SUDDIKSHANA KANNADA NEWS/ DAVANAGERE/ DATE:18-10-2023
ದಾವಣಗೆರೆ: ಭದ್ರಾ ಡ್ಯಾಂ (Bhadra Dam)ನಿಂದ ನೀರು ಹರಿಸುವುದಾಗಿ ಭರವಸೆ ನೀಡಿದ್ದರೂ ಹುಸಿಯಾಗಿದೆ. ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ನೀಡಿದ್ದ ಆಶ್ವಾಸನೆ ಈಡೇರಲಿಲ್ಲ. ಇದು ರೈತರ ಹಿತಾಸಕ್ತಿ ಮರೆತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಭಾರತೀಯ ರೈತ ಒಕ್ಕೂಟ ಆರೋಪಿಸಿದೆ.
Read Also This Story:
Pramod Muthalik: ಮೋದಿ ಗೆಲ್ಲಿಸಿ, ದೇಶ ಉಳಿಸಿ ಅಭಿಯಾನ: ಪ್ರಮೋದ್ ಮುತಾಲಿಕ್ ಈ ಕಾರ್ಯಕ್ರಮದ ಸ್ವರೂಪ ಹೇಗಿರಲಿದೆ ಗೊತ್ತಾ…?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಕೊಳೇನಹಳ್ಳಿ ಸತೀಶ್, ಬೆಳವನೂರು ನಾಗೇಶ್ವರರಾವ್, ಶಾಮನೂರು ಲಿಂಗರಾಜ್ ಅವರು, ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶವಿದ್ದು, ರೈತರು ಸುಮಾರು 1.4 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಬೆಳೆಸಿದ್ದಾರೆ. ನಿತ್ಯ ನೀರು ಬೇಡುವ ಭತ್ತದ ಬೆಳೆ ಉಳಿಸಿಕೊಳ್ಳಲು ರೈತರು ಎಲ್ಲಾ ನಮೂನೆಗಳ ಹೋರಾಟ ಮಾಡಿದ್ದರೂ ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಕೂಗಿಗೆ ಕ್ಯಾರೆ ಎನ್ನದೆ ಆಫ್ ಅಂಡ್ ಅನ್ ಪದ್ಧತಿ ಜಾರಿ ಮಾಡಿದೆ. ಈ ಪದ್ಧತಿಯಂತೆ ನಿನ್ನೆ ಬೆಳಿಗ್ಗೆಯಿಂದಲೇ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.
ಸಂಸತ್ ಸದಸ್ಯರಾದ ಜಿ ಎಂ ಸಿದ್ದೇಶ್ವರ ರವರ ನೇತೃತ್ವದಲ್ಲಿ ರೈತರ ನಿಯೋಗ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ರವರನ್ನು ಮತ್ತು ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನವರನ್ನು ಭೇಟಿ ಮಾಡಿ, ಭತ್ತದ ಬೆಳೆಯ ವಾಸ್ತವ ಸ್ಥಿತಿ ವಿವರಿಸಿ, ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಲಾಗಿತ್ತು. ಸಂಸದರ ನೇತೃತ್ವದ ನಿಯೋಗದ ಆಗ್ರಹಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿ ಕೆ ಶಿವಕುಮಾರ್ ಮತ್ತು ಮಧು ಬಂಗಾರಪ್ಪ ನವರು ನೀರು ನಿಲುಗಡೆ ಮಾಡದೆ ನಿರಂತರ ನೀರು ಹರಿಸಲು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಮತ್ತು ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು. ಈಗ ಅವರು ಕೊಟ್ಟ ಭರವಸೆ ಹುಸಿಯಾಗಿದೆ ಎಂದು ದೂರಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ನಿರಾಸಕ್ತಿ ವಹಿಸಿದರು. ಅವರ ಇಚ್ಚಾಶಕ್ತಿ ಕೊರತೆಯಿಂದ ಜಿಲ್ಲೆಯ ರೈತರ ಹೋರಾಟಕ್ಕೆ ಕಿಂಚಿತ್ತೂ ಮನ್ನಣೆ ಸಿಕ್ಕಿಲ್ಲ. ರೈತರು ಅವರನ್ನು ಭೇಟಿ ಮಾಡಿ ನೀರು ನಿಲುಗಡೆ ಮಾಡಿದಂತೆ ಪ್ರಯತ್ನಿಸಿ ಎಂದು ಗೋಗರೆದರೂ ಅವರು ಮೊಂಡುತನ ಮುರಿದು ಕಂಗಾಲಾದ ರೈತರ ಸಂಕಷ್ಟಕ್ಕೆ ಧಾವಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಗಮನ ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡೋಣ ಅಂತ ಹೇಳಿ ತಪ್ಪಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರ ಧೋರಣೆ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ರಾಜ್ಯದಲ್ಲಿ ತೀವ್ರ ಬರದ
ಪರಿಣಾಮವಾಗಿ ವಿದ್ಯುತ್ ಕ್ಷಾಮ ತಲೆದೋರಿದೆ. ರಾಜ್ಯದ ಜನತೆ ಕೇಳದಿದ್ದರೂ ಎಲ್ಲರ ಮನೆಗಳಿಗೆ ತಿಂಗಳಿಗೆ 200 ಯುನಿಟ್ ವಿದ್ಯುತ್ ಪುಕ್ಕಟೆ ಕೊಡುವುದಾಗಿ ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಇದರಿಂದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಮಳೆ ಕೊರತೆಯಿಂದ ಜಲ ವಿದ್ಯುತ್ ಮತ್ತು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಗಾಳಿಯು ಕಡಿಮೆ ಬಿಸಿಲು ಕಡಿಮೆ ಇರುವುದರಿಂದ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಯು ಕುಂಠಿತವಾಗುತ್ತದೆ. ಕುಂಭಕರ್ಣ ಸರ್ಕಾರದ ನಿಷ್ಪ್ರಯೋಜಕ ವಿದ್ಯುತ್ ಸಚಿವರ ನಿರ್ಲಿಪ್ತ ಕಾರ್ಯಕ್ಷಮತೆಯಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಲ್ಲಿದ್ದಲು ದಾಸ್ತಾನು ಮಾಡಿಕೊಂಡಿಲ್ಲ. ಇದರಿಂದ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯು ಸಮರ್ಪಕವಾಗಿಲ್ಲ ಎಂದು ತಿಳಿಸಿದರು.
ಈ ಎಲ್ಲಾ ಒಟ್ಟಾರೆ ಬೆಳವಣಿಗೆಗಳಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ರೈತರ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದ ರೈತರು ರೋಸಿ ಹೋಗಿದ್ದಾರೆ. ಇತ್ತ ಮಳೆ ಇಲ್ಲ ಅತ್ತ ಕರೆಂಟು ಇಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವ ಪರಿಸ್ಥಿತಿ ರೈತನಾದ್ದಾಗಿದೆ. ಬೆಳೆ ಬೆಳೆಯಲು ಸಾಲ ಸೋಲ ಮಾಡಿ ಸಾಕಷ್ಟು ಬಂಡವಾಳ ಸುರಿದ ಅನ್ನದಾತ ರೈತನು ಚಿಂತೆಗೀಡಾಗಿದ್ದು, ಈ ಕಾಂಗ್ರೆಸ್ ಸರ್ಕಾರದಿಂದ ಅವನಿಗೆ ಆತ್ಮಹತ್ಯೆಯೇ ಗ್ಯಾರಂಟಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕಲ್ಲುಬಂಡೆ ಪ್ರಸಾದ್, ಡಿ. ಚಂದ್ರಪ್ಪ ಕೋಲ್ಕುಂಟೆ ಮತ್ತಿತರರು ಹಾಜರಿದ್ದರು.