SUDDIKSHANA KANNADA NEWS/ DAVANAGERE/ DATE:26-09-2023
ದಾವಣಗೆರೆ: ಭದ್ರಾ ಡ್ಯಾಂ(Bhadra Dam)ನಿಂದ ಬಲದಂಡೆ ಹಾಗೂ ಎಡದಂಡೆ ನಾಲೆಯಲ್ಲಿ ಇಂದಿನಿಂದ ನೀರು ಹರಿಸುವುದಾಗಿ ಹೇಳಿರುವುದು ಶಿವಮೊಗ್ಗದಲ್ಲಿ ನಡೆದ ಕಾಡಾ ಸಭೆಯ ತೀರ್ಮಾನದಂತೆ. ಅದರಂತೆ ನೀರಾವರಿ ಇಲಾಖೆಯ ಅಧಿಕಾರಿ ಸುಜಾತ ಅವರು ಆನ್ ಅಂಡ್ ಆಫ್ ಪದ್ಧತಿಯ ವೇಳಾಪಟ್ಟಿ ಪ್ರಕಾರ ಹೇಳಿಕೆ ನೀಡಿದ್ದಾರೆ. ಈ ವೇಳಾಪಟ್ಟಿ ಪ್ರಕಾರ ಇಂದಿನಿಂದ (ಸೆಪ್ಟೆಂಬರ್ 26) ನೀರು ಹರಿಸಬೇಕು. ಅದರಂತೆ ನೀರು ಹರಿಸುವುದಾಗಿ ಹೇಳಿದ್ದಾರೆ. ಹೊಸದಾಗಿ ಯಾವ ತೀರ್ಮಾನವಾಗಿಲ್ಲ ಎಂದು ಭಾರತೀಯ ರೈತ ಒಕ್ಕೂಟ ಹೇಳಿದೆ.
ಈ ಸುದ್ದಿಯನ್ನೂ ಓದಿ:
BIG BREAKING NEWS: ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಭದ್ರಾ ಡ್ಯಾಂ(Bhadra Dam)ನ ಭದ್ರಾ ಬಲದಂಡೆ, ಎಡದಂಡೆ ನಾಲೆಗಳಿಗೆ ಇಂದಿನಿಂದ ನೀರು, ಎಷ್ಟು ದಿನಗಳ ಕಾಲ ಹರಿಯಲಿದೆ ಜೀವಜಲ…?
ಇಂದಿನಿಂದ ಭದ್ರಾ ನಾಲೆಗಳಲ್ಲಿ ನೀರು ಹರಿಸುವುದಾಗಿ ಭದ್ರಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತಾ ಅವರು ಹೇಳಿದ್ದಾರೆ. ಇದು ಆಫ್ ಅಂಡ್ ಆನ್ ಪದ್ಧತಿಯಾಗಿದೆ. ಇದರಲ್ಲಿ ಯಾವ ಬದಲಾವಣೆ ಮಾಡಲಾಗಿಲ್ಲ. ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ ಎಂದು ರೈತ ಮುಖಂಡರಾದ ಕೊಳೇನಹಳ್ಳಿ ಬಿ. ಎಂ. ಸತೀಶ್ ಮತ್ತು ಬೆಳವನೂರು ನಾಗೇಶ್ವರರಾವ್ ರವರು ಖಂಡಿಸಿದ್ದಾರೆ.
