SUDDIKSHANA KANNADA NEWS/ DAVANAGERE/ DATE:04-09-2023
ದಾವಣಗೆರೆ: ಈಗ ಎಲ್ಲರ ಚಿತ್ತ ಭದ್ರಾ ಡ್ಯಾಂ(Bhadra Dam)ನತ್ತ. ಯಾಕೆಂದರೆ ಭದ್ರಾ ಜಲಾಶಯದಿಂದ ಆಗಸ್ಟ್ 10ರಿಂದ ನೀರು ಹರಿಸಲಾಗುತ್ತಿದೆ. ಇದು ಈಗ ಪರ – ವಿರೋಧಕ್ಕೂ ಕಾರಣವಾಗಿದೆ. ಈ ಬೆಳವಣಿಗೆ ನಡುವೆಯೇ ಸೆಪ್ಟಂಬರ್ 6 ರಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರು, ಕಾಡಾ ಸಭೆ ಕರೆದಿದ್ದಾರೆ. ನೀರು ನಿರ್ವಹಣಾ ಸಮಿತಿಯು ಯಾವ ನಿರ್ಧಾರಕ್ಕೆ ಬರುತ್ತದೆ ಎಂಬ ಕುತೂಹಲವೂ ಗರಿಗೆದರಿದೆ.
ಶಿವಮೊಗ್ಗ, ಚನ್ನಗಿರಿ ಸೇರಿದಂತೆ ಹಲವೆಡೆ ಈಗಾಗಲೇ ಭದ್ರಾ ಡ್ಯಾಂನಿಂದ ನೀರು ಹರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಗಳೂ ನಡೆಯುತ್ತಿವೆ. ಇನ್ನು ದಾವಣಗೆರೆಯಲ್ಲಿ ನೀರು ಹರಿಸುತ್ತಿರುವ ಕ್ರಮ ಸರಿಯಾಗಿಯೇ ಇದೆ. ಇದನ್ನು ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಪುನರ್ ಪರಿಶೀಲನೆ ಮಾಡಬಾರದು. ಈಗ ತೆಗೆದುಕೊಂಡಿರುವ ನಿರ್ಧಾರವೇ ಮುಂದುವರಿಯಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಈ ನಡುವೆ ಭಾರತೀಯ ರೈತ ಒಕ್ಕೂಟವು ಸೆ. 5ಕ್ಕೆ ಸಭೆ ಕರೆದಿದೆ.
ಈ ಸುದ್ದಿಯನ್ನೂ ಓದಿ:
Channagiri: ಚನ್ನಗಿರಿಯಲ್ಲಿ ಹೆಚ್ಚಾಗಿತ್ತು ಶ್ರೀಗಂಧ ಮರಗಳ್ಳತನ: ಮೂವರು ಕಳ್ಳರ ಬಂಧನ, ಮಚ್ಚು, ಕೊಡಲಿ ಸೇರಿ ಯಾವೆಲ್ಲಾ ವಸ್ತುಗಳು ಸಿಕ್ಕವು ಗೊತ್ತಾ…?
ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದಿರುವುದುವ ವಿಶೇಷ. ಸೆ. 5ರ ಮಧ್ಯಾಹ್ನ 12.30ಕ್ಕೆ ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಈ ಸಭೆ ಕರೆಯಲಾಗಿದ್ದು, ಸರ್ಕಾರವು ನೂರು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿದೆ. ಅದರ ಪ್ರಕಾರವಾಗಿ ನಾಟಿ ಕಾರ್ಯವು ಮುಗಿದಿದೆ. ಕಬ್ಬು ಇತರೆ ಬೆಳೆಗಳನ್ನು ನೀರಿಗೆ ತಕ್ಕಂತೆ ಬೆಳೆಯಲಾಗುತ್ತಿದೆ. ಆದ್ರೆ, ಸೆ. 6ಕ್ಕೆ ಕಾಡಾ ಸಭೆಯನ್ನು ಕರೆದು ಮರು ತೀರ್ಮಾನಕ್ಕೆ ಸಜ್ಜಾಗಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಮರು ತೀರ್ಮಾನವಾಗದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಕ್ಷಾತೀತವಾಗಿ ಆಗಮಿಸುವಂತೆ ಒಕ್ಕೂಟದ ಅಧ್ಯಕ್ಷ ಹೆಚ್. ಆರ್. ಲಿಂಗರಾಜ ಮನವಿ ಮಾಡಿದ್ದಾರೆ.
