SUDDIKSHANA KANNADA NEWS/ DAVANAGERE/ DATE:12-08-2023
ಬೆಂಗಳೂರು: ಬಿಬಿಎಂಪಿ (Bruhat Bengaluru Mahanagara Palike) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಸಂಭವಿಸಿರುವ ಬೆಂಕಿ ಅನಾಹುತ ಪ್ರಕರಣ ಸಂಬಂಧ ತನಿಖೆಗೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಘಟನೆ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಲಾಗುವುದು. ಈ ಘಟನೆಯ ಹಿಂದೆ ಯಾರಾದ್ದಾದರೂ ಕೈವಾಡವಿದೆಯೋ ಅಥವಾ ಆಕಸ್ಮಿಕವಾಗಿ
ನಡೆದಿದೆಯೋ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.
ಬಿಬಿಎಂಪಿ (Bruhat Bengaluru Mahanagara Palike) ಕೇಂದ್ರ ಕಚೇರಿ ಆವರಣದಲ್ಲಿನ ಕಟ್ಟಡದಲ್ಲಿ ನಡೆದ ಅಗ್ನಿ ಅವಘಡ ಪ್ರಕರಣ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದಂತೆ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ, ಘಟನೆ ಸಂಬಂಧ ತನಿಖೆಗೆ ಸೂಚಿಸಿದ್ದೇನೆ ಎಂದರು. ಘಟನೆಯಲ್ಲಿ ಒಬ್ಬರಿಗೆ ಶೇ.38ರಷ್ಟು ಸುಟ್ಟ ಗಾಯಗಳಾಗಿವೆ. 48 ಗಂಟೆಗಳ ಕಾಲ ನಿಗಾದಲ್ಲಿ ಇಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಎಲ್ಲರನ್ನೂ ಐಸಿಯುಗೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಈ ಸುದ್ದಿಯನ್ನು ಓದಿ:
Siddaramaiah: ಗುತ್ತಿಗೆದಾರರಿಗೆ ಅನ್ಯಾಯ ಆಗಲು ಬಿಡಲ್ಲ, ಉಪ್ಪು ತಿಂದವರು ನೀರು ಕುಡಿಯಲೇಬೇಕಲ್ವೇ?: ಸಿದ್ದರಾಮಯ್ಯ
ಘಟನೆಯಲ್ಲಿ ಸಿಬ್ಬಂದಿ ಮುಖ, ಕೈಗಳಿಗೆ ಗಾಯಗಳಾಗಿವೆ, ಅದೃಷ್ಟವಶಾತ್ ಕಣ್ಣುಗಳಿಗೆ ಹಾನಿಯಾಗಿಲ್ಲ. ಮೇಲ್ನೋಟಕ್ಕೆ ಎಲ್ಲರೂ ಬದುಕುಳಿಯುತ್ತಾರೆಂಬ ವಿಶ್ವಾಸವಿದೆ. ಆದಷ್ಟು ಬೇಗ ಗುಣಮುಖರಾಗಲಿ ಅಂತಾ ಪ್ರಾರ್ಥಿಸುತ್ತೇನೆ. ಘಟನೆ ಹೇಗಾಯ್ತು ಎಂದು ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದೇನೆ. ಬೆಂಕಿ ಪ್ರಕರಣದ ಬಗ್ಗೆ ಎಫ್‌ಐಆರ್ ಸಹ ದಾಖಲಾಗಿದೆ ಎಂದು ಸಿಎಂ ತಿಳಿಸಿದರು.
ಪಾಲಿಕೆ ಕಚೇರಿಯಲ್ಲಿ ಕ್ವಾಲಿಟಿ ಕಂಟ್ರೋಲ್ ರೂಂನಲ್ಲಿ ರೋಟಿನ್ ಮೀಟಿಂಗ್ ವೇಳೆ ಅವಘಡ ಸಂಭವಿಸಿದೆ. ಕೆಳಗಡೆ ಕೆಮಿಕಲ್ ಇದ್ದು, ಲ್ಯಾಬ್ ಟೆಸ್ಟಿಂಗ್ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಐದು ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಅವಘಡ ಸಂಭವಿಸುತ್ತಿದ್ದಂತೆ ಇಬ್ಬರು ಅಪರೇಟರ್ಸ್ ಸುರೇಶ್ ಮತ್ತು ಆನಂದ್ ಕೆಳಗಡೆ ಬಂದಿದ್ದಾರೆ. ನಂತರ ಹೊರಗಡೆ ಬರುವಾಗ ಬೆಂಕಿ ತಗುಲಿದೆ. ಕೆಲವರಿಗೆ ಶೇ.28 ರಷ್ಟು, ಇನ್ನೂ ಕೆಲವರಿಗೆ ಶೇ.35 ರಿಂದ 40 ರಷ್ಟು ಗಾಯಗಳಾಗಿವೆ ಎಂದರು.
ಪ್ರತ್ಯೇಕವಾಗಿ ತನಿಖೆ ಮಾಡಿಸುತ್ತೇವೆ: ಡಿಕೆಶಿ
ಗಾಯಾಳುಗಳ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಡಿಕೆ ಶಿವಕುಮಾರ್, ಬೆಂಕಿ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ಮಾಡಿಸುತ್ತೇವೆ. ಗಾಯಗೊಂಡಿರುವ ವ್ಯಕ್ತಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.