SUDDIKSHANA KANNADA NEWS/ DAVANAGERE/ DATE:01-06-2024
ದಾವಣಗೆರೆ: ಲಕ್ಷಾಂತರ ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು ಆಗಿದ್ದ ಶಿಕ್ಷಣ ತಜ್ಞ, ಜಾನಪದ ತಜ್ಞ, ರಂಗಭೂಮಿ ಸೇರಿದಂತೆ ಎಲ್ಲಾ ವಲಯಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದ ಎಂ. ಜಿ. ಈಶ್ವರಪ್ಪ ಅವರು ನೆನಪು ಮಾತ್ರ. ಆದ್ರೆ, ಅವರು ಬಿಟ್ಟು ಹೋಗಿರುವ ಸಾಧನೆ, ವಿವಿಧ ಕ್ಷೇತ್ರಗಳಲ್ಲಿನ ಕಸುವು ಎಂದೆಂದಿಗೂ ಮರೆಯದೇ ಉಳಿಯುತ್ತದೆ.
ಎಂ. ಜಿ. ಈಶ್ವರಪ್ಪ ಅವರೆಂದರೆ ಶಿಸ್ತು. ನೇರ ಮಾತು, ಹಿಡಿದ ಕೆಲಸ ಮುಗಿಸುವ ಹಠವಾದಿ. ಯಾವುದೇ ಕ್ಷೇತ್ರವಿರಲಿ, ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ ಅಪರೂಪದಲ್ಲಿ ಅಪರೂಪ ಎನಿಸುವಂತ ವ್ಯಕ್ತಿತ್ವದ, ಸರಳತೆಯ ಸಾಕಾರಮೂರ್ತಿ. ವಿದ್ಯಾರ್ಥಿಗಳಿಗೆ ಈಶ್ವರಪ್ಪ ಮೇಷ್ಟ್ರು ಅಂದರೆ ಅಷ್ಟೇ ಭಯ, ಪ್ರೀತಿ, ಗೌರವ. ಓದಿ ಹಲವು ವರ್ಷಗಳಾದರೂ ಈಶ್ವರಪ್ಪ ಅವರೆಂದರೆ ತನ್ನಿಂತಾನೆ ಗೌರವ ಬಂದುಬಿಡುತಿತ್ತು.
ಇನ್ನು ಶಾಮನೂರು ಶಿವಶಂಕರಪ್ಪರ ಕುಟುಂಬದ ಒಡನಾಡಿ ಆಗಿದ್ದ ಎಂ. ಜಿ. ಈಶ್ವರಪ್ಪ ಅವರು ಶಾಮನೂರು ಶಿವಶಂಕರಪ್ಪರ ಕುರಿತ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದು. ಇದು ಎಲ್ಲರಿಗೂ ಇಷ್ಟವಾಗಿತ್ತು. ಸಾಹಿತ್ಯ, ಶಿಕ್ಷಣ, ರಂಗಭೂಮಿ, ನಟನೆ, ನಿರ್ದೇಶನ, ಬರವಣಿಗೆ, ಬಂಡಾಯ ಸಾಹಿತ್ಯ ಹೀಗೆ ಎಲ್ಲಾ ರಂಗಗಳಲ್ಲಿಯೂ ತಮ್ಮದೇ ಆದ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ ಧೀಮಂತರು.
ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಾಡೋನಹಳ್ಳಿಯವರು. ಆದ್ರೆ, ಇವರು ದಾವಣಗೆರೆಯವರೇ ಆಗಿದ್ದಾರೆ. ಅವರ ಜೀವಮಾನದ ಮುಕ್ಕಾಲು ಭಾಗವನ್ನು ಇಲ್ಲಿಯೇ ಕಳೆದು ದಾವಣಗೆರೆಯ ನೆಚ್ಚಿನ ಮೆಷ್ಟ್ರು ಆಗಿದ್ದಾರೆ. ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರೂ ಆಗಿದ್ದಾರೆ.
