆ, ಈ ಮನೆಯ ಮೂವರು ಇದೀಗ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರಿಗೂ ಈ ಪ್ರಕರಣ ತಲೆಬಿಸಿ ತಂದಿದೆ. ಮಾತ್ರವಲ್ಲ, ಹುಡುಕಿಕೊಡಿ ಎಂದು ಅವರ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತಂದೆ, ತಾಯಿ ಹಾಗೂ ಎರಡು ವರ್ಷದ ಮಗು ನಿಗೂಢವಾಗಿ ಕಣ್ಮರೆಯಾಗಿರುವುದು ಬೆಣ್ಣೆನಗರಿ ದಾವಣಗೆರೆಯಲ್ಲಿ ಈಗ ಸಾಕಷ್ಟು ಗುಸು ಗುಸು ಪಿಸು ಪಿಸು ಆರಂಭವಾಗುವಂತೆ ಮಾಡಿದೆ. 34 ವರ್ಷದ ಅಂಜನ್ ಬಾಬು, 24 ವರ್ಷದ ನಾಗವೇಣಿ, ಎರಡು ವರ್ಷದ ನಕ್ಷತ್ರ ಕಾಣೆಯಾಗಿರುವವರು.
ನಗರದ ವಿನೋಬ ನಗರ 1ನೇ ಮೇನ್, 7ನೇ ಕ್ರಾಸ್ ನಲ್ಲಿರುವ ಡೋರ್ ನಂ 1182, ಬಸವರಾಜಪ್ಪ ಎಸ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ಕುಟುಂಬ ಕೊನೆಯದಾಗಿ ಕಾಣಿಸಿಕೊಂಡಿದ್ಧು ಕಳೆದ ತಿಂಗಳು ಏಪ್ರಿಲ್ 12ರಂದು. ಅದಾದ ನಂತರ ಈ ಮೂವರು ಎಲ್ಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗದೆ ಕುಟುಂಬದವರು ಪರಿತಪಿಸುವಂತಾಗಿದೆ. ನಾಗವೇಣಿ ನಾಗವೇಣಿ ತಾಯಿ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಹುಡುಕಿ ಕೊಡಿ ಎಂದು ದೂರು ದೂರು ನೀಡಿದ್ದಾರೆ.
ನಾವು ಸುರಕ್ಷಿತವಾಗಿದ್ದೇವೆ:
ಇನ್ನು ತಾಯಿ ರುದ್ರವ್ವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ನಾಗವೇಣಿ ಅವರು ನಾವು ಸುರಕ್ಷಿತವಾಗಿದ್ದೇವೆ, ವೈಯಕ್ತಿಕ ಕಾರಣಗಳಿಂದ ಮನಸ್ಸಿಗೆ ನೋವಾಗಿರುವ ಕಾರಣ ಅಜ್ಞಾತ ಸ್ಥಳದಲ್ಲಿದ್ದೇವೆ. ಸ್ವಲ್ಪ ಮನಸ್ಸು ರಿಲ್ಯಾಕ್ಸ್ ಆದ ಮೇಲೆ ದಾವಣಗೆರೆಗೆ ಬರುತ್ತೇವೆ. ಆತಂಕ ಪಡಬೇಡಿ ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ರುದ್ರವ್ವ ಅವರಿಗೆ ಪೊಲೀಸರಿಗೆ ತಿಳಿಸಿದ್ದಾರೆ.
ಐದು ವರ್ಷದ ಹಿಂದೆ ಮದುವೆ:
ಅಂಜನ್ ಬಾಬು ಮತ್ತು ನಾಗವೇಣಿ 5 ವರ್ಷದ ಹಿಂದೆ ಮದುವೆ ಆಗಿದ್ದರು. ಈ ದಂಪತಿಗೆ ಎರಡು ವರ್ಷದ ಹೆಣ್ಣು ಮಗು ಇದೆ. ವಿನೋಬನಗರದಲ್ಲಿ ವಾಸವಾಗಿದ್ದರು, ಅಂಜನ್ ಬಾಬು ಪಿಜಿ ಬಡಾವಣೆ ಬ್ಯಾಡಗಿ ಶೆಟ್ಟರ್ ಶಾಲೆ ಹತ್ತಿರ ಇರುವ ಷೇರು ಮಾರ್ಕೇಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರ ಮನೆಗೆ ನಾಗವೇಣಿ ಅವರ ತಾಯಿ ರುದ್ರವ್ವ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರು. ಕಳೆದ ತಿಂಗಳು ಅಂದರೆ ಏಪ್ರಿಲ್ 12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರುದ್ರವ್ವ ಮಗಳ ಮನೆಗೆ ಬಂದಿದ್ದಾರೆ. ಸಂಜೆಯವರೆಗೆ ಮಗಳು, ಮೊಮ್ಮಗಳ ಜೊತೆ ಸಂಜೆವರೆಗೂ ರುದ್ರವ್ವ ಕಾಲ ಕಳೆದಿದ್ದಾರೆ.
