SUDDIKSHANA KANNADA NEWS/ DAVANAGERE/ DATE:26-09-2023
ದಾವಣಗೆರೆ: ಭದ್ರಾ ಜಲಾಶಯ (Bhadra Dam)ದಿಂದ ಒಟ್ಟು 43 ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿರುವುದು ಖುಷಿ ಕೊಟ್ಟಿದೆ. ಇಂದಿನಿಂದಲೇ ನಾಲೆಯಲ್ಲಿ ನೀರು ಹರಿಸುವುದಾಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತಾ ಅವರು ಮಾಹಿತಿ ನೀಡಿರುವುದು ಸಮಾಧಾನಕಾರ ಸಂಗತಿ. ಆದ್ರೆ, ಹತ್ತು ದಿನಗಳ ಕಾಲ ನೀರು ನಿಲುಗಡೆ ಮಾಡುವುದು ಬೇಡ. ಒಟ್ಟು ನೂರು ದಿನಗಳ ಕಾಲ ನೀರು ಹರಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸತೀಶ್ ಕೊಳೇನಹಳ್ಳಿ, ನಾಗೇಶ್ವರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:
BIG BREAKING NEWS: ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಭದ್ರಾ ಡ್ಯಾಂ(Bhadra Dam)ನ ಭದ್ರಾ ಬಲದಂಡೆ, ಎಡದಂಡೆ ನಾಲೆಗಳಿಗೆ ಇಂದಿನಿಂದ ನೀರು, ಎಷ್ಟು ದಿನಗಳ ಕಾಲ ಹರಿಯಲಿದೆ ಜೀವಜಲ…?
ಭದ್ರಾ ಡ್ಯಾಂ(Bhadra Dam)ನಿಂದ ನೀರು ಬಿಡುಗಡೆ ಮಾಡುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಅವರು, 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭದ್ರಾ ಜಲಾಶಯ(Bhadra Dam)ದ ನೀರಿಗಾಗಿ ದಾವಣಗೆರೆ ಬಂದ್ ಮಾಡಿದ್ದೆವು. ಈ ಹಿಂದೆ ಮೂರ್ನಾಲ್ಕು ದಿನ ಪ್ರತಿಭಟನೆ ಮಾಡಿದ ಕೂಡಲೇ ನೀರು ಹರಿಸಲಾಗುತಿತ್ತು. ಹದಿನೈದು ದಿನಗಳ ಕಾಲ ಹೋರಾಟ ಮಾಡಿದ ಬಳಿಕ ನೀರು ಹರಿಸಲಾಗಿದೆ. ಇದು ದಪ್ಪ ಚರ್ಮದ ಸರ್ಕಾರ. ತಡವಾದರೂ ನಿಮಗೆ ನೀರು ಬಂತಲ್ಲಾ ಎಂಬ ಖುಷಿಯಿದೆ ಎಂದಿದ್ದಾರೆ.
ಎರಡು ಹಂತಗಳಲ್ಲಿ ಒಟ್ಟು 43 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಹೇಳಲಾಗಿದೆ. ಈಗ ನೀರು ನಿಲುಗಡೆ ಮಾಡುವ ಹತ್ತು ದಿನಗಳು ತುಂಬಾನೇ ಮುಖ್ಯ. ಭತ್ತದ ತೆನೆ ಕಟ್ಟುವ ಸಮಯ. ಈ ವೇಳೆ ನೀರು ಅಗತ್ಯವಾಗಿ ಬೇಕಿರುತ್ತದೆ. ಆ ವೇಳೆಯಲ್ಲಿ ನೀರು ಬಂದ್ ಮಾಡಿದರೆ ಹೇಗೆ? ಮಳೆ ಬಂದರೆ ತೊಂದರೆ ಇಲ್ಲ. ಈಗಾಗಲೇ 40 ದಿನಗಳ ಕಾಲ ನೀರು ಹರಿಸಲಾಗಿದೆ. ಇನ್ನು 43 ದಿನಗಳ ಕಾಲವೂ ಸೇರಿದಂತೆ ಒಟ್ಟು 83 ದಿನಗಳ ಕಾಲ ನೀರು ಬಿಡುಗಡೆ ಮಾಡಿದಂತಾಗುತ್ತದೆ. ಆ ಹತ್ತು ದಿನಗಳ ಕಾಲವೂ ನೀರು ಹರಿಸಿದರೆ ರೈತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಈ ನೀರೇ ಭತ್ತ ಬೆಳೆ ಬೆಳೆದಿರುವ ರೈತರಿಗೆ ಆಧಾರ. ಈ ಕಾರಣದಿಂದ ಒಟ್ಟು ನೂರು ದಿನಗಳ ನೀರು ಹರಿಸಿದರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಈ ನಿಟ್ಟಿನಲ್ಲಿಯೂ ಯೋಚನೆ ಮಾಡಿ ನೀರು ಕೊಡಿ. 15 ದಿನಗಳ ಕಾಲ ಹೋರಾಟ
ಮಾಡಿದ್ದೆವು. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೆವು. ಅನಿವಾರ್ಯವಾಗಿ ದಾವಣಗೆರೆ ಬಂದ್ ಮಾಡಬೇಕಾಯಿತು. ಈ ಬಂದ್ ಗೆ ವಿವಿಧ ಸಂಘಟನೆಗಳು, ಬಿಜೆಪಿ, ಆಮ್ ಆದ್ಮಿ, ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಕೊಟ್ಟವು.
ಎಲ್ಲರ ಸಹಕಾರದಿಂದ ದಾವಣಗೆರೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎಲ್ಲರಿಗೂ ಧನ್ಯವಾದ ಹೇಳುತ್ತೇವೆ. ತೆನೆ ಕಟ್ಟುವ ಸಮಯದಲ್ಲಿಯೂ ನೀರು ಹರಿಸಿದರೆ ಸಮಸ್ಯೆ ಆಗದು ಎಂದು ಶಾಮನೂರು ಲಿಂಗರಾಜ್ ತಿಳಿಸಿದ್ದಾರೆ.
ಅಕ್ಕಿ ಧಾರಣೆ ದಿನೇ ದಿನೇ ಗಗನಕ್ಕೇರುತ್ತಿದೆ. ಭದ್ರಾ ಜಲಾಶಯದ ನೀರು ನಂಬಿ ಭತ್ತ ಬೆಳೆಯುವ ರೈತರು ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಸ್ವಲ್ಪ ಖುಷಿಗೊಂಡಿದ್ದಾರೆ. ಒಟ್ಟು 100 ದಿನಗಳ ಕಾಲ ನೀರು ಹರಿಸಿದರೆ ಯಾವುದೇ ಸಮಸ್ಯೆ ಆಗದು. ರಾಜ್ಯ ಸರ್ಕಾರವು ತಡ ಮಾಡಿದ್ದು ಸರಿಯಲ್ಲ. ಮುಂಚಿತವಾಗಿ ನೀರು ಹರಿಸಿದ್ದರೆ ಹಾಳಾಗಿರುವ ಭತ್ತವಾದರೂ ಉಳಿಯುತಿತ್ತು. ಇನ್ನು ಮಳೆಗಾಲ ಇದ್ದು, ಮಳೆ ಆಗುವುದಾಗಿ ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದ ಡ್ಯಾಂನಿಂದ ನೀರು ಹರಿಸಲೇಬೇಕು. ನೀರಾವರಿ ಸಲಹಾ ಸಮಿತಿ ತೆಗೆದುಕೊಂಡಿರುವ ನಿರ್ಧಾರದಂತೆ ನೀರು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.