SUDDIKSHANA KANNADA NEWS/ DAVANAGERE/ DATE:30-09-2023
ಬೆಂಗಳೂರು(Bangalore): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ಮೂರು ಡಿಸಿಎಂ ಸ್ಥಾನದ ಅಸ್ತ್ರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣವನ್ನು ತಾತ್ಕಾಲಿಕವಾಗಿ ‘ಸೈಲೆಂಟ್ ಮೋಡ್’ನಲ್ಲಿಟ್ಟಿತ್ತಾದರೂ, ಇದೀಗ ಮತ್ತೆ ಬಿ.ಕೆ. ಹರಿಪ್ರಸಾದ್ ಅವರ ರೀ ಎಂಟ್ರಿಯಿಂದ ಕಾಂಗ್ರೆಸ್ನಲ್ಲಿ ಬಣಗಳ ಕಿತ್ತಾಟಕ್ಕೆ ಅಡೆತಡೆಯೇ ಇಲ್ಲ. ಕಾವೇರಿ ವಿಚಾರವನ್ನು ನಿಭಾಯಿಸಲು ವಿಫಲವಾಗಿರುವ ಅಸಮರ್ಥ ಮುಖ್ಯಮಂತ್ರಿಯ ವಿರುದ್ಧ ಕಾಂಗ್ರೆಸ್ಸಿಗರಲ್ಲೇ ಈಗಾಗಲೆ ಒಡಕು ಮೂಡಿದೆ ಎಂದು ಬಿಜೆಪಿ ಕುಟುಕಿದೆ.
Read Also This Story:
Davanagere: ಎಡಪಂಥೀಯ ಸಾಹಿತಿಗಳಿಗೆ ಬೆದರಿಕೆ ಪತ್ರ: ದಾವಣಗೆರೆಯ ಜಾಲಿನಗರದ ಆರೋಪಿ ಸೆರೆ, ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟ ಸತ್ಯವೇನು…?
ಈ ಸಂಬಂಧ ಟ್ವೀಟ್ ಗಳ ಮೇಲೆ ಟ್ವೀಟ್ ಮಾಡಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ, ಕಾಂಗ್ರೆಸ್ಸಿಗರ ಕಿತ್ತಾಟ ಮರದ ಹನಿ ನಿಂತರೂ ಬಣ ಜಗಳ ನಿಲ್ಲುವುದಿಲ್ಲ ಎಂದು ಟೀಕಿಸಿದೆ.
ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲು ಗೌಡ-ಲಿಂಗಾಯತ-ಬ್ರಾಹ್ಮಣ ಸಮುದಾಯದ ಅಧಿಕಾರಿಗಳನ್ನು ಕಡೆಗಣಿಸಿದ್ದ ಸಿದ್ದರಾಮಯ್ಯ ಈಗಲೂ ಅದನ್ನೇ ಮುಂದುವರಿಸಿದ್ದಾರೆ, ಅದರಲ್ಲಿಯೂ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪರವರು ಹೇಳುವ ಮೂಲಕ ಸಿದ್ದರಾಮಯ್ಯರವರ ಜಾತಿ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದೆ.
ಚುನಾವಣೆ ಸಮಯದಲ್ಲಿ ಲಿಂಗಾಯಿತರೆಲ್ಲರೂ ಭ್ರಷ್ಟರೆಂಬಂತೆ ಹೇಳಿದ್ದ ಸಿದ್ದರಾಮಯ್ಯರವರು, ಈಗ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿ, ಆ ಸಮುದಾಯದ ವಿರುದ್ಧ ಹಗೆ ಸಾಧಿಸುತ್ತಿರುವುದು ದುರಂತ ಎಂದು ಬಿಜೆಪಿ ಹೇಳಿದೆ.
ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಉಪಕಾರ ಮಾಡಿದ ಕೇಂದ್ರ ಸರ್ಕಾರವನ್ನೇ ದೂಷಿಸುವ ಸಿದ್ದರಾಮಯ್ಯರವರು ಮೇಕೆದಾಟು ಯೋಜನೆಗೆ ತಮ್ಮ ಆಪ್ತರಾದ ಸ್ಟಾಲಿನ್ ಜತೆ ಮಾತನಾಡಿ ಅವರಿಂದ ಅನುಮತಿ ಪಡೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರ ಹಿಡನ್ ಅಜೆಂಡಾ ಈ ವಿಡಿಯೋದಲ್ಲಿ ಬಯಲಾಗಿದೆ.
ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಮತ್ತು ಅದರಲ್ಲಿ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುವುದು ಕಾಂಗ್ರೆಸ್ ಪಕ್ಷದ ಜನ್ಮತಃ ಗುಣ. ಈಗ ನಡೆಯುತ್ತಿರುವ ಕಾವೇರಿ ವಿಚಾರದಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತಾಸಕ್ತಿಯತ್ತ ಗಮನ ಹರಿಸದೆ, ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡಿ, ಆ ತಪ್ಪುಗಳನ್ನು ಬೇರೆಯವರ ಮೇಲೆ ಹೊರಿಸುವ ಸಣ್ಣತನದ ರಾಜಕೀಯವನ್ನು ಮಾಡುತ್ತಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಂಡಿಸದೆ ಅನೇಕ ವಿಷಯಗಳನ್ನು ಉದ್ದೇಶಪೂರ್ವಕವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ ಎಂದು ಆರೋಪಿಸಿದೆ.
ರಾಜ್ಯದಲ್ಲಿ 103 ವರ್ಷಗಳ ಬಳಿಕ ಅತ್ಯಂತ ಭೀಕರ ಬರ ಬಂದಿದ್ದು, ಕಾವೇರಿ ಕೊಳ್ಳದ 34 ತಾಲೂಕುಗಳಲ್ಲಿ 32 ತಾಲೂಕುಗಳು ಅತಿ ಹೆಚ್ಚು ಬರಪೀಡಿತವಾಗಿವೆ ಎಂಬುದನ್ನು ರಾಜ್ಯ ಸರ್ಕಾರವೇ ಹೇಳಿದೆ. ರಾಜ್ಯದಲ್ಲಿ ಈ ಬಾರಿ ಶೇ. 60 ಕ್ಕಿಂತಲೂ ಜಾಸ್ತಿ ಮಳೆ ಕೊರತೆಯಾಗಿದೆ. ಕಾವೇರಿ ಕೊಳ್ಳದಲ್ಲಿ ರಾಜ್ಯದ ಬೇಡಿಕೆ ಪ್ರಮಾಣ ಒಟ್ಟು 106 ಟಿಎಂಸಿ. ಆದರೆ ಈ ಬಾರಿ ಶೇಖರಣೆಯಾಗಿರುವುದು ಕೇವಲ 50 ಟಿಎಂಸಿ ನೀರು ಮಾತ್ರ ಎಂದು ಮಾಹಿತಿ ನೀಡಿದೆ.
ರಾಜ್ಯ ಪ್ರತಿ ಬಾರಿ ಅತಿ ಹೆಚ್ಚು ನಂಬಿಕೊಳ್ಳುವುದು ಮುಂಗಾರು ಮಳೆಯನ್ನು. ಈ ಬಾರಿ ಮುಂಗಾರು ಮಳೆ ವಿಫಲವಾಗಿದ್ದಲ್ಲದೇ, ಪ್ರಸ್ತುತ ಮುಂಗಾರು ಮಳೆಯ ಅವಧಿ ಸಹ ಬಹುತೇಕ ಮುಗಿದಿದೆ. ಆದರೆ ತಮಿಳುನಾಡು
ಹೆಚ್ಚು ನಂಬಿಕೊಂಡಿರುವುದು ಹಿಂಗಾರು ಮಳೆಯನ್ನು. ಅಕ್ಟೋಬರ್ 08 ರಿಂದ ತಮಿಳುನಾಡಿನಲ್ಲಿ ಹಿಂಗಾರು ಮಳೆ ಧೋ ಎಂದು ಸುರಿಯುವ ಮುನ್ಸೂಚನೆಯನ್ನು ಅಲ್ಲಿನ ಹವಾಮಾನ ಇಲಾಖೆ ನೀಡಿದೆ ಎಂದು ಬಿಜೆಪಿಯು ಹೇಳಿದೆ.
ಅಲ್ಲಿ ಮಳೆಯಾದಾಗ ಆ ನೀರನ್ನು ವಾಪಸ್ ಪಂಪ್ ಮಾಡಿ ಕರ್ನಾಟಕಕ್ಕೆ ಬಿಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಈಗಾಗಲೇ ದಾಖಲೆಯ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಸಹ ಹಾಹಾಕಾರ ಆರಂಭವಾಗಿದೆ. ಹೀಗಾಗಿ ಕೆ.ಆರ್.ಎಸ್. ನಿಂದ ನೀರು ಬಿಡಲು ಸಾಧ್ಯವೇ ಇಲ್ಲವೆಂದು, ಈ ಎಲ್ಲಾ ಅಂಶಗಳನ್ನು ಒಳಗೊಂಡ ಸಮರ್ಥ ವಾದವನ್ನು ರಾಜ್ಯ ಸರ್ಕಾರ ಮಂಡಿಸಿ, ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದ್ದೇ ಬೇರೆ ಎಂದಿದೆ.
ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿಲ್ಲ, ರಾಜ್ಯದ ಸಂಸದರು ಮಾತನಾಡುತ್ತಿಲ್ಲ ಎಂಬ ತಮ್ಮ ಟೂಲ್ ಕಿಟ್ ಅನ್ನು ಮಾತ್ರ ಸಿದ್ದರಾಮಯ್ಯರವರು ಚಾಚೂ ತಪ್ಪದೆ ಮುಂದುವರೆಸಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮೊನ್ನೆ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಹರಿಸಬೇಕು ಎಂಬ ಆದೇಶವನ್ನು ನೀಡಿದಾಗ ರಾಜ್ಯದ ಸಿಎಂ-ಡಿಸಿಎಂ ಅದನ್ನು ವಿರೋಧಿಸುವ ಬದಲು, ಸ್ವಾಗತಿಸುತ್ತಾರೆಂದರೆ ಕಾವೇರಿ ನೀರನ್ನು ರಾಜ್ಯದಲ್ಲಿ ಉಳಿಸಿಕೊಳ್ಳುವ ಬದಲು, ತಮಿಳುನಾಡಿಗೆ ಹರಿಸುವುದೇ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರಿಗೆ ಅತ್ಯಂತ ಸಂತಸದ ವಿಷಯ ಎಂಬ ಅಸಲಿ ಸತ್ಯ ಅನಾವರಣವಾಗುತ್ತದೆ. ಕಾವೇರಿ ನೀರನ್ನು ಸ್ಟಾಲಿನ್ ನಾಡಿಗೆ ಹರಿಸದಿದ್ದರೆ, ಡಿ.ಎಂ.ಕೆ. ತಮ್ಮ ಮೈತ್ರಿಕೂಟ ತೊರೆಯುತ್ತದೆ ಎಂಬ ಭಯ ಸಹ ಕೈ ನಾಯಕರಿಗೆ ಕಾಡಿರುವ ಸಾಧ್ಯತೆ ಹೆಚ್ಚು. ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ
ಸದಾ ಅನ್ಯಾಯವೆಸಗಿದೆ ಎಂದು ಹೇಳುವ ಮುನ್ನ ಸಿದ್ದರಾಮಯ್ಯರವರು ಒಮ್ಮೆ ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದಜು ಸಲಹೆ ನೀಡಿದೆ.
2018 ರಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ, ಕರ್ನಾಟಕದ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಸಿ, ಕರ್ನಾಟಕದ ಪಾಲಿಗೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರು ಲಭಿಸುವಂತೆ ಮಾಡಿದ್ದು ಕೇಂದ್ರ ಸರ್ಕಾರ. ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ, ಕರ್ನಾಟಕದ ಹಿತ ಕಾಪಾಡಿದೆ ಎಂಬುದಕ್ಕೆ ಇದೇ ಪ್ರಮುಖ ಸಾಕ್ಷಿ. ಕಾವೇರಿ ವಿಚಾರದಲ್ಲಿ ಸದಾ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಒಂದು ಸವಾಲ್. ಮೇಕೆದಾಟು ಹೆಸರಿನಲ್ಲಿ ಈಗಾಗಲೇ ವಾಕಿಂಗ್ ಮಾಡಿ ಮೈಲೇಜು ಗಿಟ್ಟಿಸುವ ನಾಟಕವಾಡಿ ಮುಗಿಸಿದ್ದೀರಿ. ಇನ್ನೆರೆಡು ವಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಹೇಳಿದೆ.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಬರಲೆಂದು ಹಗಲು-ರಾತ್ರಿ ತನು-ಮನ-ಧನ ಅರ್ಪಿಸಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯರವರು ಮತ್ತು ಡಿ. ಕೆ. ಶಿವಕುಮಾರ್ರವರು, ಇನ್ನು ಹದಿನೈದು ದಿನದೊಳಗೆ ತಮಿಳುನಾಡು ಸರ್ಕಾರದ ವತಿಯಿಂದ ಮೇಕೆದಾಟು ಯೋಜನೆಗೆ ನಿರಪೇಕ್ಷಣಾ ಅರ್ಜಿಯನ್ನು ಸಲ್ಲಿಸಲು ಸ್ಟಾಲಿನ್ ಅವರ ಮನವೊಲಿಸಲಿ. ಈ ಮೂಲಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಇರುವ ದೊಡ್ಡ ಅಡೆತಡೆಯೊಂದನ್ನು ಇತ್ಯರ್ಥಗೊಳಿಸಲಿ. ಈ ಕೆಲಸ ಸಿದ್ದರಾಮಯ್ಯರವರು ಮತ್ತು ಡಿ. ಕೆ. ಶಿವಕುಮಾರ್ರವರಿಂದ ಮಾತ್ರ ಸಾಧ್ಯ. ಹೇಗಿದ್ದರೂ ಸದ್ಯ ಸಿದ್ದರಾಮಯ್ಯರವರು, ಡಿ. ಕೆ. ಶಿವಕುಮಾರ್ರವರು ಮತ್ತು ಸ್ಟಾಲಿನ್ರವರು ಒಂದೇ ಬಳ್ಳಿಯ ಹೂಗಳಂತೆ ಗಳಸ್ಯ-ಕಂಠಸ್ಯ ಸ್ನೇಹಿತರಾಗಿದ್ದಾರೆ. ಇವರ ಈ ಸ್ನೇಹ ಕೊಂಚವಾದರೂ ರಾಜ್ಯದ ಹಿತಕ್ಕೆ ಉಪಯೋಗವಾಗಲಿ. ನಾಡಿಗೆ ಒಳಿತಾಗುವ ಈ ಕೆಲಸಕ್ಕೆ ಕಾಂಗ್ರೆಸ್ ಮುಂದಾದರೆ, ಖಂಡಿತವಾಗಿ ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದೆ.