SUDDIKSHANA KANNADA NEWS/ DAVANAGERE/ DATE:14-09-2023
ದಾವಣಗೆರೆ: ಭದ್ರಾ ಜಲಾಶಯ (Bhadra Dam). ಭದ್ರಾ ಅಚ್ಚುಕಟ್ಟುದಾರರ ನೀರಿನ ಹಾಗೂ ಜನರ ಜೀವಸೆಲೆ. ಭದ್ರಾ ಎಡದಂಡೆ ಹಾಗೂ ಬಲದಂಡೆಯಲ್ಲಿ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಬಲದಂಡೆ ನಾಲೆಯಲ್ಲಿ ಹೆಚ್ಚು ನೀರು ಬಿಡಲಾಗುತ್ತಿದೆ. ನೂರು ದಿನಗಳ ಕಾಲ ನೀರು ಹರಿಸಲು ಸರ್ಕಾರವೂ ನಿರ್ಧರಿಸಿ ಕಾರ್ಯರೂಪಕ್ಕೆ ತರುತ್ತಿದೆ. ಆದ್ರೆ, ಈಗ ಸಮಸ್ಯೆಯಾಗಿರುವುದು ಮಳೆ ಬಾರದಿರುವುದು. ಇದೇ ರೀತಿಯ ನೀರು ಹೊರಗೆ ಹರಿಸಿದರೆ ಮುಂದೆ ಎದುರಾಗುವ ಸವಾಲು ಸಾಕಷ್ಟು.
ಈ ಸುದ್ದಿಯನ್ನೂ ಓದಿ:
ಅಡಿಕೆ ತಿನ್ನಲು ಆಗುತ್ತಾ? ರಾಗಿ, ಜೋಳ, ಭತ್ತಕ್ಕೆ ಕ್ವಿಂಟಲ್ ಗೆ 10 ಸಾವಿರ ರೂ. ರೈತ(Farmer)ರಿಗೆ ಸಿಗಬೇಕು: ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು ಒಂದು ಲಕ್ಷ ಎಕರೆಯಲ್ಲಿ ದೀರ್ಘಾವಧಿ ಬೆಳೆ ಬೆಳೆಯಲಾಗುತ್ತಿದೆ. ಒಂದು ಲಕ್ಷದ 30 ಸಾವಿರ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಅದೇ ರೀತಿಯಲ್ಲಿ 20 ಸಾವಿರ ಎಕರೆಯಲ್ಲಿ ಬೀಳು ಬಿಡಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಬೆಳೆ ಬೆಳೆದಿಲ್ಲ.
ಆರು ದಶಕಗಳಲ್ಲಿ ಕಡಿಮೆ ಮಳೆ:
ಆಗಸ್ಟ್ ತಿಂಗಳಿನಿಲ್ಲಿ ಭದ್ರಾ ಜಲಾಶಯಕ್ಕೆ ಬರುತ್ತಿದ್ದ ಒಳ ಹರಿವು ಕಡಿಮೆ. ಆದ್ರೆ, ಈ ವರ್ಷ ಆಗಸ್ಟ್ ನಲ್ಲಿ ತೀರಾ ಕಡಿಮೆ ವರುಣ ಸುರಿದಿದ್ದಾನೆ. ಸುಮಾರು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಗೂ ಭದ್ರಾ ಜಲಾಶಯ ನಿರ್ಮಾಣ ಆದ ಮೇಲೆ ಆಗಸ್ಟ್ ತಿಂಗಳಿನಲ್ಲಿ ಅತಿ ಕಡಿಮೆ ಮಳೆ ಸುರಿದಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಕಡಿಮೆ ಎಂದರೆ ತೀರಾ ಕಡಿಮೆ ಮಳೆಯಾಗಿದೆ. ಇದರಿಂದಾಗಿ ಭದ್ರಾ ಡ್ಯಾಂ (Bhadra Dam)ನಲ್ಲಿನ ನೀರಿನ ಸಂಗ್ರಹ ತುಂಬಾ ಇಳಿಕೆಯಾಗಿದೆ.
ಜುಲೈ ತಿಂಗಳಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಇದರಿಂದಾಗಿ ಭದ್ರಾ ಜಲಾಶಯ (Bhadra Dam)ಕ್ಕೆ ಸುಮಾರು 26ಕ್ಕೂ ಹೆಚ್ಚು ಅಡಿ ನೀರು ಹರಿದು ಬಂದಿತ್ತು. ಆಗಸ್ಟ್ ತಿಂಗಳಿನಲ್ಲಿ ಈ ವರ್ಷವಂತೂ ತುಂಬಾನೇ ಕಡಿಮೆ ಒಳಹರಿವು ಬಂದಿದೆ. ಜೊತೆಗೆ ಆಗಸ್ಟ್ 10ರಿಂದ ಭದ್ರ ಎಡ ಹಾಗೂ ಬಲ ದಂಡೆ ನಾಲೆಯಲ್ಲಿ ನೀರು ಹೊರಗೆ ಬಿಟ್ಟ ಪರಿಣಾಮ ಭದ್ರಾ ಡ್ಯಾಂನಲ್ಲಿನ ಸುಮಾರು 6 ಅಡಿ ನೀರು ಕಡಿಮೆಯಾಗುತ್ತಾ ಬಂದಿದೆ. ಒಂದೆಡೆ ಭದ್ರಾ ಡ್ಯಾಂ ನೀರಿನ ಮಟ್ಟ ಇಳಿಮುಖವಾಗುತ್ತಿರುವುದು, ಮತ್ತೊಂದೆಡೆ ಭದ್ರಾಜಲಾನಯನ ಪ್ರದೇಶದಲ್ಲಿ ಮಳೆ ಬಾರದಿರುವುದು ಸರ್ಕಾರ ಹಾಗೂ ಭದ್ರಾ ಡ್ಯಾಂ (Bhadra Dam) ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳಿಗೆ ತಲೆಬಿಸಿ ತಂದಿದೆ.