ನೀರಾವರಿ ಇಲಾಖೆಯು ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆ ಆನವೇರಿ ಶಾಖಾನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾನಾಲೆ ಹರಿಹರ ಮತ್ತು ಗೋಂದಿ ನಾಲೆಗಳಿಗೆ
ನೀರು ಹರಿಸಲು ತೀರ್ಮಾನಿಸಲಾಗಿತ್ತು.
ಕುಸಿಯುತ್ತಿದೆ Bhadra Dam ನೀರಿನ ಮಟ್ಟ:
ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ 2023-24ನೇ ಸಾಲಿನ ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಮುಂಗಾರು ಬೆಳೆಗಳಿಗೆ ಆಗಸ್ಟ್ 10ರಿಂದ ನೂರು ದಿನಗಳ ಕಾಲ ಹಾಗೂ ಭದ್ರಾ ಬಲದಂಡೆ ನಾಲೆಯಲ್ಲಿ ಆಗಸ್ಟ್ 10ರಿಂದ ನೂರು ದಿನಗಳ ಕಾಲ ನೀರು ಹರಿಸಲಾಗುವುದು ಎಂದು ತಿಳಿಸಲಾಗಿತ್ತು. ಭದ್ರಾ ಜಲಾಶಯದ ಮುಖ್ಯನಾಲೆ ಮತ್ತು ಶಾಖಾ ನಾಲೆಗಳಲ್ಲಿ ನೀರು ಹರಿಸಲಾಗುತಿತ್ತು. ವಿತರಣಾ ನಾಲೆಗಳಲ್ಲಿ ಅನುಸರಿಸಬೇಕಾದ ಆಂತರಿಕ ಸರದಿಯನ್ನು ಕಾರ್ಯಪಾಲಕ ಇಂಜಿನಿಯರ್ ಅವರು ನಿರ್ಧರಿಸಿದ್ದರು. ಆದ್ರೆ, ದಿನೇ ದಿನೇ ಭದ್ರಾ ಜಲಾಶಯ(Bhadra Dam)ದಲ್ಲಿನ ನೀರಿನ ಮಟ್ಟ ಕುಸಿಯುತ್ತಿದೆ. ಸದ್ಯಕ್ಕೆ 163.5 ಗೆ ಕುಸಿದಿದೆ.
ಮಳೆ ಬರದಿದ್ರೆ ಗತಿ ಏನು…?
ನಾಲೆಯಲ್ಲಿ ನೀರು ಹರಿಸುವುದರಿಂದ ಬೇಸಿಗೆ ಬೆಳೆಗೆ ನೀರು ಸಿಗುವುದಿಲ್ಲ. ಕುಡಿಯಲು ನೀರಿಗೆ ಹಾಹಾಕಾರವಾಗುತ್ತದೆ. ಸೆಪ್ಟಂಬರ್ ತಿಂಗಳಿನಲ್ಲಿ ಮಳೆ ಬಂದರೆ ತೊಂದರೆ ಇಲ್ಲ. ಒಂದು ವೇಳೆ ಮಳೆ ಬಾರದೇ ಹೋದರೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ ರೈತರ ಅಡಿಕೆ ತೋಟಗಳಿಗೆ ನೀರಿನ ಅಭಾವ ಆಗುತ್ತದೆ. ಈಗ 24 ದಿನಗಳ ಕಾಲ ನೀರು ಹರಿದಿದೆ. ಇನ್ನು 76 ದಿನಗಳು ಇದ್ದು, ನೀರು ಹರಿಸುತ್ತಾ ಹೋದರೆ ಜಲಾಶಯದಲ್ಲಿನ ನೀರಿನ ಮಟ್ಟವೂ ಕುಸಿದು ಹೋಗುತ್ತದೆ. ಆಗ ಜಲಾಶಯದಲ್ಲಿನ ನೀರಿನ ಸಂಗ್ರಹವೂ ಕಡಿಮೆಯಾಗುತ್ತದೆ.
ಶಿವಮೊಗ್ಗದಲ್ಲಿ ನಡೆಯುತ್ತಿದೆ ಪ್ರತಿಭಟನೆ:
ಆದ ಕಾರಣಕ್ಕೆ ಭದ್ರಾ ಡ್ಯಾಂನಿಂದ ಬಿಡುತ್ತಿರುವ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪ್ರತಿಭಟನೆಗಳು ನಡೆದಿವೆ. ರೈತ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಕೈ ಜೋಡಿಸಿದ್ದು
ಇದು ಸರ್ಕಾರಕ್ಕೆ ತಲೆನೋವು ತಂದಿದೆ.