ಸಂಜೆ ಆರು ಗಂಟೆಗೆ ನಾಗವೇಣಿ ಗಂಡ ಅಂಜನ್ ಬಾಬು ಪತ್ನಿಗೆ ಪೋನ್ ಮಾಡಿದ್ದಾನೆ. ಆಗ ತನ್ನ ಪುತ್ರಿ ಜೊತೆ ನಾಗವೇಣಿ ತೆರಳಿದ್ದಾಳೆ. ಆ ಬಳಿಕ ತಾಯಿಗೆ ನೀನು ಮನೆಯಲ್ಲಿ ಇರು ಎಂದು ಹೇಳಿದ್ದಾಳೆ. ಅದಕ್ಕೆ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾನೆಂದು ತಾಯಿ ಕೇಳಿದಕ್ಕೆ, ಕರೆದುಕೊಂಡು ಬಂದ ಮೇಲೆ ಹೇಳುತ್ತೇನೆಂದು ತನ್ನ ಮಗಳು ನಕ್ಷತ್ರಾಳನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ 8. 30ಕ್ಕೆ ಪೋನ್ ಮಾಡಿದ ಮಗಳು ನಾಗವೇಣಿ ನಾವು ಬೆಳಿಗ್ಗೆ ಬರುತ್ತೇವೆ, ನೀನು ಊಟ ಮಾಡಿ ಮಲಗಿಕೋ ಎಂದು ತಾಯಿಗೆ ಹೇಳಿದ್ದಾಳೆ. ಅದರಂತೆ ಬೆಳಿಗ್ಗೆ ಪೋನ್ ಮಾಡಿದಾಗ ಸ್ವೀಚ್ ಆಪ್ ಆಗಿತ್ತಂತೆ. ಇದಾದ ನಂತರ ರುದ್ರವ್ವ ಕೆಲಸಕ್ಕೆ ಹೋಗಬೇಕಾಗಿದ್ದರಿಂದ ಮಗಳ ಮನೆಗೆ ಬೀಗ ಹಾಕಿಕೊಂಡು ಮರಳಿ ಊರಿಗೆ ಹೋಗಿದ್ದಾಳೆ. ಸುಮಾರು ದಿನಗಳಾದರೂ ಬರದೆ ಇರುವ ಕಾರಣ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದ್ದಾಳೆ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಆತಂಕಗೊಂಡ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪುತ್ರಿ, ಅಳಿಯ ಹಾಗೂ ಮೊಮ್ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.
ಇನ್ನೂ ಕಾಣೆಯಾದವರ ವಿಚಾರದಲ್ಲಿ ಅಂಜನ್ ಬಾಬು ಸಾಕಷ್ಟು ಸಾಲ ಮಾಡಿಕೊಂಡಿದ್ದ ಅನ್ನೋ ಮಾತು ಇದೆ, ವಿನೋಬನಗರದಲ್ಲಿ ಈ ವಿಚಾರವೂ ಕೇಳಿ ಬರುತ್ತಿದೆ. ಇನ್ನೊಂದು ಕಡೆ ಆಸ್ತಿ ವಿಚಾರದಲ್ಲಿ ಗೋಲ್ಮಾಲ್ ಆಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಘಟನೆ ನಡೆದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಒಟ್ಟಾರೆ ಅಂಜನ್ ಆಂಡ್ ಫ್ಯಾಮಿಲಿ ಮಿಸ್ಸಿಂಗ್ ನ ಅಸಲಿ ಕಹಾನಿ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಮನೆ ನಿಶ್ಯಬ್ಧ:
ಈಗ ಏರಿಯಾ ನಿಶ್ಯಬ್ದವಾಗಿದೆ. ಬಾಗಿಲು ಮುಚ್ಚಿದ ಮನೆ, ಒಳಬಿಗ ಹಾಕಿದ ಬಾಗಿಲಿನೊಳಗೆ ಅವಿತ ನೂರಾರು ಪ್ರಶ್ನೆಗಳು ಕಾಡಲು ಶುರುವಾಗಿದೆ. ಮಾಹಿತಿ ಪ್ರಕಾರ ಬಿಜಾಪುರ ಜಿಲ್ಲೆಯಲ್ಲಿ ತಿಕೋಟದ ಗ್ರಾಮವೊಂದರಲ್ಲಿ ಇರುವ ಕುರಿತಂತೆ ಶಂಕೆ ವ್ಯಕ್ತವಾಗಿದೆ. ಸಾಲ ಹೆಚ್ಚಾದ ಹಿನ್ನೆಲೆಯಲ್ಲಿ ಅಂಜನ್ ಬಾಬು ಕುಟುಂಬ ಹೋಗಿರಬಹುದಾ? ಆಸ್ತಿ ಕಲಹದಿಂದ ಏನಾದರೂ ಕಿಡ್ನಾಪ್ ಆಗಿರಬಹುದಾ? ಬೇರೆ ಏನಾದರೂ ವಿಚಾರ ಇರಬಹುದಾ ಎಂಬುದು ಸೇರಿದಂತೆ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಮೂವರು ಪತ್ತೆಯಾದ ಬಳಿಕ ನಿಖರ ಕಾರಣ ಗೊತ್ತಾಗಲಿದೆ.