SUDDIKSHANA KANNADA NEWS/ DAVANAGERE/ DATE:15-03-2025
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿ ದೈಹಿಕ ಹಲ್ಲೆಗೂ ಮುಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಮ್ಮ ಪಕ್ಷದ ಮಧುಗಿರಿ (ಸಂಘಟನಾತ್ಮಕ ಜಿಲ್ಲೆ) ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರ ಮೇಲೆ ಪಿಎಸ್ಐ ಗಾದಿಲಿಂಗಪ್ಪ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಇದನ್ನು ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ನಾಗರಿಕ ಸಮಾಜದಲ್ಲಿ ಶಾಂತಿ ಸಂರಕ್ಷಿಸಲಾಗದ ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ತಮ್ಮ ಪೊಲೀಸ್ ರೌದ್ರಾವತಾರ ಪ್ರದರ್ಶಿಸಲು ಹೊರಟಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಮುನ್ನ ಅವರ ಸಾಮಾಜಿಕ ಸ್ಥಾನಮಾನವನ್ನೂ ಲೆಕ್ಕಿಸದೆ ಗೂಂಡಾಗಿರಿ ಪ್ರದರ್ಶಿಸುವುದು ಪೋಲಿಸ್ ಇಲಾಖೆಯ ದಕ್ಷತೆಯ ಘನತೆಯನ್ನು ಕಳೆದಂತೆ. ಕಾಂಗ್ರೆಸ್ ಪ್ರಭಾವಿಗಳಿಂದ ಆಯಾ ಕಟ್ಟಿನ ಸ್ಥಾನದಲ್ಲಿ ಕುಳಿತುಕೊಂಡಿರುವ ಕೆಲವು ಪೊಲೀಸ್ ಅಧಿಕಾರಿಗಳು ತಮಗೆ ಯಾರೂ ಏನೂ ಮಾಡಲಾಗದು ಎಂಬ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿದ್ದು ಎಲ್ಲೆಂದರಲ್ಲಿ ತಮ್ಮ ದರ್ಪ ಪ್ರದರ್ಶಿಸುತ್ತಿದ್ದಾರೆ. ಚಿತ್ರದುರ್ಗದ ಘಟನೆಯ ಹಿಂದೆ ರಾಜಕಾರಣದ ಪ್ರಚೋದನೆ ಇರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ಅಧಿಕಾರಸ್ತ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸರು ಇಲಾಖೆಯ ಗೌರವ ಕಳೆಯುತ್ತಿದ್ದಾರೆ
ಎಂದು ಕಿಡಿಕಾರಿದ್ದಾರೆ.
ಚಿತ್ರದುರ್ಗದ ಪಿಎಸ್ಐ ಗಾದಿಲಿಂಗಪ್ಪ ಅವರನ್ನು ಈ ಕೂಡಲೇ ಪೊಲೀಸ್ ಮಹಾನಿರ್ದೇಶಕರು ಅಮಾನತ್ತಿನಲ್ಲಿಡದಿದ್ದರೆ ಬಿಜೆಪಿಯು ನಾಗರಿಕರೊಡಗೂಡಿ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸುತ್ತೇನೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.