ಎಚ್ಚರಿಕೆ ಕೊಟ್ಟಿದ್ದ ಇಲಾಖೆ:
ಹಾಲಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ನೀರು ಹರಿಸಲಾಗುತ್ತಿದೆ. ನಮೂದಿಸಿದ ಕ್ಷೇತ್ರ ಹಾಗೂ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ತೀರ್ಮಾನಿಸಲಾಗಿದೆ. ಪ್ರಕಟಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಬೇರೆ ಬೆಳೆ ಬೆಳೆದು ಬೆಳೆ ಉಲ್ಲಂಘನೆ ಮಾಡಿ ನಷ್ಟ ಅನುಭವಿಸಿದಲ್ಲಿ ಇದಕ್ಕೆ ಸಂಬಂಧಪಟ್ಟ ರೈತರೇ ಹೊಣೆಗಾರರು. ಜಲಸಂಪನ್ಮೂಲ ಇಲಾಖೆಯು ಯಾವುದೇ ರೀತಿಯಲ್ಲಿ ಜವಾಬ್ದಾರಿ ಅಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ಎಡದಂಡ ನಾಲೆಯಲ್ಲಿ 380 ಹಾಗೂ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ಸ್ ಮುಂಗಾರು ಬೆಳೆಗಳಿಗೆ ಶಾಲೆಗಳಲ್ಲಿ 100 ದಿನಗಳ ಅವಧಿಗೆ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗಿತ್ತು. ಈಗ ಮಳೆಯೂ ಇಲ್ಲ, ಜಲಾಶಯವೂ ಬರಿದಾಗುತ್ತಿದೆ. ಈ ಕಾರಣಕ್ಕೆ ನಿರ್ಧಾರ ಮರುಪರಿಶೀಲಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
ಸಭೆ ರದ್ದುಪಡಿಸಲು ಆಗ್ರಹ:
ಭದ್ರಾ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸಲು ಸೆ.6 ರಂದು ಕರೆದಿರುವ ಐಸಿಸಿ ಸಭೆಯನ್ನು ಕರೆಯಲಾಗಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರವರು ಈ ಸಭೆ ರದ್ದುಪಡಿಸಲು ಒತ್ತಾಯಿಸಬೇಕು. ಶಿವಮೊಗ್ಗದ ಮಲವಗೊಪ್ಪದಲ್ಲಿನ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪರು ಸಭೆ ಕರೆದಿದ್ದು, ಈ ಸಭೆ ನಡೆಸದಂತೆ ಸೂಚಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ, ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಯಲು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮುಂದಾಗಬೇಕು ಎಂದು ಬಿಜೆಪಿ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಒತ್ತಾಯಿಸಿದ್ದಾರೆ.
ಆಗಸ್ಟ್ 10 ರಿಂದ ಭದ್ರಾ ನಾಲೆಗಳಿಗೆ ನಿರಂತರ 100 ದಿನಗಳವರೆಗೆ ನೀರು ಹರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆ ಜಮೀನಿನಲ್ಲಿ ಭತ್ತದ ನಾಟಿ ಮಾಡಿದ್ದಾರೆ. ರೈತರು ಸಾಲ ಸೋಲ ಮಾಡಿ, ಭತ್ತದ ನಾಟಿಗೆ ಈಗಾಗಲೇ 2 ಬಾರಿ ಗೊಬ್ಬರ ಹಾಕಿದ್ದಾರೆ. ಸಾಕಷ್ಟು ಬಂಡವಾಳ ಸುರಿದಿದ್ದಾರೆ. ಆದರೆ ಶಿವಮೊಗ್ಗ ಜಿಲ್ಲೆಯ ರೈತರ ಒತ್ತಡಕ್ಕೆ ಮಣಿದು ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸಲು ಸೆ.6 ರಂದು ನೀರಾವರಿ ಸಲಹಾ ಸಮಿತಿ ಸಭೆ ಕರೆದಿರುವುದು ಸರಿಯಲ್ಲ. ಈ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಯಬೇಕು. ಈಗ ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ, ಅದನ್ನು ಪುನರ್ ಪರಿಶೀಲಿಸುವುದು ಬೇಡ ಎಂದು ಹೇಳಿದ್ದಾರೆ.