Home ಕ್ರೈಂ ನ್ಯೂಸ್ ನರ್ಸಿಂಗ್ ಹೋಂ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಹೊರಗೆಸೆದ 16 ವರ್ಷದ ಅಪ್ರಾಪ್ತೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನರ್ಸಿಂಗ್ ಹೋಂ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಹೊರಗೆಸೆದ 16 ವರ್ಷದ ಅಪ್ರಾಪ್ತೆ!

Share
ಜನ್ಮ
Share

ಹುಗ್ಲಿ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಹುಗ್ಲಿ ಜಿಲ್ಲೆಯ ಉತ್ತರಪಾರಾ ಪುರಸಭೆಗೆ ಒಳಪಟ್ಟ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಶನಿವಾರ ನಸುಕಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನರ್ಸಿಂಗ್ ಹೋಂನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ತಕ್ಷಣವೇ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆಸೆದಿದ್ದು, ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಶುಕ್ರವಾರ ತಡರಾತ್ರಿ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಶನಿವಾರ ಬೆಳಿಗ್ಗೆ ನೋವು ಹೆಚ್ಚಾದಾಗ ಶೌಚಾಲಯಕ್ಕೆ ತೆರಳಿದ ಆಕೆ, ಯಾರ ಸಹಾಯವೂ ಇಲ್ಲದೆ ಹೆರಿಗೆ ಮಾಡಿಕೊಂಡಿದ್ದಾಳೆ. ತರುವಾಯ ನವಜಾತ ಹೆಣ್ಣುಮಗುವನ್ನು ಶೌಚಾಲಯದ ಕಿಟಕಿಯಿಂದ ಆಚೆಗೆ ಎಸೆದಿದ್ದಾಳೆ ಎಂದು ನರ್ಸಿಂಗ್ ಹೋಂ ಆಡಳಿತ ಮಂಡಳಿ ಆರೋಪಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಕಂಡು ಹಾದಿಹೋಕರು ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆ ಸಿಬ್ಬಂದಿ ಧಾವಿಸುವಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.

ಕುಟುಂಬದ ಹೇಳಿಕೆ: ಬಾಲಕಿ ಗರ್ಭಿಣಿಯಾಗಿದ್ದ ವಿಷಯ ತಮಗೆ ತಿಳಿದಿರಲಿಲ್ಲ. ಸಾಮಾನ್ಯ ಹೊಟ್ಟೆನೋವು ಎಂದು ಭಾವಿಸಿ ಆಸ್ಪತ್ರೆಗೆ ಸೇರಿಸಿದ್ದೆವು ಎಂದು ಆಕೆಯ ಪೋಷಕರು ಹೇಳಿದ್ದಾರೆ.

ನರ್ಸಿಂಗ್ ಹೋಂ ಸ್ಪಷ್ಟನೆ: ಆಸ್ಪತ್ರೆಗೆ ಸೇರಿಸುವಾಗ ಗರ್ಭಧಾರಣೆಯ ಬಗ್ಗೆ ಪದೇ ಪದೇ ವಿಚಾರಿಸಿದರೂ ಕುಟುಂಬಸ್ಥರು ನಿರಾಕರಿಸಿದ್ದರು. ಆಕೆಗೆ ರಕ್ತ ಪರೀಕ್ಷೆ ಮಾಡಿಸುವ ಹಂತದಲ್ಲೇ ಈ ಘಟನೆ ಸಂಭವಿಸಿದೆ ಎಂದು ನರ್ಸಿಂಗ್ ಹೋಂ ಮಾಲೀಕ ಸುಚೇತಾ ಮುಖರ್ಜಿ ತಿಳಿಸಿದ್ದಾರೆ.

ಪೊಲೀಸ್ ತನಿಖೆ: ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪೋಷಕರು ಹಾಗೂ ನರ್ಸಿಂಗ್ ಹೋಂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ಆರೋಪ: ಈ ನರ್ಸಿಂಗ್ ಹೋಂನಲ್ಲಿ ಇಂತಹ ಘಟನೆಗಳು ಹೊಸದೇನಲ್ಲ, ಈ ಹಿಂದೆಯೂ ಭ್ರೂಣ ಪತ್ತೆಯಾದ ಉದಾಹರಣೆಗಳಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉತ್ತರಪಾರಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *