SUDDIKSHANA KANNADA NEWS/ DAVANAGERE/ DATE: 20-04-2023
ದಾವಣಗೆರೆ (DAVANAGERE): ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಚುನಾವಣಾ ಕಾವು ರಂಗೇರಿದೆ. ಅಂತಿಮ ಹಂತದಲ್ಲಿ ಟಿಕೆಟ್ ಪಡೆದ ಬಿಜೆಪಿ (BJP) ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ಮಾಡಿದರು. ಚನ್ನಗಿರಿಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿರುವ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಭಾರೀ ಜನಸ್ತೋಮದೊಂದಿಗೆ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿಯಾಗಿ ಲೋಕಿಕೆರೆ ನಾಗರಾಜ್ ಅವರು ಸಾವಿರಾರು ಸಂಖ್ಯೆಯ ಜನರ ಜೊತೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರು ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ಉಮೇದುವಾರಿಕೆ ಹಾಕಿದರು. ಈ ವೇಳೆ ಸಂಸದ ಜಿ. ಎಂ. ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಶಕ್ತಿ ಪ್ರದರ್ಶನ:
ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಲೋಕಿಕೆರೆ ನಾಗರಾಜ್ ಅವರು, ನಿಟುವಳ್ಳಿಯ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭವಾದ ಮೆರವಣಿಗೆಯು ಹೆಚ್. ಕೆ. ಆರ್. ಸರ್ಕಲ್, ಕೆಟಿಜೆ ನಗರ ಪೊಲೀಸ್ ಸ್ಟೇಷನ್, ಅಂಬೇಡ್ಕರ್ ಸರ್ಕಲ್, ಜಯದೇವ ವೃತ್ತ, ಪಿ. ಬಿ. ರಸ್ತೆ, ಬಿ ಎಸ್ ಎನ್ ಎಲ್ ಆಫೀಸ್ ಮಾರ್ಗವಾಗಿ ದಾವಣಗೆರೆ ಮಹಾನಗರ ಪಾಲಿಕೆ ತಲುಪಿತು. ಈ ವೇಳೆ ಮಹಿಳೆಯರು ಮತ್ತು ಬಿಜೆಪಿ ಕಾರ್ಯಕರ್ತರ ನೃತ್ಯ ಗಮನ ಸೆಳೆಯಿತು.
ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾದ ಅಜಯ್ ಕುಮಾರ್, ನಗರದ ದುರ್ಗಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಹೊಸ ಮುಖಕ್ಕೆ ಜನರು ಮತ ಹಾಕಲಿದ್ದಾರೆ. ಎಲ್ಲಾ ಸಮುದಾಯದವರ ಆಶೀರ್ವಾದದಿಂದ ಗೆದ್ದು ಬರುವ ವಿಶ್ವಾಸ ಇದೆ ಎಂದು ಹೇಳಿದರು.
ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಅವರು ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು. ಲೋಕಾಯುಕ್ತ ದಾಳಿಗೆ ಸಿಲುಕಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮಾಡಾಳ್ ಮಲ್ಲಿಕಾರ್ಜುನ್ ಅವರು ಶಕ್ತಿ ಪ್ರದರ್ಶಿಸಿದರು. ಸಾವಿರಾರು ಸಂಖ್ಯೆಯ ಜನರೊಂದಿಗೆ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆ ಹಾಕಿದರು.
ಮಲ್ಲಿಕಾರ್ಜುನ್ ಉಚ್ಛಾಟನೆ:
ನಿನ್ನೆಯಷ್ಟೇ ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಳಗಾಗಿದ್ದ ಮಾಡಾಳ್ ಮಲ್ಲಿಕಾರ್ಜುನ್ ಕ್ಷೇತ್ರದಲ್ಲಿ ತನಗೆಷ್ಟು ಜನರ ಬೆಂಬಲ ಇದೆ ಎಂಬುದನ್ನು ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮತ್ತು ಬಂಡೆದ್ದ ಕಾರಣಕ್ಕೆ ಬಿಜೆಪಿ ಜಿಲ್ಲಾ ಶಿಸ್ತು ಸಮಿತಿಯು ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿದೆ. ಇಷ್ಟೊಂದು ಪ್ರಮಾಣದ ಜನರು ಬಂದದ್ದು ನೋಡಿ ಬಿಜೆಪಿಗೆ ಸ್ವಲ್ಪ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಶಿವಕುಮಾರ್ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು, ಕದನ ಕಣ ರೋಚಕವಾಗಿದೆ.
ಹೊನ್ನಾಳಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಪಿ. ರೇಣುಕಾಚಾರ್ಯರ ಮೆರವಣಿಗೆ ಫುಲ್ ಕಲರ್ ಫುಲ್ ಆಗಿತ್ತು. ಮಹಿಳೆಯರು, ಯುವಕರ ಡ್ಯಾನ್ಸ್ ಜೋರಾಗಿತ್ತು. ಎಲ್ಲಾ ಕಡೆಗಳಲ್ಲಿಯೂ ಕೇಸರಿ ಬಾವುಟ, ಧ್ವಜ ರಾರಾಜಿಸಿದವು. ರೇಣುಕಾಚಾರ್ಯರ
ಪರ ಘೋಷಣೆಗಳು ಮುಗಿಲು ಮುಟ್ಟಿದವು. ಹೊನ್ನಾಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯ ಜನರೊಂದಿಗೆ ಆಗಮಿಸಿದ ರೇಣುಕಾಚಾರ್ಯ ಅವರು, ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಕೊನೆ ಕ್ಷಣದಲ್ಲಿ ಹರಿಹರ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದ ನಂದಿಗಾವಿ ಶ್ರೀನಿವಾಸ್ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಮಾಯಕೊಂಡ ಜೆಡಿಎಸ್ ಅಭ್ಯರ್ಥಿ ಹೆಚ್. ಆನಂದಪ್ಪ ಅವರೂ ಸಹ ಮತ್ತೊಮ್ಮೆ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.