ಭದ್ರಾ ಡ್ಯಾಂ (Bhadra Dam) ನಂಬಿ ಬಿತ್ತಿದವರ ಪರಿಸ್ಥಿತಿ ಏನು…?
ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಿದ ಪರಿಣಾಮ ದಾವಣಗೆರೆ ಜಿಲ್ಲೆಯಲ್ಲಿ ರೈತರು ಭತ್ತದ ನಾಟಿ ಮಾಡಿದ್ದಾರೆ. ಈಗ ನೀರು ಹರಿಸುತ್ತಿದ್ದಾರೆ. ಮಳೆಯೂ ಬಾರದೇ, ಡ್ಯಾಂನ ನೀರು ನಿಲ್ಲಿಸಿದರೆ ರೈತರ ಪಾಡೇನು? ಅವರೇನೂ ಮಾಡಬೇಕು?
ಬೆಳೆದ ಬೆಳೆ ಉಳಿಸಿಕೊಳ್ಳಲು ಮಾರ್ಗವೇನು? ಬೋರ್ ವೆಲ್ ಇದ್ದವರು ಬೆಳೆಯುತ್ತಾರೆ. ಭದ್ರಾ ಡ್ಯಾಂ ನೀರು ನಂಬಿಕೊಂಡು ನಾಟಿ ಮಾಡಿದವರ ಗತಿ ಏನಾಗಬೇಕು ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಹೆಚ್. ಆರ್. ಬಸವರಾಜಪ್ಪ ಹೇಳೋದೇನು…?
ಕಳೆದ 25ರಿಂದ 30 ವರ್ಷಗಳ ಕಾಲ ನಾನು ನೀರಾವರಿ ಸಲಹಾ ಸಮಿತಿಯ ಸದಸ್ಯನಾಗಿದ್ದೇನೆ. ಆದ್ರೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾಡಾ ಸಭೆಗೆ ರೈತ ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಸರಿಯಾಗಿ ಆಹ್ವಾನ ಮಾಡಿಲ್ಲ. ನಾನು ಸಹ ಗೌರವಯುತವಾಗಿ ಕರೆದ ಕಾರಣ ಸಭೆಗೆ ಹೋಗಿದ್ದೆ. ಅದೂ ಕೊನೆ ಗಳಿಗೆಯಲ್ಲಿ ಆಹ್ವಾನಿಸಲಾಗಿತ್ತು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಹೇಳಿದ್ದಾರೆ.
ಆಗ ನಿರ್ಲಕ್ಷ್ಯ, ಈಗ ತಲೆಬಿಸಿ:
ರಾಜ್ಯ ಸರ್ಕಾರವು ಯಾವುದೇ ಸಾಧಕ – ಬಾಧಕ ಪರಾಮರ್ಶಿಸದೇ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸುವುದಾಗಿ ಆದೇಶ ಹೊರಡಿಸಿತು. ನೀರಾವರಿ ಇಲಾಖೆಯು ವೈಜ್ಞಾನಿಕವಾಗಿ ಯೋಚಿಸದೇ ನೀರು ಹರಿಸಲು ಮುಂದಾಗಿರುವುದರಿಂದ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ನೀರು ಹರಿಸುವ ನಿರ್ಧಾರ ಆಗುತ್ತಿದ್ದಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪತ್ರ ಬರೆದರೂ ತಲೆಕೆಡಿಸಿಕೊಳ್ಳಲಿಲ್ಲ. ಈಗ ಭದ್ರಾ ಡ್ಯಾಂನಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಎಲ್ಲರೂ ಪರಾಮರ್ಶಿಸತೊಡಗಿದ್ದಾರೆ. ಆಗಲೇ ಹೇಳಿದ ಹಾಗೆ ಮಾಡಿದ್ದರೆ ಈಗ ಈ ಸಮಸ್ಯೆ ಬರುತ್ತಿರಲಿಲ್ಲ ಎನ್ನುತ್ತಾರೆ.
ಭದ್ರಾ ಡ್ಯಾಂ (Bhadra Dam) ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಒಳಹರಿವು ತುಂಬಾನೇ ಕಡಿಮೆಯಾಗಿದೆ. ಹೊರ ಹರಿವು ಹೆಚ್ಚಾಗಿರುವ ಕಾರಣ ಮುಂದೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಡಿಕೆ ಬೆಳೆಗಾರರು ಉಳಿಯಬೇಕು, ಭತ್ತ ಬೆಳೆದವರು ಉಳಿಯಬೇಕು ಎಂಬುದು ನಮ್ಮ ಅಪೇಕ್ಷೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ಸರ್ಕಾರ ಆದೇಶ ಹೊರಡಿಸಿದೆ. ನಾವೇನೂ ಮಾಡಲು ಆಗದು. ಸರ್ಕಾರದ ಮಟ್ಟದಲ್ಲಿ ಇದು ನಿರ್ಧಾರ ಆಗಬೇಕು. ಹಾಗಾಗಿ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಜೊತೆ ಮಾತನಾಡಿ ಮುಂದೆ ಏನು ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುವುದಾಗಿ ಸಭೆಯಲ್ಲಿ ಹೇಳಿದ್ದಾರೆ. ಯಾವ ಕ್ರಮ ಕೈಗೊಳ್ಳುತ್ತದೆ ಸರ್ಕಾರ ಎಂಬುದನ್ನು ಕಾದು ನೋಡಬೇಕು ಎಂದು ಬಸವರಾಜಪ್ಪ ಹೇಳಿದ್ದಾರೆ.