SUDDIKSHANA KANNADA NEWS/ DAVANAGERE/ DATE:10-04-2023
ದಾವಣಗೆರೆ (DAVANAGERE): ಮೀಸಲಾತಿ ಸಂಬಂಧ ಸದಾಶಿವ ಆಯೋಗ ನೀಡಿರುವ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಬಂಜಾರ ಸಂರಕ್ಷಣ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ (PROTEST) ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತ, ಗಾಂಧಿನಗರ ವೃತ್ತದ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರವು ಬಂಜಾರ ಸಮುದಾಯದ ಮೀಸಲಾತಿ ಕಸಿದಿದೆ. ಒಳಮೀಸಲಾತಿಯಿಂದ ಯಾವುದೇ ಲಾಭವಿಲ್ಲ. ಹಾಗಾಗಿ ಕೂಡಲೇ ಸದಾಶಿವ ಆಯೋಗದ ವರದಿ ತಿರಸ್ಕರಿಸಬೇಕು. ಒಳಮೀಸಲಾತಿ ರದ್ದುಗೊಳಿಸಬೇಕು.
ಈ ಹಿಂದೆ ನೀಡುತ್ತಿದ್ದ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೊರಮ, ಭೋವಿ, ಕೊರಚ ಹಾಗೂ ಬಂಜಾರ (BANJARA) ಸಮುದಾಯದವರಿಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದಾಗಿ ಅನ್ಯಾಯವಾಗಿದೆ. ಇದು ಅವೈಜ್ಞಾನಿಕವಾಗಿದೆ. ಪರಿಶಿಷ್ಟ ಜಾತಿಗಳ ವರ್ಗೀಕರಣ ಹಂಚಿಕೆ ತೀರ್ಮಾನ
ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಖಂಡನೀಯ. ಭಾರತದ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ಕ್ರಮ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಬಂಜಾರ (BANJARA) ಸಮುದಾಯವು ಒಳಮೀಸಲಾತಿ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕೊರಚ, ಬಂಜಾರ, ಕೊರಮ ಹಾಗೂ ಭೋವಿ ಸಮಾಜವು ಅತ್ಯಂತ ಹಿಂದುಳಿದ ವರ್ಗದ ಜಾತಿಗಳು. ನಾಲ್ಕು ಗುಂಪುಗಳಾಗಿ ವಿಂಗಡಣೆ ಮಾಡಿ ಒಳಮೀಸಲಾತಿ ಹಂಚಿಕೆ ಮಾಡಿರುವುದು ಸರಿಯಾದ ಕ್ರಮ ಅಲ್ಲ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರವು ಒಳಮೀಸಲಾತಿ ಜಾರಿಗೆ ಒಪ್ಪಿಗೆ ನೀಡಬಾರದು. ಒಳಮೀಸಲಾತಿ ಎಂಬುದೇ ಅಸಂವಿಧಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಮತ ಕೇಳಲು ವಿವಿಧ ಪಕ್ಷಗಳ ರಾಜಕೀಯ ನಾಯಕರು ಆಗಮಿಸುತ್ತಾರೆ. ನಮ್ಮ ವಿರುದ್ಧ ನಿರ್ಣಯ ಕೈಗೊಂಡಿರುವ ಪಕ್ಷಕ್ಕೆ ಚುನಾವಣೆಯಲ್ಲಿ ಬ್ಯಾಲೆಟ್ ಪತ್ರದಲ್ಲಿ
ಬಟನ್ ಒತ್ತುವ ಮೂಲಕ ತಕ್ಕ ಪಾಠ ಕಲಿಸಲು ಬಂಜಾರ ಸಮುದಾಯ ನಿರ್ಧರಿಸಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಿನ್ನಸಮುದ್ರ ಶೇಖರ್ ನಾಯ್ಕ್, ಒಕ್ಕೂಟದ ಪ್ರಮುಖರಾದ ನಂಜಾನಾಯ್ಕ, ಲಿಂಗರಾಜನಾಯ್ಕ್, ದ್ಯಾಮನಾಯ್ಕ್ ಚೌವ್ಹಾಣ್, ಗೋಪಿನಾಯ್ಕ್, ರಾಜನಾಯ್ಕ್, ಮಂಜಾನಾಯ್ಕ್, ಲಕ್ಷ್ಮಣ್ ರಾಮವತ್, ಕವಿತಾ ಚಂದ್ರಶೇಖರ್, ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.