ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರಾ ಡ್ಯಾಂ(Bhadra Dam)ನಿಂದ ಎಡದಂಡೆ ನಾಲೆಗೆ ನೀರು ನಿಲುಗಡೆಗೆ ರೈತರ ರೋಷಾವೇಶ: ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ

On: September 16, 2023 2:15 PM
Follow Us:
BHADRA DAM WATER STOP FARMERS PROTEST
---Advertisement---

SUDDIKSHANA KANNADA NEWS/ DAVANAGERE/ DATE:16-09-2023

ದಾವಣಗೆರೆ: ಭದ್ರಾ ಡ್ಯಾಂ (Bhadra Dam)ನಿಂದ ಭದ್ರಾ ನಾಲೆಗಳಿಗೆ ನೀರು ನಿಲುಗಡೆ ನಿಲುಗಡೆಗೆ ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: 

ಭದ್ರಾ ಜಲಾಶಯ(Bhadra Dam)ದಿಂದ ಭದ್ರಾ ಬಲದಂಡೆ ನಾಲೆ ನೀರು ಬಂದ್: ಅಂತೂ ಇಂತೂ ಆನ್ ಅಂಡ್ ಆಫ್ ಜಾರಿ, ದಾವಣಗೆರೆ ಜಿಲ್ಲೆಯ ರೈತರ ಆಕ್ರೋಶ

ನೀರು ನಿಲುಗಡೆ ವಿಚಾರ ಗೊತ್ತಾಗುತ್ತಿದ್ದಂತೆ ರೋಷಾವೇಶ ತೋರಿರುವ ರೈತರು ದಾವಣಗೆರೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಆಗಸ್ಟ್ 10 ರಿಂದ ನಿರಂತರ 100 ದಿನ ನೀರು ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ರೈತರು ಭತ್ತದ ನಾಟಿ ಮಾಡಿದ್ದಾರೆ. ಸಾಲ ಸೋಲ ಮಾಡಿ ಸಾಕಷ್ಟು ಬಂಡವಾಳ ಸುರಿದು ಗೊಬ್ಬರ ಹಾಕಿ, ಕಳೆನಾಶಕ ಕೀಟನಾಶಕ ಸಿಂಪಡಣೆ ಮಾಡಿದ್ದು, ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತದ ನಾಟಿಯಾಗಿದೆ. ಈಗ ನೀರು ನಿಲುಗಡೆ ಮಾಡಿದ್ರೆ ಕೋಟಿಗಟ್ಟಲೆ ನಷ್ಟವಾಗುತ್ತದೆ. ಆದ್ದರಿಂದ ನೀರು ನಿಲುಗಡೆ ತೀರ್ಮಾನ ಹಿಂಪಡೆಯಬೇಕು ಎಂಬ ಆಗ್ರಹ ಹೆಚ್ಚಾಗಿ ಕೇಳಿ ಬರುತ್ತಿದೆ.

BHADRA DAM
BHADRA DAM

ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಅವರು ಮಾತನಾಡಿ, ರಾಜ್ಯ ಸರ್ಕಾರವು ನೂರು ದಿನಗಳ ಕಾಲ ನೀರು ಹರಿಸುವುದಾಗಿ ಭರವಸೆ ಕೊಟ್ಟು, ಇದ್ದಕ್ಕಿದ್ದಂತೆ ನೀರು ನಿಲ್ಲಿಸಿದರೆ ಭತ್ತ ಬೆಳೆದ ರೈತರ ಪಾಡೇನು ಎಂದು ಪ್ರಶ್ನಿಸಿದರು.

ಭಾರತೀಯ ರೈತ ಒಕ್ಕೂಟದ ಮುಖಂಡ ಶಾಮನೂರು ಲಿಂಗರಾಜುರವರು ಮಾತನಾಡಿ, ಸರ್ಕಾರ ರೈತರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ನೀರು ಹರಿಸಲು ಪ್ರಾರಂಭಿಸಿ ಈಗಾಗಲೇ 36 ದಿನಗಳಾಗಿವೆ. ಇನ್ನು 64 ದಿನ ನಿರಂತರ ನೀರು ಹರಿಸಿದ್ರೂ ಡ್ಯಾಂ(Bhadra Dam)ನಲ್ಲಿ 20 ಟಿ ಎಂ ಸಿ ನೀರು ಬೇಸಿಗೆ ಹಂಗಾಮಿಗೆ ಉಳಿಯುತ್ತದೆ. ಇದರ ಜೊತೆಗೆ ಚಂಡಮಾರುತ ಮತ್ತು ಮಳೆಗಳಿಂದ ನೀರು ಸಂಗ್ರಹವಾಗುತ್ತದೆ. ಆದ್ದರಿಂದ ಭತ್ತ ಬೆಳೆಯುವ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬಾರದು ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಇದಕ್ಕಿಂತ ಕಡಿಮೆ ಮಳೆಯಾದ ಸಂದರ್ಭದಲ್ಲಿ ಭತ್ತ ಬೆಳೆಯಲು ನೀರು ಕೊಡಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಇದೆ. ಎಂದಿಗೂ ಭತ್ತ ಬೆಳೆಯದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನವರನ್ನು ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಜಿಲ್ಲೆಯ ರೈತ ವಿರೋಧಿ ನಿಲುವು ಆಗಿದೆ. ದಾವಣಗೆರೆ ಜಿಲ್ಲೆಯ ಜನ ಪ್ರತಿನಿಧಿಯೊಬ್ಬರನ್ನು ಐಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಆರ್ ಬಿ ಮಂಜುನಾಥ ರವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ದಾವಣಗೆರೆ ಜಿಲ್ಲೆಯ ಭತ್ತ ಬೆಳೆ ಪ್ರದೇಶ ರೈತರು ಸುರಿದಿರುವ ಬಂಡವಾಳದ ವಸ್ತುಸ್ಥಿತಿ ವರದಿಯನ್ನು ಐಸಿಸಿ ಅಧ್ಯಕ್ಷರಿಗೆ ಕಳುಹಿಸುವುದಾಗಿ ಹೇಳಿದರು.

ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಮಾಜಿ ಎಪಿಎಂಸಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ, ಕರಿಬಸಪ್ಪ, ಕುಂದುವಾಡದ ಮಹೇಶಪ್ಪ, ಎ.ಪ್ರಕಾಶ, ಕೊಳೇನಹಳ್ಳಿ ಶರಣಪ್ಪ, ಸಿದ್ದಪ್ಪ, ಮಂಜುನಾಥ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment