SUDDIKSHANA KANNADA NEWS/DAVANAGERE/DATE:23_10_2025
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯರ ಉತ್ತರಾಧಿಕಾರಿಯಾಗಲು ಸಚಿವ ಸತೀಶ್ ಜಾರಕಿಹೊಳಿ ಅರ್ಹರು ಎಂಬ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿರುವುದು ಬಾಲಿಶತನದ್ದು ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಕಿಡಿಕಾರಿದ್ದಾರೆ.
READ ALSO THIS STORY: ರಾಜಕೀಯದ ಸಂಧ್ಯಾಕಾಲದಲ್ಲಿ ಸಿದ್ದರಾಮಯ್ಯ: ಮುಂದಿನ ಸಂಭಾವ್ಯ ಉತ್ತರಾಧಿಕಾರಿಯ ಹೆಸರು ಮಗನಿಂದ ಘೋಷಿಸಿದ್ರಾ ಸಿಎಂ?
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಹೊಂದಿರುವ ಪಕ್ಷ. ಮೈಸೂರು ರಾಜರ ಮನೆ ಅಲ್ಲ. ಮೈಸೂರು ರಾಜಮನೆತನದಲ್ಲಿ ಕುಟುಂಬದವರು ಅರಸರಾಗಿ ಮುಂದುವರಿಯುತ್ತಾರೆ. ವಂಶಪಾರ್ಯಪರ್ಯವಾಗಿರುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಮುಂದಿನ ಮುಖ್ಯಮಂತ್ರಿ ಯಾರು? ಮುಂದಿನ ಉತ್ತರಾಧಿಕಾರಿ ಯಾರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಯಾರ್ಯಾರೋ ಏನೋ ಹೇಳಿಕೆ ಕೊಟ್ಟು ಪಕ್ಷಕ್ಕೆ ಮುಜುಗರ ತರುವ ರೀತಿ ಮಾತನಾಡಬಾರದು ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
ಯತೀಂದ್ರ ಸಿದ್ದರಾಮಯ್ಯರು ಹಿರಿಯ ಮುಖಂಡರು. ಒಮ್ಮೆ ಶಾಸಕರಾಗಿದ್ದವರು. ಈಗ ವಿಧಾನ ಪರಿಷತ್ ಸದಸ್ಯರಿದ್ದಾರೆ. ನಾವು ಅವರ ದಾರಿಯಲ್ಲಿ ನಡೆಯಬೇಕಾಗುತ್ತದೆ. ಮುಂದೆ ನಾವೂ ಅವರದ್ದೇ ದಾಟಿಯಲ್ಲಿ ಮಾತನಾಡಬೇಕಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದು ಹೇಳಿದರು.
ನಾನು ಒಂದು ಹೇಳಿಕೆ ನೀಡುವುದು, ಇನ್ನೊಬ್ಬರು ಮತ್ತೊಂದು ಹೇಳಿಕೆ ನೀಡುವುದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. 2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮತ್ತೆ ನಾವು ಮುಖ್ಯಮಂತ್ರಿಯನ್ನು ನೋಡುವುದನ್ನು ಕಾಣಬೇಕು ಎಂದು. ಇದು ನಮ್ಮೆಲ್ಲರ ಅಪೇಕ್ಷೆ. ಸುಖಾಸುಮ್ಮನೆ ಬಾಲಿಶ ಹೇಳಿಕೆ ನೀಡಬಾರದು. ಹೈಕಮಾಂಡ್ ಗಮನ ಹರಿಸಬೇಕು. ಒಂದು ಮತವೂ ಮುಖ್ಯ. ಒಂದು ಕ್ಷೇತ್ರದಲ್ಲಿ ಎರಡೂವರೆ ಲಕ್ಷ ಮತದಾರರಿರುತ್ತಾರೆ. ಯಾರೋ ಒಂದು ಹೇಳಿಕೆ ಕೊಟ್ಟರೆ ಸುಮ್ಮನಿರುವುದು ಸರಿಯಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಮಗ ಹೇಳಿಕೆ ಕೊಟ್ಟರೆ ಸುಮ್ಮನೆ ಇರಬಾರದು. ನಾನು ಮಾತನಾಡಿದರೆ ನೊಟೀಸ್ ಕೊಡುತ್ತಾರೆ. ಇದು ಯಾವುದು ಧರ್ಮ? ಹೈಕಮಾಂಡ್ ಕ್ರಮ ತೆಗೆದುಕೊಂಡರೆ ಉತ್ತಮ. ಇಂಥ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡುವುದಾಗಿ
ಹೇಳಿದರು.
ಯತೀಂದ್ರ ಸಿದ್ದರಾಮಯ್ಯರು ಇದೇ ಮೊದಲ ಬಾರಿ ಮಾತನಾಡಿಲ್ಲ. ಈ ಹಿಂದೆಯೂ ತುಂಬಾ ಬಾರಿ ಮಾತನಾಡಿದ್ದಾರೆ. ಈ ರೀತಿ ಹೇಳಿಕೆ ನೀಡಬಾರದು. ಪಕ್ಷ ಇದ್ದರೆ ನಾನು, ಇನ್ನೊಬ್ಬರು. ಪಕ್ಷ ಇಲ್ಲದಿದ್ದರೆ ಉತ್ತರಾಧಿಕಾರಿಯೂ ಇರಲ್ಲ, ದಕ್ಷಿಣಾಧಿಕಾರಿಯೂ ಇರಲ್ಲ
ಎಂದು ಅಸಮಾಧಾನ ವ್ಯಕ್ತಪಡಿಸಿದರು.