ನಮಗೆ ಆಫ್ ಅಂಡ್ ಆನ್ ಪದ್ಧತಿ ಬೇಡ. ರಾಜ್ಯದ ಕಾಂಗ್ರೆಸ್ ಸರ್ಕಾರ ತಾನು ನೀಡಿದ ಆದೇಶದಂತೆ ನಿರಂತರ 100 ದಿನ ನೀರು ಹರಿಸಬೇಕು. ರೈತರ ಒಕ್ಕೂಟ ಕಳೆದ 10 ದಿನಗಳಿಂದ ಹೋರಾಟ ಮಾಡುತ್ತಿದೆ. ರೈತರ ಹೋರಾಟಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಿಂಚಿತ್ತೂ ಮನ್ನಣೆ ನೀಡಿಲ್ಲ. ಇದು ಅವರ ರೈತ ವಿರೋಧಿ ಧೋರಣೆಯಾಗಿದೆ. 20 ದಿನ ನೀರು ಹರಿಸಿ 10 ದಿನ ನೀರು ನಿಲ್ಲಿಸುವುದು ಆಫ್ ಅಂಡ್ ಆನ್ ಪದ್ಧತಿಯಾಗಿದೆ. ಇದರಿಂದ ಇಂಟರ್ನಲ್ ರೋಟೇಶನ್ ಸೇರಿ 20 ದಿನ ನೀರು ಸಿಗುವುದಿಲ್ಲ. ಆಗ ಭತ್ತದ ಬೆಳೆ ಒಣಗಿ ನಾಶವಾಗುತ್ತದೆ. ಪ್ರಸ್ತುತ ಈಗ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ 10 ದಿನ ನೀರು ನಿಲುಗಡೆ ಮಾಡಿದ್ರೂ ಬೆಳೆ ಒಣಗಿ ನಾಶವಾಗಿಲ್ಲ. ಆದ್ದರಿಂದ ನಿರಂತರ ನೀರು ಹರಿಸುವ ಪದ್ಧತಿ ಜಾರಿ ಮಾಡುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ ಎಂದು ಬಿ ಎಂ.ಸತೀಶ್ ಮತ್ತು
ನಾಗೇಶ್ವರರಾವ್ ತಿಳಿಸಿದ್ದಾರೆ.
ಸುಜಾತಾ ಅವರು ಹೇಳಿರುವ ಪ್ರಕಾರ ಇಂದಿನಿಂದ ನೀರು ಹರಿಸಿ, ಅಕ್ಟೋಬರ್ 15 ರಂದು ನಿಲುಗಡೆ ಮಾಡಿ, ಪುನಃ ಅಕ್ಟೋಬರ್ 26 ರಿಂದ ನೀರು ಹರಿಸುವುದಾಗಿ ಹೇಳಿದ್ದಾರೆ. ಇದು ಆಫ್ ಅಂಡ್ ಆನ್ ಪದ್ಧತಿಯ ವೇಳಾಪಟ್ಟಿ. ಇದು ಬೇಡ ನಿರಂತರ ನೀರು ಹರಿಸುವ ಪದ್ಧತಿ ಜಾರಿ ಮಾಡಬೇಕು ಎಂಬುದು ದಾವಣಗೆರೆ ಜಿಲ್ಲೆಯ ರೈತರ ಬೇಡಿಕೆ. ಆದರೆ ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸಚಿವರನ್ನು ಕೇಳಿದರೆ ಡಿ. ಕೆ. ಶಿವಕುಮಾರ್ ಕಡೆಗೆ ಬೊಟ್ಟು ಮಾಡಿ ತೋರಿಸಿ, ಅವರು ಕಾವೇರಿ ನೀರಿನ ಗದ್ದಲ್ಲದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ)ರಚಿಸಿದ ನಂತರ ಜಲಸಂಪನ್ಮೂಲ ಇಲಾಖೆಯ ಪಾತ್ರ ಇರುವುದಿಲ್ಲ. ನೀರು ಹರಿಸುವ ತೀರ್ಮಾನ ಐಸಿಸಿ ಸಭೆಯಲ್ಲಿ ಆಗಬೇಕು. ಈ ಐಸಿಸಿಯಲ್ಲಿ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸೇರಿದಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಗಳು ಇರುತ್ತಾರೆ. ಎಸ್ ಇ ಯವರು ಕಾರ್ಯದರ್ಶಿಯಾಗಿರುತ್ತಾರೆ. ಎಸ್ ಎಸ್ ಮಲ್ಲಿಕಾರ್ಜುನರವರು ವಾಸ್ತವ ವಿಷಯ ಬಿಟ್ಟು ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಕೊಳೇನಹಳ್ಳಿ ಬಿ ಎಂ ಸತೀಶ್ ಮತ್ತು ಬೆಳವನೂರು ನಾಗೇಶ್ವರರಾವ್ ರವರು ತೀವ್ರವಾಗಿ ಟೀಕಿಸಿದ್ದಾರೆ.