SUDDIKSHANA KANNADA NEWS/ DAVANAGERE/DATE:23_09_2025
ದಾವಣಗೆರೆ: ಬೆಂಕಿ ಹಚ್ಚುವವರ ಬಗ್ಗೆ ಹುಷಾರಾಗಿರಿ. ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬರಲು ಯುವಜನತೆ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಾರೆ. ಎಲ್ಲಾ ಧರ್ಮದಲ್ಲೂ ಒಳ್ಳೆಯವರು ಕೆಟ್ಟವರಿರುತ್ತಾರೆ. ಕೆಟ್ಟವರನ್ನು ದೂರವಿಡಿ ಎಂದು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
READ ALSO THIS STORY: ಸ್ಮಾರ್ಟ್ ರೋಡ್ ವೀಕ್ಷಿಸಿದ ಸಚಿವರು ಖುಷ್: ನುಡಿದಂತೆ ನಡೆಯುತ್ತೇವೆ, ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಬದ್ಧತೆ ಎಂದ್ರು ಎಸ್. ಎಸ್. ಮಲ್ಲಿಕಾರ್ಜುನ್
ನಗರದ ಕೆಟಿಜೆ ನಗರ 15ನೇ ಕ್ರಾಸ್ ನ ಒಂದನೇ ಮುಖ್ಯ ರಸ್ತೆಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಮತ್ತು 37ನೇ ವಾರ್ಡ್ ಸಮಸ್ತ ನಾಗರಿಕರ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾನ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಯುವಕರು ತನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು. ಧರ್ಮ, ಜಾತಿ ಎಂದು ವಿಷಬೀಜ ಬಿತ್ತಿ ಭವಿಷ್ಯವನ್ನೇ ಹಾಳು ಮಾಡುತ್ತಿದ್ದಾರೆ. ಇಂಥವರ ಮಾತಿಗೆ ಬೆಲೆ ಕೊಡದೇ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಕಷ್ಟಪಟ್ಟು ದುಡಿದು ಆರ್ಥಿಕವಾಗಿ ಸಬಲರಾಗುವ ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಆಗ ಮಾತ್ರ ಸಮಾಜದ ಆಸ್ತಿಗಳಾಗುತ್ತೀರಾ. ಯಾರದ್ದೋ ಮಾತಿಗೆ, ಯಾರೋ ಅಧಿಕಾರ ಹಿಡಿಯಲು ನಿಮ್ಮನ್ನು ಬಳಸಿಕೊಳ್ಳುವವರ ಬಗ್ಗೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು.
ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಬಿಂಬಿಸುತ್ತಿರುವುದನ್ನು ನೋಡಿದರೆ ಅಸಹ್ಯ ಎನಿಸುತ್ತದೆ. ಯಾರೇ ತಪ್ಪು ಮಾಡಿದ್ದರೂ ಅಣ್ಣಪ್ಪ ಸ್ವಾಮಿ ಶಿಕ್ಷಿಸುವುದು ಖಚಿತ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಲ್ಲಿಗೆ ಪಾದಯಾತ್ರೆ ಹೋದರು. ಊರು ಹಾಳು ಮಾಡುತ್ತಾರೆ, ವ್ಯಾಪಾರಕ್ಕೂ ಸಮಸ್ಯೆ ತಂದೊಡ್ಡುತ್ತಾರೆ. ಧರ್ಮ, ಜಾತಿ ಎನ್ನದೇ ಎಲ್ಲರೂ ಸಹೋದರರಾಗಿ ಬದುಕೋಣ ಎಂದು ಹೇಳಿದರು.
ಗಲಾಟೆ ಮಾಡುವುದು ಯಾವುದೇ ಪಕ್ಷದ ಮುಖಂಡರ ಮಕ್ಕಳಲ್ಲ. ಬದಲಾಗಿ ಬಡವರು, ಆರ್ಥಿಕವಾಗಿ ಹಿಂದುಳಿದವರ ಮಕ್ಕಳೇ ಹೆಚ್ಚು. ನಿಮಗೆ ಧರ್ಮದ ಹೆಸರಿನಲ್ಲಿ ಪ್ರತಿಭಟನೆ, ಹೋರಾಟ, ಗಲಾಟೆಗೆ ಯಾರೇ ಕರೆದರೂ ನಿಮ್ಮ ಮಕ್ಕಳನ್ನು ಮೊದಲು ಬರಲಿ ಹೇಳಿ. ಆಮೇಲೆ ಬರುತ್ತೇವೆ ಎನ್ನಿ. ಅಭಿವೃದ್ಧಿ ಬಗ್ಗೆ ಮಾತನಾಡದೇ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದರು.
ಈ ವಾರ್ಡ್ ನ ಜಗನ್ನಾಥ್ ಎಂದರೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ತುಂಬಾನೇ ಪ್ರೀತಿ. ಅವರು ಮಾಡಿರುವ ಕಾರ್ಯಗಳು ಚಿರಸ್ಥಾಯಿ. ಜಗನ್ನಾಥ್ ಅವರ ಹೆಸರಿನಲ್ಲಿ ಪೌರ ಕಾರ್ಮಿಕರು, ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯ ಮಾಡುತ್ತಿರುವ ಜಗನ್ನಾಥ ಅವರ ಪುತ್ರ ಗಜೇಂದ್ರ ಜಗನ್ನಾಥ ಅವರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಜಗನ್ನಾಥ ಮಾತನಾಡಿ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನುಮದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿವರ್ಷವೂ ಇದೇ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ನಮಗೆಲ್ಲಾ ಮಲ್ಲಣ್ಣ ಅವರ ಅಭಿವೃದ್ಧಿ ಕಾರ್ಯಗಳು ಮಾದರಿ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವ ಮಲ್ಲಿಕಾರ್ಜುನ್ ಅವರು ಮುಂಬರುವ ದಿನಗಳಲ್ಲಿ ದಾವಣಗೆರೆ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಹೆಸರು ಮಾಡುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ತಂದೆ ಜಗನ್ನಾಥ ಅವರು ಮೊದಲಿನಿಂದಲೂ ಸಮಾಜಸೇವೆ ಮಾಡಿಕೊಂಡು ಬಂದವರು. ಅವರ ಹಾದಿಯಲ್ಲಿ ಸಾಗುತ್ತಿದ್ದೇವೆ. ಬಡ ಮಕ್ಕಳಿಗೆ ಪುಸ್ತಕ ನೀಡಿದರೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಪೌರಕಾರ್ಮಿಕರು ಮತ್ತು ಪೊಲೀಸರನ್ನು ಸನ್ಮಾನಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.
ಕೆಟಿಜೆ ನಗರ ಇನ್ ಸ್ಪೆಕ್ಟರ್ ಸುನೀಲ್, ,ಹೆಡ್ ಕಾನ್ ಸ್ಟೇಬಲ್ ಗಳಾದ ಸುರೇಶ್ ಬಾಬು, ತಿಮ್ಮಣ್ಣ, ಮೊಹಮ್ಮದ್ ರಫಿಕ್, ಪೌರಕಾರ್ಮಿಕರಾದ ನಾಗರಾಜ್, ಚಂದ್ರು, ಸೂರ್ಯರಾಜ್, ಹನುಮಂತಪ್ಪ, ರವಿಕುಮಾರ್, 37ನೇ ವಾರ್ಡ್ ನ ಜೋಗತಿಯಮ್ಮ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಜಿ. ಶಿವಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಕಲ್ಪತರು, ಮಹಾನಗರ ಪಾಲಿಕೆ ಮಾಜಿ ನಾಮನಿರ್ದೇಶಿತ ಸದಸ್ಯೆ ಪುಷ್ಪಲತಾ ಜಗನ್ನಾಥ್. ಸಂತೋಷ್ ಕುಮಾರ್( ಸಂತು), ಪಾಪಣ್ಣಿ, ಎಲೆಕ್ಟ್ರಿಕಲ್ ಶಾಪ್ ಅಶೋಕ್, ಕ್ಯಾಂಟೀನ್ ಚಂದ್ರು, ಚಂದ್ರಶೇಖರ್ ಜಗನ್ನಾಥ್, ಬಾಬು, ಸುಭಾಷ್, ಮಂಜುನಾಥ್, ಕುಮಾರ್, ರಾಜೀವ, ಸಂತು, ಮೌನೇಶ್, ವೀರೇಶ್, ಬಾರ್ ರವಿ ಸೇರಿದಂತೆ ಅನೇಕರು ಹಾಜರಿದ್ದರು.