SUDDIKSHANA KANNADA NEWS/ DAVANAGERE/ DATE:16-09-2023
ದಾವಣಗೆರೆ: ಭದ್ರಾ ಜಲಾಶಯ (Bhadra Dam) ದಿಂದ ನೀರು ಸ್ಥಗಿತಗೊಳಿಸಿರುವ ಕಾರಣಕ್ಕೆ ದಾವಣಗೆರೆ ಜಿಲ್ಲೆಯ ರೈತರು ರೊಚ್ಚಿಗೆದ್ದಿದ್ದಾರೆ. ಭದ್ರಾ ಅಚ್ಚುಕಟ್ಟು ಪ್ರದೇಶ ಶೇಕಡಾ 70ರಷ್ಟಿದ್ದು, ಹಾಗಾಗಿ ಭದ್ರಾ ಡ್ಯಾಂ(Bhadra Dam) ನಿಂದ ನೀರು ಹರಿಸಬೇಕೆಂಬ ಆಗ್ರಹ ಹೆಚ್ಚಾಗಿದೆ. ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಸ್ಥಗಿತಗೊಳಿಸುವ ಆದೇಶ ಹೊರ ಬೀಳುತ್ತಿದ್ದಂತೆ ರೈತ ಮುಖಂಡರು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಿವಾಸಕ್ಕೆ ರೈತ ಮುಖಂಡರು, ಜನಪ್ರತಿನಿಧಿಗಳು, ಶಾಸಕರು ಭೇಟಿ ನೀಡಿ ನಿರ್ಧಾರ ಪುನರ್ ಪರಿಶೀಲಿಸುವಂತ ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ:

ಭದ್ರಾ ಡ್ಯಾಂ(Bhadra Dam)ನಿಂದ ಎಡದಂಡೆ ನಾಲೆಗೆ ನೀರು ನಿಲುಗಡೆಗೆ ರೈತರ ರೋಷಾವೇಶ: ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ
ಹರಿಹರ ಶಾಸಕ ಬಿ. ಪಿ. ಹರೀಶ್, ಮಲೇಬೆನ್ನೂರು ಭಾಗದ ರೈತರು ಸಚಿವ ಮಲ್ಲಿಕಾರ್ಜುನ್ ರ ನಿವಾಸಕ್ಕೆ ಆಗಮಿಸಿದರು. ಮುದ್ದೇಗೌಡ್ರು ಗಿರೀಶ್ ಸೇರಿದಂತೆ ಕಾಂಗ್ರೆಸ್ ನಾಯಕರು, ರೈತ ಮುಖಂಡರು ಸೇರಿದಂತೆ ರೈತರು ಆಗಮಿಸಿ, ಮಲ್ಲಿಕಾರ್ಜುನ್ ಅವರಿಗೆ ಒತ್ತಡ ಹೇರುವ ಕೆಲಸ ಮಾಡಿದರು. ಭದ್ರಾ ಬಲದಂಡೆ ಹಾಗೂ ಎಡನಾಲೆಯಲ್ಲಿ ನೀರು ಸ್ಥಗಿತಗೊಂಡಿರುವ ಕಾರಣಕ್ಕೆ ಭತ್ತ ನಾಟಿ ಮಾಡಿದ್ದ ಅನ್ನದಾತರು ಕಂಗಾಲಾಗಿದ್ದರು.
ಭದ್ರಾ ಡ್ಯಾಂ (Bhadra Dam) ನೀರು ಹರಿಸುವಿಕೆ ಮುಂದುವರಿಸಿ:
ನೂರು ದಿನಗಳ ಕಾಲ ನೀರು ಹರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರವು ಉಲ್ಟಾ ಹೊಡೆದಿತ್ತು. ಇದು ರೈತರ ಆಕ್ರೋಶಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ರೈತ ಒಕ್ಕೂಟವು ದಾವಣಗೆರೆಯ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತ್ತು.

ಮತ್ತೊಂದೆಡೆ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೂ ಮನವಿ ಸಲ್ಲಿಸಿದ್ದರು. ರೈತರ ಒತ್ತಡ ಹೆಚ್ಚಾಗುತ್ತಿದ್ದಂತೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರು.
ಮಲ್ಲಿಕಾರ್ಜುನ್ ಹೇಳಿದ್ದೇನು…?
ರಾಜ್ಯ ಸರ್ಕಾರವು ಭದ್ರಾ ಜಲಾಶಯ(Bhadra Dam)ದಿಂದ ನೀರು ಹರಿಸುವ ನಿರ್ಧಾರ ಘೋಷಿಸುತ್ತಿದ್ದಂತೆ ರೈತರು ಭತ್ತದ ನಾಟಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯು ಹೆಚ್ಚಾಗಿ ಭದ್ರಾ ಜಲಾಶಯದ ನೀರು ಅವಲಂಬಿಸಿದ್ದಾರೆ. ಸಾವಿರಾರು ಎಕರೆಯಲ್ಲಿ ಭತ್ತದ ನಾಟಿ ಮಾಡಿದ್ದಾರೆ. ಈಗ ಕಟ್ ಆಫ್ ಪದ್ಧತಿಯಡಿ ನೀರು ಹರಿಸುವುದಾಗಿ ಹೇಳಿ ನೀರು ಬಂದ್ ಮಾಡಲಾಗಿದೆ. ರೈತರು ಏನು ಮಾಡಬೇಕು ಎಂಬುದೇ ಗೊತ್ತಾಗದೇ ಕಂಗಾಲಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಬಾರಿ ಸರಿಯಾಗಿ ಮಳೆ ಬಾರದ ಕಾರಣ ಮೆಕ್ಕೆಜೋಳ ಬೆಳೆದ ರೈತರು ಈಗಾಗಲೇ ನಷ್ಟ ಅನುಭವಿಸಿದ್ದಾರೆ. ಮಳೆ ಬಾರದ ಕಾರಣ ಮೆಕ್ಕೆಜೋಳ ಒಣಗಿ ಹೋಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ನೀರು ಹರಿಸದಿದ್ದರೆ ಭತ್ತ ಬೆಳೆಯುವವರ ಪರಿಸ್ಥಿತಿಯೂ ಇದೇ ಆಗುತ್ತದೆ. ಮಳೆ ಬಂದರೆ ಸಮಸ್ಯೆಯಾಗುವುದಿಲ್ಲ. ಆದ್ರೆ, ಈಗ 2600 ಕ್ಯೂಸೆಕ್ ಅನ್ನು ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಬೇಕಾದರೆ 500 ಕ್ಯೂಸೆಕ್ ಕಡಿಮೆ ಮಾಡಿ ನೀರು ಹರಿಸಿ ಎಂದು ಡಿ. ಕೆ. ಶಿವಕುಮಾರ್ ಅವರಿಗೆ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಡಿ. ಕೆ. ಶಿವಕುಮಾರ್ ಏನು ಹೇಳಿದ್ರು…?
ಇನ್ನು ಸಚಿವ ಮಲ್ಲಿಕಾರ್ಜುನ್ ರ ಮನವಿಗೆ ಪುರಸ್ಕರಿಸಿದ ಡಿ. ಕೆ. ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ, ಕಾಡಾ ಅಧಿಕಾರಿಗಳು, ಭದ್ರಾ ಡ್ಯಾಂ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಕ್ಯೂಸೆಕ್ ಕಡಿಮೆ ಮಾಡಿ ನೀರು ಹರಿಸುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಆದ್ರೆ, ಇದುವರೆಗೆ ಆದೇಶ ಆಗಿಲ್ಲ. ಡಿ. ಕೆ. ಶಿವಕುಮಾರ್ ಭರವಸೆ ಕೊಟ್ಟಿರುವ ಕಾರಣದಿಂದ ಇನ್ನು ನಾಲ್ಕೈದು ದಿನಗಳೊಳಗೆ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಚನ್ನಗಿರಿ, ಹರಿಹರ ತಾಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಡ್ಯಾಂನಲ್ಲಿ ನೀರು ಸಂಗ್ರಹವಿರುವ ನೀರು ಕಡಿಮೆಯಾಗುತ್ತಿದೆ. ಈ ಹಿಂದೆ ಬರಗಾಲ ಬಂದಾಗ 156 ಅಡಿ ಮಾತ್ರ ಭದ್ರಾ ಜಲಾಶಯ(Bhadra Dam)ದಲ್ಲಿ ಸಂಗ್ರಹ ಆಗಿದ್ದ ಉದಾಹರಣೆ ಇದೆ. ಆದ್ರೆ, ಈ ಬಾರಿ 167 ಅಡಿ ನೀರು ಬಂದಿತ್ತು. ಸದ್ಯಕ್ಕೆ 161 ಅಡಿ ನೀರು ಇದೆ. ಮಾತ್ರವಲ್ಲ, ಹವಾಮಾನ ಇಲಾಖೆಯು ಮಳೆಯಾಗುತ್ತದೆ ಎಂದು ಹೇಳಿದೆ. ಮತ್ತೊಂದೆಡೆ ಈಗ ದಾವಣಗೆರೆಯಲ್ಲಿಯೂ ಮಳೆಯಾಗಿದೆ. ವರುಣ ಕೃಪೆ ತೋರುವ ಸಾಧ್ಯತೆ ಇರುವ ಕಾರಣಕ್ಕೆ ಭದ್ರಾ ಜಲಾಶಯ(Bhadra Dam)ಕ್ಕೆ ನೀರು ಹರಿದು ಬರುವ ಸಾಧ್ಯತೆ ಇದೆ. ಭವಿಷ್ಯ ಯಾರೂ ಹೇಳಲು ಸಾಧ್ಯವಿಲ್ಲ. ಮಳೆ ಬಂದರೂ ಬರಬಹುದು, ಬಾರದಿದ್ದರೂ ಇರಬಹುದು. ಆದ್ರೆ, ಈಗ ಬೆಳೆ ಹಾಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂಬುದು ರೈತರ ಆಗ್ರಹ.
ಈಗಾಗಲೇ ರಾಜ್ಯ ಸರ್ಕಾರವು ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ನಿಯಮಾವಳಿ ಪ್ರಕಾರ ಸರ್ಕಾರ ಅನುದಾನ ನೀಡಬೇಕಿದೆ. ಡ್ಯಾಂಗೆ ನೀರು ಹರಿದು ಬರುವ ಕುರಿತಂತೆ ಯೋಚಿಸಬೇಕಿದೆ ಎಂದು ನಿನ್ನೆಯಷ್ಟೇ ಸಚಿವ ಮಲ್ಲಿಕಾರ್ಜುನ್ ಅವರು ಹೇಳಿದ್ದರು. ಒಟ್ಟಿನಲ್ಲಿ ಭದ್ರಾ ಜಲಾಶಯದ ನೀರು ಹರಿಸುವಿಕೆ ಸ್ಥಗಿತಕ್ಕೆ ದಾವಣಗೆರೆ ಜಿಲ್ಲೆಯ ರೈತರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಸಚಿವರು ಭರವಸೆ ನೀಡಿದ್ದಾರೆ. ಮಲ್ಲಿಕಾರ್ಜುನ್ ಅವರು ಡಿ. ಕೆ. ಶಿವಕುಮಾರ್ ಜೊತೆ ಮಾತುಕತೆ ನಡೆಸಿರುವುದರಿಂದ ನಿರ್ಧಾರ ಪುನರ್ ಪರಿಶೀಲಿಸಿ ನೀರು ಬಿಡುಗಡೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ನೂರು ದಿನಗಳ ಕಾಲ ಸರ್ಕಾರ ಕೊಟ್ಟ ಮಾತಿನಂತೆ ನಡೆಯಬೇಕು. ಶಿವಮೊಗ್ಗದಲ್ಲಿ ನಡೆದ ಕಾಡಾ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೂ ಸಹ ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡುತ್ತೇವೆ. ಯಾವ
ರೈತರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ನಡೆಯಬೇಕು. ಎಡದಂಡೆ, ಬಲದಂಡೆ ಎಂಬ ತಾರತಮ್ಯ ಮಾಡದೇ ಎಲ್ಲಾ ರೈತರ ಹಿತ ಕಾಪಾಡಬೇಕು ಎಂದು ರೈತ ಮುಖಂಡರು
ಆಗ್ರಹಿಸಿದ್ದಾರೆ.