ದಾವಣಗೆರೆ: ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿ ಇವುಗಳ ನೀರು ಮಾಲಿನ್ಯಗೊಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ
ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳ ಬಳಕೆ ನಿಷೇಧಿಸಲಾಗಿದೆ.
READ ALSO THIS STORY: ಸ್ವಯಂ ಉದ್ಯೋಗ, ನೇರಸಾಲ, ಜಮೀನು ಖರೀದಿ ಸೇರಿ ವಿವಿಧ ನಿಗಮಗಳಲ್ಲಿ ಅರ್ಜಿ ಆಹ್ವಾನ: ಸೌಲಭ್ಯಕ್ಕೆ ಬೇಕು ಈ ದಾಖಲೆಗಳು!
ಅದೇ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವುದೇ ರೀತಿಯ ಇತರೆ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗೂ ಅವುಗಳನ್ನು ಮೇಲೆ ತಿಳಿಸಿದ ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅನುಸರಿಸ ಬೇಕಾದ ವಿಧಾನಗಳು:
- ಪ್ರಸಕ್ತ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು
- ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ
- ನೈಸರ್ಗಿಕ ಬಣ್ಣ ಲೇಪಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ
- ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸಂಚಾರಿ ತೊಟ್ಟಿಗಳಲ್ಲಿ ಅಥವಾ ಕಲ್ಯಾಣಿಗಳಲ್ಲಿಯೇ ಗಣೇಶ ಮೂರ್ತಿಗಳ ವಿಸರ್ಜಿಸಬೇಕು.
- ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು.
- ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಸಂಚಾರಿ ತೊಟ್ಟಿಗಳಲ್ಲಿ ಅಥವಾ ಕಲ್ಯಾಣಿಗಳ ಪಕ್ಕದಲ್ಲಿ ಹಸಿಕಸ, ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ
ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು. - ಗಣೇಶಮೂರ್ತಿ ಪ್ರತಿಷ್ಟಾಪನೆ ವೇಳೆ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಯಾವುದೇ ರೀತಿಯ ಧ್ವನಿವರ್ಧಕ ಬಳಕೆ ಸಲ್ಲ
- ಧ್ವನಿಯನ್ನುಂಟು ಮಾಡುವ ಡೋಲು, ತಮ್ಮಟೆ, ಜಾಗಟೆ ಇತ್ಯಾದಿ ಇವುಗಳನ್ನು ತುರ್ತು ಸಮಯವನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ನಿಷೇಧಿಸಲಾಗಿರುತ್ತದೆ.
- ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ನಿಗಧಿತ ಸಮಯದಲ್ಲಿ ಮಾತ್ರ ಸಿಡಿಸಬೇಕು.
- ಗಣೇಶ ಹಬ್ಬದಲ್ಲಿ ರಸ್ತೆ ಮತ್ತು ಚರಂಡಿಗಳಲ್ಲಿ, ಲೋಟ, ಎಲೆ ಎಸೆಯಬೇಡಿ
- ಮನೆಯ ಹತ್ತಿರ ಬರುವ ಸ್ಥಳೀಯ ಸಂಸ್ಥೆಗಳ ಕಸದ ವಾಹನಗಳಿಗೆ ಹಾಕಿ.
- ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಅಲಂಕಾರಕ್ಕಾಗಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಪರಿಸರ ಸ್ನೇಹಿಯಾಗಿ ಆಚರಿಸಬೇಕು.
ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳ ವಿಸರ್ಜನೆಯಿಂದಾಗಿ ಜಲಮೂಲಗಳು ಕಲುಷಿತವಾಗುತ್ತಿದ್ದು, ಅದರಂತೆ ಯಾವುದೇ ರಾಸಾಯನಿಕ ಬಣ್ಣ ಸಹಿತ ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿರುತ್ತದೆ. ಹಾಗೂ ಅವುಗಳ ತಯಾರಿಕೆ, ಸಾಗಾಣಿಕೆ, ಮಾರಾಟ ಸಹ ಮಾಡಬಾರದು. ತಪ್ಪಿದ್ದಲ್ಲಿ, ಜಲಮಾಲಿನ್ಯ ಕಾಯ್ದೆಯನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸದೆ, ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಖರೀದಿಸಿ ಪರಿಸರಯುಕ್ತ ಗೌರಿ ಮತ್ತು ಗಣೇಶ ಹಬ್ಬವನ್ನು ಆಚರಿಸಬೇಕೆಂದು ಅವರು ತಿಳಿಸಿದ್ದಾರೆ.