ಎಂ.ಎ. (ಕನ್ನಡ), ಡಿಪ್ಲೋಮಾ ಇನ್ ಇಂಗ್ಲೀಷ್ ಹಾಗೂ ಪಿಹೆಚ್ ಡಿ ಮಾಡಿದ್ದಾರೆ. 38 ವರ್ಷಗಳ ಅಧ್ಯಾಪಕ ವೃತ್ತಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ಸಂಘಗಳಲ್ಲಿ ಸಕ್ರಿಯ ನಿರ್ವಹಣೆ 4 ವರ್ಷಗಳು ಮೈಸೂರು ವಿವಿ ಸೆನಟ್ ಸದಸ್ಯರಾಗಿ, ಅಧ್ಯಾಪಕರ ಪ್ರತಿನಿಧಿಯಾಗಿ ಎನ್ ಎಸ್ ಎಸ್ ಅಧಿಕಾರಿಯಾಗಿ 11 ವರ್ಷಗಳ ಸೇವೆ ಜೊತೆಗೆ ಗ್ರಾಮೀಣ ಜನಜೀವನದ ಸಮಸ್ಯೆಗಳ ಪರಿಚಯ ಕುರಿತು ಆರು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಶಿವಮೊಗ್ಗ ತಾಲೂಕಿನ ಹೊಳಲೂರು ಹಾಗೂ ದಾವಣಗೆರೆ ಜಿಲ್ಲೆಯ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (ಹರಿಹರ) ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯರಾಗಿ, ಕುವೆಂಪು ವಿವಿಯ ಶಿಕ್ಷಣ ಮಂಡಳಿ ಸದಸ್ಯರಾಗಿದ್ದಾರೆ.
ಸಂಪಾದಿಸಿದ ಕೃತಿಗಳು:
ದವನಸಿರಿ, ಶತಮಾನದ ದಾವಣಗೆರೆ, ಹೊಸಗನ್ನಡ ಕಥಾ ಸಾಹಿತ್ಯ, ಸಮಾಜಮುಖಿ ಹಾಗೂ ಪ್ರಬಂಧಗಳು.
ಸಂಶೋಧನಾ ಮಾರ್ಗದರ್ಶಕರಾಗಿ:
ಬಂಡಾಯ ಮತ್ತು ದಲಿತ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ ಚಿತ್ರದುರ್ಗ ಜಿಲ್ಲೆಯ ಬಯಲಾಟದ ಹಸ್ತಪ್ರತಿಗಳು, ಉಪ್ಪಾರ ಜನಾಂಗ ಒಂದು ಸಾಂಸ್ಕೃತಿಕ ಅಧ್ಯಯನ.
ಸಂದ ಪ್ರಶಸ್ತಿಗಳು:
ಗುಂಡಿ ಜಾನಪದ ಪ್ರಶಸ್ತಿ, ಕು. ಶಿ. ಹರಿದಾಸಭಟ್ಟ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಗೌರವ ಫಿಲೋಸಫಿ, ಕರ್ನಾಟಕ ಜಾನಪದ ಅಕಾಡೆಮಿ ತಜ್ಞ ಪ್ರಶಸ್ತಿ, ಹ. ಕ. ರಾಜೇಗೌಡ ಜಾನಪದ ಪ್ರಶಸ್ತಿ, ಮಹಾಲಿಂಗರಂಗ ಪ್ರಶಸ್ತಿ, ರಂಸಂಸ್ಥಾನ ಜಾನಪದ
ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ನಾಟಕ ಮತ್ತು ರಂಗಭೂಮಿ ಸಿದ್ದಹಸ್ತರು:
ನಾಟಕ ಅಕಾಡೆಮಿಯ ಅಫಿಲಿಯೇಷನ್ ಪಡೆದಿರುವ ಇವರು ದಾವಣಗೆರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಕಾರ್ಯದರ್ಶಿ, ಉಪಾಧ್ಯಕ್ಷರು, ಅಧ್ಯಕ್ಷರಾಗಿ ಸಕ್ರಿಯ ಪಾತ್ರ, ಅನೇಕ ರಾಷ್ಟ್ರ ಮತ್ತು ರಾಜ್ಯಮಟ್ಟದ ರಂಗ ನಟನೆ ನಿರ್ದೇಶನ ಕುರಿತಂತೆ ಶಿಬಿರದಲ್ಲಿ ಭಾಗವಹಿಸಿ ಕೇರಳದ ತ್ರಿಚೂರಿನಲ್ಲಿ 2 ತಿಂಗಳ ರಂಗ ತರಬೇತಿ ಪಡೆದಿದ್ದಾರೆ. ಬಿ. ವಿ. ಕಾರಂತರ ಮಾರ್ಗದರ್ಶನದಲ್ಲಿ ಭೂಪಾಲ್ ಮತ್ತು ದೆಹಲಿಯಲ್ಲಿ, ರಂಗಭೂಮಿ ಅಧ್ಯಯನ ಮಾಡಿದ್ದಾರೆ.
ಅಭಿನಯಿಸಿದ ನಾಟಕಗಳು:
ಮೆರವಣಿಗೆ, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತ ಕಬೀರ ಸೆಜುವಾನಿನ ಸಾದ್ವಿ, ಕೊಡೆಗಳು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿಗಳಲ್ಲೊಬ್ಬರಾಗಿ, ಜಿಲ್ಲಾ ಕಸಾಪದ ಅಧ್ಯಕ್ಷರಾಗಿ, ಪ್ರತಿಮಾ ಸಭಾದಂತಹ ಪ್ರಾತಿನಿಧಿಕ ಸಂಸ್ಥೆಯ ಕ್ರಿಯಾಶೀಲ ಕಾರ್ಯಕರ್ತರಾಗಿ ಸರಿಸುಮಾರು ಅರ್ಧ ಶತಮಾನದಷ್ಟು ಕಾಲ ದಾವಣಗೆರೆ ನಗರದಲ್ಲಿ ಸಾಂಸ್ಕೃತಿಕ ಜೀವಂತಿಕೆಗೆ ಕಾರಣರಾದವರು.
ವಿದ್ಯಾರ್ಥಿ ದೆಸೆಯಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ ಈಶ್ವರಪ್ಪನವರು ನಟನೆ ಮತ್ತು ನಿರ್ದೆಶನದಲ್ಲೂ ಸೈ ಎನಿಸಿಕೊಂಡವರು. ಅದಕ್ಕೆ ಇಂಬು ಕೊಟ್ಟದ್ದು ಕೇರಳದ ತ್ರಿಚೂರಿನ ಸ್ಕೂಲ್ ಆಫ್ ಡ್ರಾಮ ಮತ್ತು ಬಿ ವಿ ಕಾರಂತರ ಮಾರ್ಗದರ್ಶನದಲ್ಲಿ ಭೂಪಾಲ್ ಮತ್ತು ದೆಹಲಿಯಲ್ಲಿ ರಂಗಭೂಮಿಯ ತಲಸ್ಪರ್ಶಿ ಅಧ್ಯಯನ. ಅದರ ಪ್ರತಿಫಲವಾಗಿ ಮೆರವಣಿಗೆ, ಸೆಜುವಾನಿನ ಸಾದ್ವಿ, ಕೊಡೆಗಳು, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತಾನ ಕಬೀರ ಮುಂತಾದ ನಾಟಕಗಳಲ್ಲಿ ಅಭಿನಯ. ಜಾತ್ರೆ, ಸಾಯೋ ಆಟ, ಅಪ್ಪ, ಕಡೇಮನೆ ಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳ ನಿರ್ದೆಶನ.
ಪ್ರಕಟಣೆ:
ಸಗಣಿಗುಂಡಿ, ನೀರಗುಂಡಿ, ದಡ್ಡಮಗ, ಬ್ಯಾಚುಲರ್ ಪುಂಸ್ತ್ರಿ ಲಿಂಗಗಳು, ಪಂಚಲೋಹದ ಕುದುರೆ ಅನೇಕ ಲಾವಣಿಗಳು, ಲೇಖನಗಳು ಪ್ರಕಟವಾಗಿವೆ. ಮ್ಯಾಸಬೇಡರ ಬೇಸಾಯ ಪದ್ಧತಿ, ನಮ್ಮ ಬೇಸಾಯ, ಬಂಗಾರ ಕೂದಲ ಜೈರಾಣಿ, ಹುನಗುಂದ
ಬಾಬಣ್ಣ, ಕೃಷಿ ಜಾನಪದ.
ಹೇಗಿತ್ತು ಬಾಲ್ಯ ಜೀವನ:
ಒಕ್ಕಲುತನದ ಮನೆತನದಿಂದ ಬಂದ ಈಶ್ವರಪ್ಪನವರಿಗೆ ಕೃಷಿ ಮತ್ತು ಜಾನಪದದಲ್ಲಿ ವಿಶೇಷ ಆಸಕ್ತಿ. ಹೊಳೆ ದಂಡೆಯ, ಮಲೆನಾಡಿನ ಸೆರಗಿನ ಹಾಡೋನಹಳ್ಳಿ ಈಶ್ವರಪ್ಪನವರ ಜನ್ಮಸ್ಥಳ. ಅಲ್ಲಿ ಸಮೃದ್ಧ ಗ್ರಾಮಿಣ ಬದುಕಿನ ಸವಿಯನ್ನು ಸವಿದವರು. ಜನಪದ ಸಂಸ್ಕೃತಿ ಕೇವಲ ಓದಿನ ಕಾರಣಕ್ಕೆ ಮಾತ್ರವಲ್ಲ; ಅನುಭವದ ಮೂಸೆಯಿಂದ ಬಂದಂತಹದ್ದು. ಒಂದು ರೀತಿಯಲ್ಲಿ ಕೃಷಿಯ ಆಚರಣೆಗಳು ಮತ್ತು ಜನಪದರ ನಂಬಿಕೆಗಳು ಸಹ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ `ಜಾನಪದ ವ್ಯವಸಾಯ’ ಎಂಬ ಮಹಾಪ್ರಬಂಧ ಕೇವಲ ಪದವಿಗಾಗಿ ರಚಿಸಿದ್ದಾಗದೆ, ಒಂದು ಕಾಲಘಟ್ಟದ ಕೃಷಿಕರ ಜೀವನ ವಿಧಾನ, ಕೃಷಿಯಲ್ಲಿ ನಂಬಿಕೆಗಳು, ಆಚರಣೆಗಳನ್ನು ಕುರಿತು ವಿವರವಾಗಿ ತಿಳಿಯ ಹೇಳುವ ಸಂಕಥನ ಎಂದರೆ ತಪ್ಪಾಗಲಾರದು.
ಸಂದ ಗೌರವಗಳು: ಜಾನಪದ, ರಂಗಭೂಮಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಅನುಭವ, ಪಾಂಡಿತ್ಯದಿಂದಾಗಿ ಹತ್ತಾರು ಮಹತ್ವದ ಸಾಹಿತ್ಯ ಕೃತಿಗಳ ಪ್ರಕಟಣೆ. ಜೊತೆಗೆ ಸಂಪಾದಕರಾಗಿ ಹಲವು ಮಹತ್ವದ ಕೃತಿಗಳ ಬೆಳಕು ಕಂಡಿವೆ. ಇವರ ಪ್ರತಿಭಾ ಸಂಪನ್ನತೆಗೆ ಸಂದ ಪ್ರಶಸ್ತಿ – ಪುರಸ್ಕಾರಗಳು ಸಹ ಗಣನೀಯವಾಗಿವೆ, ಕರ್ನಾಟಕ ನಾಟಕ ಅಕಾಡಮಿಯ ಗೌರವ ಫೆಲೋಶಿಪ್, ಕರ್ನಾಟಕ ಜಾನಪದ ಅಕಾಡಮಿಯ `ತಜ್ಞ ಪ್ರಶಸ್ತಿ’ ಗಳ ಜೊತೆಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (2020), ದಾವಣಗೆರೆ ಜಿಲ್ಲೆಯ `ಮಹಲಿಂಗರಂಗ’ ಮುಂತಾದ ಪ್ರಶಸ್ತಿಗಳು ಇವರ ಮಕುಟದ ಗರಿಗಳಾಗಿವೆ.
2022 ಈಶ್ವರಪ್ಪನವರ ಪಾಲಿಗೆ ತುಸು ಹೆಚ್ಚು ಹರ್ಷವನ್ನುಂಟು ಮಾಡಿದ ವರ್ಷ. ಮನೆಯಲ್ಲಿ ಮುದ್ದುಮೊಮ್ಮಗಳ ಕಲರವದೊಂದಿಗೆ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ `ಶಿವಕುಮಾರ ರಂಗ ಪ್ರಶಸ್ತಿ’ ಮತ್ತು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಮಟ್ಟದ ಐದನೆಯ ಭಕ್ತಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ.
ಡಾ. ಪುಟ್ಟರಾಜ ಗವಾಯಿಗಳಿಗೆ ಗದಗಿನಂತೆಯೇ ದಾವಣಗೆರೆಯು ಕೂಡ ಕರ್ಮಭೂಮಿ. ಇಲ್ಲಿ ನಡೆಯುತ್ತಿರುವ ಭಕ್ತಿ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣ ಮತ್ತು ಔಚಿತ್ಯಪೂರ್ಣ. ಇದಕ್ಕೆ ಡಾ. ಎಂ ಜಿ ಈಶ್ವರಪ್ಪನವರ ಸರ್ವಾಧ್ಯಕ್ಷತೆಯು ಪರಿಪೂರ್ಣತೆಯನ್ನು ತಂದುಕೊಟ್ಟಿದೆ. ಇವರ ನಿಧನದಿಂದ ರಂಗಭೂಮಿ, ಸಾಹಿತ್ಯ ವಲಯ, ಶಿಕ್ಷಣ ಕ್ಷೇತ್ರ ಬಡವಾಗಿದೆ.